ಫೇಸ್‌ಬುಕ್ ವೇದಿಕೆಯು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಪ್ರತಿಫಲಿಸುವಂತಹ ವೇದಿಕೆಯಾಗಿದೆ. ಹೀಗಾಗಿ, ದೆಹಲಿ ಗಲಭೆಯ ವಿಷಯದಲ್ಲಿ ಫೇಸ್‌ಬುಕ್ ನುಣುಚಿಕೊಳ್ಳಲು ಅವಕಾಶ ಮಾಡಿಕೊಡಲಾಗದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ (ಅಜಿತ್ ಮೋಹನ್ ವರ್ಸಸ್ ರಾಷ್ಟ್ರ ರಾಜಧಾನಿ ವಲಯ ದೆಹಲಿಯ ಶಾಸನ ಸಭೆ). ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ದಿನೇಶ್ ಮಹೇಶ್ವರಿ ಹಾಗೂ ಹೃಷಿಕೇಷ್ ರಾಯ್ ಅವರಿದ್ದ ಪೀಠ ಪ್ರಕರಣದ ವಿಚಾರಣೆ ನಡೆಸಿತು.
ಫೇಸ್‌ಬುಕ್ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್ ಅವರು ದೆಹಲಿ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಶಾಸನ ಸಭೆಯ ‘ಶಾಂತಿ ಮತ್ತು ಸಾಮರಸ್ಯ ಸಮಿತಿ’ಯು ತಮಗೆ ನೀಡಿರುವ ನೋಟಿಸ್‌ಗಳನ್ನು ರದ್ದುಪಡಿಸಬೇಕು ಎಂದು ಕೋರಿರುವುದು ಹಾಗೂ ಸಮಿತಿಗೆ ಶಾಸನಾತ್ಮಕ ಅಧಿಕಾರವಿಲ್ಲದಿರುವ ಬಗ್ಗೆ ಹೇಳಿರುವುದು ಪ್ರತಿವಾದಿಗಳು (ದೆಹಲಿ ಶಾಸನ ಸಭೆ) ತಮ್ಮ ಹಕ್ಕನ್ನು ಪರಿಗಣಿಸುವುದನ್ನು ತಡೆಯುವ ಪ್ರಯತ್ನವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ದೆಹಲಿ ಗಲಭೆಗೆ ಸಂಬಂಧಿಸಿದಂತೆ ಫೇಸ್‌ಬುಕ್‌ನ ಯಾವುದೇ ಪಾತ್ರವಿಲ್ಲ ಎನ್ನುವ ವಾದದ ಬಗ್ಗೆಯೂ ಸಹ ನ್ಯಾಯಾಲಯವು ಅಸಮ್ಮತಿ ವ್ಯಕ್ತಪಡಿಸಿತು. “ಅವರು ಇದರಿಂದ ಸಂಪೂರ್ಣವಾಗಿ ಕೈತೊಳೆದುಕೊಳ್ಳಲು (ನುಣುಚಿಕೊಳ್ಳಲು) ಸಾಧ್ಯವಿಲ್ಲ, ಏಕೆಂದರೆ ಇದು ಅವರ ವ್ಯವಹಾರವೇ ಅಗಿದೆ. ತಾವು ಸಮರ್ಥಿಸಿಕೊಳ್ಳುವಷ್ಟು ನಿರುಪದ್ರವಿ ಪಾತ್ರವೇನೂ ಅವರದ್ದಲ್ಲ,” ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿತು.
ಇನ್ನು ವಿಚಾರಣೆ ವೇಳೆ ನ್ಯಾಯಾಲಯವು ರಾಷ್ಟ್ರ ರಾಜಧಾನಿ ದೆಹಲಿಗೆ ಫೆಬ್ರವರಿ 2020ರಲ್ಲಿ ಸಂಭವಿಸಿದಂತಹ ಮತ್ತೊಂದು ಗಲಭೆಯನ್ನು ಸಹಿಸುವ ಶಕ್ತಿ ಇಲ್ಲ ಎಂದಿತು. ಹೀಗಾಗಿಯೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ಪಾತ್ರವೇನು ಎನ್ನುವ ಬಗ್ಗೆ ಪರಿಶೀಲಿಸಬೇಕಿದೆ ಎಂದು ಹೇಳಿತು.
ಅಲ್ಲದೆ, ಶಾಸನಸಭೆಯು ಕೇವಲ ಶಾಸನಾತ್ಮಕ ವಿಚಾರಗಳಿಗೆ ಮಾತ್ರವೇ ಸೀಮಿತವಾಗಬೇಕು ಎನ್ನುವ ಅರ್ಜಿದಾರರ ವಾದವನ್ನು ಒಪ್ಪದ ನ್ಯಾಯಾಲಯವು, “ಹಾಗೆ ಮಾಡುವುದು ಚುನಾಯಿತ ಸಂಸ್ಥೆಯನ್ನು ವಿವೇಚನಾರಹಿತವಾಗಿ ನಿರ್ಬಂದಿಸಿದಂತಾಗುತ್ತದೆ,” ಎಂದಿತು. ಮುಂದುವರೆದು, ಶಾಸನಸಭೆಯು ನೀಡಿರುವ ಅಧಿಕಾರದ ಹೊರತಾದ ಪ್ರಕ್ರಿಯೆಗಳಿಗೆ ಶಾಂತಿ ಮತ್ತು ಸಾಮರಸ್ಯ ಸಮಿತಿಯು ಎಳಸಿಲ್ಲ ಎಂದಾದ ಪಕ್ಷದಲ್ಲಿ ಅದರ ಕಾರ್ಯಕ್ಕೆ ವಿಸ್ತೃತ ಬೆಂಬಲ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟಿತು.
“ಶಾಸನಸಭೆಯನ್ನು ಕೇವಲ ಶಾಸನ ಮಾಡುವ ಕಾರ್ಯಕ್ಕೆ ಮಾತ್ರವೇ ಸೀಮಿತಗೊಳಿಸಬೇಕು ಎನ್ನುವ ತೀರ್ಮಾನಕ್ಕೆ ಬರುವುದು ಗಂಭೀರ ದುರಂತವಾಗುತ್ತದೆ. ಇಂತಹ ವಾದಗಳಿಂದ ಶಾಸಕಾಂಗದ ಪಾತ್ರವನ್ನು ಕುಬ್ಜಗೊಳಿಸಿದಂತಾಗುತ್ತದೆ” ಎಂದು ಪೀಠವು ಅಭಿಪ್ರಾಯಪಟ್ಟಿತು.
ಶಾಸಕಾಂಗವು ಅನೇಕ ವಿಷಯಗಳನ್ನು ಚರ್ಚಿಸುತ್ತದೆ, ಕೆಲವೊಮ್ಮೆ ಇದು ಶಾಸನಭೆಯ ಭಾವನೆಯನ್ನೂ ಪ್ರತಿನಿಧಿಸುತ್ತದೆ. ಇದೇನೂ ರೂಢಿಯಲ್ಲಿಲ್ಲದಿರುವುದಾಗಲಿ, ಪೂರ್ವ ನಿದರ್ಶನ ಇಲ್ಲದಿರುವುದಾಗಲೀ ಅಲ್ಲ ಎಂದು ಹೇಳಿತು.