Umar Khalid, Khalid Saifi
Umar Khalid, Khalid Saifi  
ಸುದ್ದಿಗಳು

ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್ ಬಿಡುಗಡೆಗೊಳಿಸಿದ ದೆಹಲಿ ನ್ಯಾಯಾಲಯ: ಆದರೂ ಸದ್ಯಕ್ಕಿಲ್ಲ ಜೈಲಿನಿಂದ ಮುಕ್ತಿ

Bar & Bench

ದೆಹಲಿಯ ಪಿಎಸ್ ಖಜೂರಿ ಖಾಸ್‌ ಪ್ರದೇಶದಲ್ಲಿ ನಡೆದಿದ್ದ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ನಾಯಕರುಗಳಾದ ಉಮರ್ ಖಾಲಿದ್, ಖಾಲಿದ್ ಸೈಫಿ ಅವರನ್ನು ನಗರದ ಕಡ್‌ಕಡ್‌ಡೂಮ ನ್ಯಾಯಾಲಯ ಶನಿವಾರ ಬಿಡುಗಡೆ ಮಾಡಿದೆ [ಸರ್ಕಾರ ಮತ್ತು  ಮೊಹಮ್ಮದ್. ತಾಹಿರ್ ಹುಸೇನ್ ಇನ್ನಿತರರ ನಡುವಣ ಪ್ರಕರಣ].

ಐವರು ಆರೋಪಿಗಳಾದ ಉಮರ್ ಖಾಲಿದ್, ಖಾಲಿದ್ ಸೈಫಿ, ಜಾಗರ್ ಖಾನ್, ಮೊಹಮ್ಮದ್ ಇಲಿಯಾಸ್ ಹಾಗೂ ತಾರಿಕ್ ಮೊಯಿನ್ ರಿಜ್ವಿ ಅವರನ್ನು ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ಬಿಡುಗಡೆ ಮಾಡಿದರು. ಪ್ರಕರಣದಲ್ಲಿ ಒಬ್ಬರ ಶ್ಯೂರಿಟಿಯೊಂದಿಗೆ ರೂ.10,000/- ಬಾಂಡ್ ನೀಡುವಂತೆ ನ್ಯಾಯಾಧೀಶರು ಸೂಚಿಸಿದರು.ಎಫ್‌ಐಆರ್ ಸಂಖ್ಯೆ 101/2020ರಲ್ಲಿ,  ಐಪಿಸಿ  ಅಡಿ ಗಲಭೆ, ಕ್ರಿಮಿನಲ್ ಪಿತೂರಿ ಮತ್ತು ಇತರ ಅಪರಾಧಗಳ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು.

ಚಾಂದ್ ಬಾಗ್ ಪುಲಿಯಾ ಬಳಿಯ ಮುಖ್ಯ ಕರವಾಲ್ ನಗರ ರಸ್ತೆಯಲ್ಲಿ ಫೆಬ್ರವರಿ 24, 2020ರಂದು ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ಪ್ರಕರಣವು ಪ್ರಮುಖ ಆರೋಪಿ ತಾಹಿರ್ ಹುಸೇನ್  ಮನೆಯ ಸುತ್ತ ನಡೆದ ಗಲಭೆಗೆ ಸಂಬಂಧಿಸಿದ್ದಾಗಿದೆ. ಪ್ರಸ್ತುತ ಪ್ರಕರಣದಲ್ಲಿ, ಖಾಲಿದ್‌ ಅವರಿಗೆ ಏಪ್ರಿಲ್ 15, 2021ರಂದು ಜಾಮೀನು ನೀಡಲಾಗಿತ್ತು.

