Justice Sanjay kishan Kaul and Justice hemant Gupta
Justice Sanjay kishan Kaul and Justice hemant Gupta 
ಸುದ್ದಿಗಳು

[ದೆಹಲಿ ಗಲಭೆ ಜಾಮೀನು ಪ್ರಕರಣ] ಸುದೀರ್ಘವಾಗಿ ಜಾಮೀನು ಮನವಿಯ ವಿಚಾರಣೆ ನಡೆಸಲಾಗದು, ಹೆಚ್ಚು ಸಮಯವಿಲ್ಲ: ಸುಪ್ರೀಂ

Bar & Bench

ಕಡಿಮೆ ಸಮಯವಿದ್ದರೂ ಜಾಮೀನು ಮನವಿಗಳನ್ನು ಸುದೀರ್ಘವಾಗಿ ನಡೆಸುವುದರಿಂದ ಸುಪ್ರೀಂ ಕೋರ್ಟ್‌ಗೆ ಅಡಚಣೆಯಾಗುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯ ಗುರುವಾರ ಹೇಳಿದೆ.

ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಂಜ್ರಾ ತೋಡ್‌ ಕಾರ್ಯಕರ್ತರಾದ ದೇವಂಗನಾ ಕಲಿತಾ, ನತಾಶಾ ನರ್ವಾಲ್‌ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕೇಂದ್ರೀಯ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಆಸಿಫ್‌ ಇಕ್ಬಾಲ್‌ ತನ್ಹಾ ಅವರಿಗೆ ದೆಹಲಿ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಹೇಮಂತ್‌ ಗುಪ್ತ ನೇತೃತ್ವದ ಪೀಠವು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.

“ಜಾಮೀನು ವಿಚಾರಣೆಯು ಅಂತಿಮ ತೀರ್ಪಿನ ವಿಚಾರಣೆಯ ಸ್ವರೂಪದಲ್ಲಿಲ್ಲ. ಜಾಮೀನು ನೀಡಬೇಕೆ ಅಥವಾ ನೀಡಬಾರದೆ ಎಂಬುದಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ನಿರ್ಧಾರ ಕೈಗೊಳ್ಳಬೇಕು. ಇದು ಹಲವು ಸಂದರ್ಭದಲ್ಲಿ ನಮಗೆ ಸಮಸ್ಯೆ ಉಂಟು ಮಾಡಿದೆ. ವಿಚಾರಣಾಧೀನ ನ್ಯಾಯಾಲಯ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸುದೀರ್ಘವಾಗಿ ಜಾಮೀನು ಮನವಿಯ ವಿಚಾರಣೆ ನಡೆಸಲಾಗುತ್ತದೆ. ಇಲ್ಲಿ ಹಾಗೆ ಮಾಡಲಾಗದು. ಈ ವಿಚಾರವನ್ನು ಕೆಲವೇ ಕೆಲವು ಗಂಟೆಗಳ ಕಾಲ ಮಾತ್ರ ವಿಚಾರಣೆ ನಡೆಸಲು ನಾವು ಸಿದ್ಧವಿದ್ದೇವೆ” ಎಂದು ನ್ಯಾ. ಕೌಲ್‌ ಹೇಳಿದರು.

ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯು 20,000ಕ್ಕೂ ಹೆಚ್ಚು ಪುಟಗಳಿರುವುದರಿಂದ ಅದನ್ನು ಮುದ್ರಿಸುವ ಅನುಕೂಲ ಸದ್ಯಕ್ಕಿಲ್ಲ. ಹೀಗಾಗಿ ಕಾಲಾವಕಾಶ ನೀಡುವಂತೆ ಪ್ರತಿವಾದಿಗಳ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಕೋರಿದರು. ಈ ಹಿನ್ನೆಲೆಯಲ್ಲಿ ಪೀಠ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು. ಆರೋಪಪಟ್ಟಿಯನ್ನು ಪೆನ್‌ ಡ್ರೈವ್‌ ಮೂಲಕ ದಾಖಲೆಯಲ್ಲಿ ಸಲ್ಲಿಸುವಂತೆ ಪೀಠ ಆದೇಶಿಸಿತು.

ಕಲಿತಾ, ನರ್ವಾಲ್‌ ಮತ್ತು ತನ್ಹಾಗೆ ನೀಡಲಾಗಿರುವ ಜಾಮೀನು ರದ್ದುಪಡಿಸಬೇಕೆ ಅಥವಾ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಕುರಿತು ದೆಹಲಿ ಹೈಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯದ ಬಗ್ಗೆ ಪ್ರತ್ಯೇಕ ನಿಲುವು ಹೊಂದಲಾಗಿದೆಯೇ ಎಂದು ಪೀಠವು ದೆಹಲಿ ಪೊಲೀಸರನ್ನು ಪ್ರಶ್ನಿಸಿತು.

ಎರಡನ್ನು ಪ್ರಶ್ನಿಸಿರುವುದಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅಮನ್‌ ಲೇಖಿ ಹೇಳಿದರು.

ಹೈಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಉಲ್ಲೇಖಿಸಿದ ಪೀಠವು “ಜಾಮೀನು ವಿಚಾರಗಳಲ್ಲಿ ಮೇಲ್ನೋಟಕ್ಕೆ ಎಲ್ಲಾ ವಿಚಾರಗಳನ್ನು ಪರಿಶೀಲಿಸಬೇಕು. ಅಂತಿಮವಾಗಿ ಅವೆಲ್ಲವೂ ಅಭಿಪ್ರಾಯಗಳಷ್ಟೆ. ಅದೆಲ್ಲವನ್ನೂ ನಾವು ಹೇಳುವಂತೆ ನೀವು ಮಾಡುತ್ತಿದ್ದೀರಿ. ನೀವು ನನ್ನನ್ನು ಮಾತನಾಡಲು ಬಿಡುತ್ತಿಲ್ಲ. ನಾನು ಏನೋ ಹೇಳಬೇಕು ಎಂದುಕೊಂಡಿದ್ದೇನೆ. ಆದರೆ, ಅದನ್ನು ಕೇಳಲು ಸಿದ್ಧರಿಲ್ಲ. ಪ್ರಕರಣವನ್ನು ಪ್ರತ್ಯೇಕಿಸಲು ನಾನು ಚಿಂತಿಸುತಿದ್ದೇನೆ. ಒಂದು ಜಾಮೀನಿನ ವಿಚಾರ. ಮತ್ತೊಂದು ಅಭಿಪ್ರಾಯಗಳ ವಿಚಾರವಾಗಿದೆ. ನಿಮಗೆ ಯಾವುದು ಸಮಸ್ಯೆ ಊಂಟು ಮಾಡಿದೆ ಎಂಬುದನ್ನು ನಾನು ಅರಿಯಬೇಕಿದೆ” ಎಂದು ನ್ಯಾಯಮೂರ್ತಿಗಳು ಹೇಳಿದರು.

“ಜಾಮೀನು ಮನವಿ ವಿಚಾರಣೆ ನಡೆಸುವಾಗ ಕಾನೂನಿನ ನಿಬಂಧನೆಯನ್ನು ಅಳಿಸಿ ಹಾಕಲಾಗದು” ಎಂದು ಇದೇ ಸಂದರ್ಭದಲ್ಲಿ ನ್ಯಾ. ಕೌಲ್‌ ಹೇಳಿದರು.