School Children Image for representative purpose
ಸುದ್ದಿಗಳು

ದೆಹಲಿ ಮಾಲಿನ್ಯ: ಭೌತಿಕ ತರಗತಿ ಪುನರಾರಂಭ ಪರಿಗಣಿಸಲು ಸಿಎಕ್ಯೂಎಂಗೆ ಸುಪ್ರೀಂ ಸೂಚನೆ

ಆದರೂ ಗಾಳಿಯ ಗುಣಮಟ್ಟ ಸುಧಾರಣೆಯಾಗದೆ ಇದ್ದರೆ ಜಿಆರ್‌ಎಪಿ ನಾಲ್ಕನೇ ಹಂತವನ್ನು ಮೂರು ಇಲ್ಲವೇ ಎರಡನೇ ಹಂತಕ್ಕೆ ಇಳಿಸಲಾಗದು ಎಂದು ನ್ಯಾಯಾಲಯ ತಿಳಿಸಿದೆ.

Bar & Bench

ದೆಹಲಿಯಲ್ಲಿ ವಾಯುಮಾಲಿನ್ಯ ಪರಾಕಾಷ್ಠೆ ತಲುಪಿದ್ದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ವ್ಯಾಪ್ತಿಗೆ ಬರುವ ಎಲ್ಲಾ ರಾಜ್ಯಗಳಲ್ಲಿ (ಎನ್‌ಸಿಆರ್‌) 12ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಭೌತಿಕವಾಗಿ ತರಗತಿಗೆ ಹಾಜರಾಗದಂತೆ ನೀಡಿದ್ದ ಆದೇಶ ಪರಿಶೀಲಿಸುವಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ (ಸಿಎಕ್ಯೂಎಂ) ಸುಪ್ರೀಂ ಕೋರ್ಟ್‌ ಸೋಮವಾರ ಆದೇಶಿಸಿದೆ.  

ಅನೇಕ ವಿದ್ಯಾರ್ಥಿಗಳು ಬಿಸಿಯೂಟ ಯೋಜನೆಯಿಂದ ವಂಚಿತರಾಗುತ್ತಿರುವ ಹಿನ್ನೆಲೆಯಲ್ಲಿ  ಮತ್ತು ವಾಯು ಶುದ್ಧೀಕರಣ ಸಾಧನಗಳು ಮನೆಯಲ್ಲಿ ಇಲ್ಲದೇ ಇರುವುದರಿಂದ ಮನೆಯಲ್ಲಿದ್ದರೂ ಹೊರಗಡೆ ಇದ್ದರೂ ಹೆಚ್ಚು ವ್ಯತ್ಯಾಸ ಇಲ್ಲದಂತಾಗುವುದರಿಂದ ನಿರ್ಧಾರ ಪರಿಶೀಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಹೇಳಿತು. ಈ ಸಂಬಂಧ ಇಂದು ಅಥವಾ ನಾಳೆಯೊಳಗೆ ತೀರ್ಮಾನಕ್ಕೆ ಬರಬೇಕು ಎಂತಲೂ ಅದು ತಿಳಿಸಿತು.

ಶಾಲೆಗಳನ್ನು ತೆರೆಯಲು ಕೋರಿದ್ದ ಕೆಲ ಪೋಷಕರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಅವರ ವಾದ ಪುರಸ್ಕರಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.

ಇತ್ತ, ನಿರ್ಧಾರ ಮರುಪರಿಶೀಲಿಸಬಾರದು ಎಂದು ಹಿರಿಯ ನ್ಯಾಯವಾದಿ ಗೋಪಾಲ್‌ ಶಂಕರನಾರಾಯಣನ್‌ ಪಟ್ಟು ಹಿಡಿದರೂ ಅದನ್ನು ಒಪ್ಪದ ನ್ಯಾಯಾಲಯ ಅಂತರ್ಜಾಲ ಸೌಲಭ್ಯ ಇಲ್ಲದ ಮಕ್ಕಳು ಮನೆಯಲ್ಲಿ ಅಧ್ಯಯನದಲ್ಲಿ ತೊಡಗುವುದು ಹೇಗೆ ಸಾಧ್ಯ ಎಂದು ಆತಂಕ ವ್ಯಕ್ತಪಡಿಸಿತು.

ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಾಲಯ,  ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಸಡಿಲಿಕೆ ಮಾಡಬಹುದು ಎಂದಿತು. ಆದರೆ ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ಯಲು ವಾಹನಗಳನ್ನು ಬಳಸಲಾಗುತ್ತದೆ ಎಂದು ಶಂಕರನಾರಾಯಣನ್‌ ವಾದ ಮುಂದುವರೆಸಿದರು. ಆಗ ನ್ಯಾಯಾಲಯ ಭೌತಿಕ ತರಗತಿ ನಿಷೇಧ ಸಡಿಲಿಕೆ ಕುರಿತು ಆಯೋಗವನ್ನು ಕೇಳುವುದು ಸೂಕ್ತ ಎಂಬುದಾಗಿ ತಿಳಿಸಿತು.

ಇದೇ ವೇಳೆ ನ್ಯಾಯಾಲಯ ಗಾಳಿಯ ಗುಣಮಟ್ಟ ಸುಧಾರಣೆಯಾಗದೆ ಇದ್ದರೆ ಜಿಆರ್‌ಎಪಿ ನಾಲ್ಕನೇ ಹಂತವನ್ನು ಮೂರು ಇಲ್ಲವೇ ಎರಡನೇ ಹಂತಕ್ಕೆ ಇಳಿಸಲಾಗದು ಎಂದು ಎಚ್ಚರಿಕೆ ನೀಡಿದೆ.

ಅಲ್ಲದೆ ಜಿಆರ್‌ಎಪಿ- IV ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರದ ದೆಹಲಿ ಸರ್ಕಾರ ಮತ್ತು ದೆಹಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ಅದು ಆದೇಶಿಸಿದೆ.