"ಭಿನ್ನಾಭಿಪ್ರಾಯವನ್ನು ಮುಚ್ಚಿಹಾಕಲು ರಾಜಕೀಯ ಸೇಡಿನ ಕಾರಣಕ್ಕೆ ತನಿಖಾ ಸಂಸ್ಥೆ  ಪ್ರಕರಣದಲ್ಲಿ ಸುಮ್ಮನೆ ತನ್ನನ್ನು ಸಿಲುಕಿಸಿದೆ. ಘಟನೆಯ ದಿನಾಂಕದಂದು ಅವರು ಅಪರಾಧದ ಸ್ಥಳದಲ್ಲಿ ಇರಲಿಲ್ಲ. ತಾಹಿರ್ ಹುಸೇನ್ ಮತ್ತು ತಮ್ಮ ನಡುವೆ ಯಾವುದೇ ಸಭೆ ನಡೆದಿರುವುದನ್ನು ಸಾಬೀತುಪಡಿಸುವಂತಹ ಸಾಕ್ಷ್ಯಗಳು ಲಭಿಸಿಲ್ಲ” ಎಂದು ಖಲೀದ್, ತಮ್ಮ ವಕೀಲರ ಮೂಲಕ, ವಾದಿಸಿದರು.

ಆದರೆ ಯುಎಪಿಎ  ಪ್ರಾಸಿಕ್ಯೂಷನ್‌ “ಇತರೆ ಸಮುದಾಯದ ವ್ಯಕ್ತಿ ಮತ್ತು ಆಸ್ತಿಗಳಿಗೆ ಗರಿಷ್ಠ ಧಕ್ಕೆ ತರುವ ಸಾಮಾನ್ಯ ಉದ್ದೇಶ ಆರೋಪಿಗಳಿಗೆ ಇತ್ತು ಎಂದು  ಹೇಳಿಕೊಂಡಿದೆ. ಪ್ರಕರಣದಲ್ಲಿ ಸಹ ಆರೋಪಿಗಳು ಖಾಲಿದ್‌ಗೆ ಚೆನ್ನಾಗಿ ತಿಳಿದಿದ್ದ ಕಾರಣ ಎಲ್ಲರೂ ಒಗ್ಗೂಡಿ ಕೃತ್ಯ ಎಸಗಿದಂತೆ ಕಂಡುಬಂದಿದೆ” ಎಂದು ವಾದಿಸಿತ್ತು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಖಾಲಿದ್‌ ಹಾಗೂ ಇತರ ನಾಲ್ವರನ್ನು ಬಿಡುಗಡೆ ಮಾಡಿತು. ಆದರೆ ಯುಎಪಿಎ ಮತ್ತು ಐಪಿಸಿ ಅಡಿಯಲ್ಲಿ ಕ್ರಿಮಿನಲ್‌ ಪಿತೂರಿ ಹಾಗೂ ಉಳಿದ ಅಪರಾಧಗಳಿಗೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ತಾಹಿರ್‌ ಹುಸೇನ್‌ ಹಾಗೂ ಇತರೆ ಹತ್ತು ಮಂದಿಯ ವಿಚಾರಣೆ ನಡೆಸುವಂತೆ ನ್ಯಾಯಾಲಯ ಸೂಚಿಸಿತು.

ಡಿಸೆಂಬರ್ 17ರಂದು ಆರೋಪ ನಿಗದಿಗೆ ಮತ್ತು ದಾಖಲೆಗಳನ್ನು ಒದಗಿಸಲು ನಿರಾಕರಿಸಿರುವುದರ ಸಂಬಂಧ ನ್ಯಾಯಾಧೀಶರು ವಿಚಾರಣೆ ನಿಗದಿಪಡಿಸಿದ್ದಾರೆ.  

"ಆರೋಪ ನಿಗದಿ ಮತ್ತು ದಾಖಲೆಗಳನ್ನು ಒದಗಿಸಲು ನಿರಾಕರಿಸಿರುವುದರ ಸಂಬಂಧ ಆರೋಪಿಗಳಾದ ಮೊಹಮ್ಮದ್ ತಾಹಿರ್ ಹುಸೇನ್, ಖಾಲಿದ್ ಸೈಫಿ ಮತ್ತು ಉಮರ್ ಖಾಲಿದ್ ಅವರನ್ನು 17.12.2022 ರಂದು ಮುಂದಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ವಾರಂಟ್ ನೀಡಿ” ಎಂದು ಆದೇಶದಲ್ಲಿ ತಿಳಿಸಲಾಗಿದೆ.