ಐದು ವರ್ಷಗಳ ಹಿಂದೆ ಅಂದರೆ 2020ರಲ್ಲಿ ನಡೆದಿದ್ದ ಈಶಾನ್ಯ ದೆಹಲಿ ಗಲಭೆ ಪ್ರಕರಣದ ಪಿತೂರಿಯ ಕುರಿತು ದೆಹಲಿ ಪೊಲೀಸರು ನಡೆಸಿದ ತನಿಖೆಯ ಬಗ್ಗೆ ದೆಹಲಿ ನ್ಯಾಯಾಲಯ ಗಂಭೀರ ಪ್ರಶ್ನೆಗಳನ್ನು ಎತ್ತಿದೆ [ಮೊಹಮ್ಮದ್ ಇಲ್ಯಾಸ್ ಮತ್ತು ರಾಜ್ಯ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .
ಗಲಭೆಗಳು ಪೌರತ್ವ ತಿದ್ದುಪಡಿ (ಸಿಎಎ) ವಿರೋಧಿ ಪ್ರತಿಭಟನಾಕಾರರ ಪೂರ್ವಯೋಜಿತ ಪಿತೂರಿ ಎಂಬ ಪೊಲೀಸರ ಸಿದ್ಧಾಂತ ರೂಪುಗೊಳ್ಳಲು ಹಲವು ಪ್ರಶ್ನಾರ್ಹ ಊಹೆಗಳು, ಕಲ್ಪನೆಗಳು, ವ್ಯಾಖ್ಯಾನಗಳು ಕಾರಣವಾಗಿವೆ ಎಂದು ರೌಸ್ ಅವೆನ್ಯೂ ನ್ಯಾಯಾಲಯದ ಎಜೆಎಂ ವೈಭವ್ ಚೌರಾಸಿಯಾ ಹೇಳಿದರು.
ಒಮ್ಮೆ ಈ ನ್ಯೂನತೆ ವಿವರಿಸಿದ ಬಳಿಕ ಸಿದ್ಧಾಂತ ಮಸುಕಾಗುತ್ತದೆ ಪ್ರಾಸಿಕ್ಯೂಷನ್ ಸತ್ಯ ಅರ್ಥೈಸಲು ಮುಂದಾಗುವ ದೃಷ್ಟಿಕೋನ ಕೂಡ ಮಂದವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಸಿಎಎ ವಿರೋಧಿ ಪ್ರತಿಭಟನೆಗಳು ಸಹಜವಲ್ಲ, ಬದಲಾಗಿ ನಗರದಲ್ಲಿ ಸಾಮೂಹಿಕ ಹಿಂಸಾಚಾರವನ್ನು ಉಂಟುಮಾಡುವ ತಂತ್ರ ಎಂದು ಪೊಲೀಸರು ವಾದಿಸಿದ್ದರು.
ಆದರೆ, ತಾವು ಸಂಯಮದಿಂದ ವರ್ತಿಸಲು ಮತ್ತು ಸಾಮೂಹಿಕ ಹಿಂಸಾಚಾರವನ್ನು ಕಾರ್ಯಗತಗೊಳಿಸಲು ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಮಹಿಳೆಯರನ್ನು ಮುಂದೆ ಬಿಡಲಾಗಿತ್ತು ಎಂಬ ವಾದ ಸೇರಿದಂತೆ ದೆಹಲಿ ಪೊಲೀಸರ ಹಲವಾರು ವ್ಯಾಖ್ಯಾನಗಳನ್ನು ವಿಭಿನ್ನವಾಗಿ ಅರ್ಥೈಸಬಹುದು ಎಂದು ನ್ಯಾಯಾಧೀಶ ಚೌರಾಸಿಯಾ ಹೇಳಿದರು.
ಪ್ರಾಸಿಕ್ಯೂಷನ್ ವಾದವೇ ಸರಿ ಎಂದಿಟ್ಟುಕೊಳ್ಳೋಣ, ಆಗ ಸಾಮೂಹಿಕ ಹಿಂಸಾಚಾರಕ್ಕೆ ತಯಾರಿ ನಡೆಸುತ್ತಿರುವ ಯಾವುದೇ ಸಮುದಾಯ ಜಾತಿ, ಪಂಥ, ಧರ್ಮದ (ಪ್ರಾಸಿಕ್ಯೂಷನ್ ಕೋಮುವಾದದ ಅರ್ಥಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿರುವುದರಿಂದ ನಾನು ಇದನ್ನು ಹೇಳಬೇಕಿದೆ) ಹಿಂಸಾಚಾರ ಭುಗಿಲೆದ್ದಾಗ ಅಪಾಯಕ್ಕೆ ಸಿಲುಕುವಂತಹ ಮಹಿಳೆಯರೇ ನೇತೃತ್ವ ವಹಿಸುತ್ತಾರೆ ಎಂದು ನಂಬುವುದು ವಿಚಿತ್ರವಾಗಿದೆ ಎಂದು ನ್ಯಾಯಾಲಯ ಹೇಳಿತು.
ಗಲಭೆಗೆ ಒಂದು ದಿನ ಮೊದಲು ಬಿಜೆಪಿ ನಾಯಕ ಮತ್ತು ದೆಹಲಿಯ ಕಾನೂನು ಸಚಿವ ಕಪಿಲ್ ಮಿಶ್ರಾ ಅವರು ಈಶಾನ್ಯ ದೆಹಲಿಯಲ್ಲಿದ್ದರು. ಆಗಿನ ಪೊಲೀಸ್ ಉಪ ಆಯುಕ್ತ (ಡಿಸಿಪಿ) ವೇದ್ ಪ್ರಕಾಶ್ ಸೂರ್ಯ ಅವರೊಂದಿಗೆ ಸಂಭಾಷಣೆ ನಡೆಸಿದ್ದರು. ನಂತರ ಪೊಲೀಸ್ ಅಧಿಕಾರಿ ಪ್ರತಿಭಟನೆಗಾಗಿ ಜೀವವನ್ನೇ ತೆರಬೇಕಾದೀತು ಎಂದು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದರು ಎಂಬುದನ್ನು ನ್ಯಾಯಾಲಯ ಗಮನಿಸಿತು.
ಬಿಜೆಪಿ ನಾಯಕ (ದೆಹಲಿಯ ಹಾಲಿ ಕಾನೂನು ಸಚಿವ) ಕಪಿಲ್ ಮಿಶ್ರಾ ನಾವು- ತಾವು ಎಂಬ ವಿಭಜಕ ವಾತಾವರಣ ಸೃಷ್ಟಿಸಿದರು. ಆದರೆ ಪೊಲೀಸರು ನೀಡಿರುವ ಸಿಎಎ ವಿರೋಧಿ ಪ್ರತಿಭಟನಾಕಾರರ ಸಂದೇಶಗಳಲ್ಲಿ ಹಿಂದೂ ವಿರೋಧಿ ಹೇಳಿಕೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.