ತಾನು ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶದ (ಎನ್‌ಸಿಟಿ) ಹೊರಗೆ ಕಾನೂನು ಪ್ರಾಕ್ಟೀಸ್ ಮಾಡಲು ಅವಕಾಶ ನೀಡುವಂತೆ ದೆಹಲಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಮಾಜಿ ಪಾಲಿಕೆ ಸದಸ್ಯೆ ಹಾಗೂ ವಕೀಲೆ ಇಶ್ರತ್ ಜಹಾನ್ ಅವರು ಸಲ್ಲಿಸಿರುವ ಮನವಿಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಪುರಸ್ಕರಿಸಿದೆ.
ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ರಾಷ್ಟ್ರ ರಾಜಧಾನಿ ಪ್ರದೇಶ ತೊರೆಯಬಾರದು ಎಂಬ ಷರತ್ತಿನ ಮೇಲೆ ಅವರಿಗೆ ಮಾರ್ಚ್ 14, 2022 ರಂದು ಜಾಮೀನು ನೀಡಲಾಗಿತ್ತು.
ದೆಹಲಿಯ ಆಚೆ ಕಾನೂನು ಪ್ರಾಕ್ಟೀಸ್ ಮಾಡುವುದನ್ನು ಈ ಷರತ್ತು ನಿರ್ಬಂಧಿಸಿದೆ ಎಂದು ವಿಶೇಷ ನ್ಯಾಯಾಧೀಶ ಸಮೀರ್ ಬಾಜ್‌ಪೇಯ್ ಅವರಿಗೆ ಆಕೆ ತಿಳಿಸಿದರು.
ದೆಹಲಿ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿರುವ ತಾನು ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದಾಚೆ ಕಾನೂನು ಪ್ರಾಕ್ಟೀಸ್ ಮಾಡಲು ಉತ್ಸುಕಳಾಗಿರುವುದಾಗಿ ಹೇಳಿದರು. ತಾನು ಯಾವುದೇ ಜಾಮೀನು ಷರತ್ತು ಉಲ್ಲಂಘಿಸಿಲ್ಲ ಮತ್ತು ಸದಾ ನ್ಯಾಯಾಲಯದ ಆದೇಶ ಪಾಲಿಸಿದ್ದಾಗಿ ವಾದಿಸಿದರು.
ವಿಶೇಷ ಪ್ರಾಸಿಕ್ಯೂಟರ್ ಅವರು ಇಶ್ರತ್ ಅವರ ಮನವಿಯನ್ನು ವಿರೋಧಿಸಿದರು, ಇಶ್ರತ್ ಈಗಾಗಲೇ ಸೂಕ್ತ ಸ್ವಾತಂತ್ರ್ಯ ಹೊಂದಿದ್ದು ಹಿಂದಿನ ನಡೆಗಳನ್ನು ಪರಿಗಣಿಸಿ ಅವರಿಗೆ ಹೆಚ್ಚಿನ ಪರಿಹಾರ ನೀಡಬಾರದು ಎಂದರು.
ಆದರೆ ಜಹಾನ್ ಜಾಮೀನು ಷರತ್ತು ಉಲ್ಲಂಘಿಸಿರುವುದನ್ನು ತನಿಖಾ ಸಂಸ್ಥೆ ಇಲ್ಲವೇ ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯದ ಗಮನಕ್ಕೆ ತಂದಿಲ್ಲ ಎಂಬ ಅಂಶವನ್ನು ಪರಿಗಣಿಸಿ ಅರ್ಜಿದಾರರು ಕೋರಿರುವಂತೆ ಷರತ್ತನ್ನು ಮಾರ್ಪಡಿಸುವುದು ನ್ಯಾಯಯುತ ಮತ್ತು ಸೂಕ್ತ ಎಂದು ನ್ಯಾಯಾಲಯ ತಿಳಿಸಿತು.
ಈ ಹಿನ್ನೆಲೆಯಲ್ಲಿ ಅರ್ಜಿದಾರೆ ಪೂರ್ವಾನುಮತಿ ಇಲ್ಲದೆ ಭಾರತ ತೊರೆಯುವಂತಿಲ್ಲ ಅಥವಾ ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗುವಂತಿಲ್ಲ ಎಂದು ಸೂಚಿಸಿ ಷರತ್ತನ್ನು ಮಾರ್ಪಡಿಸಿತು.
ಇಶ್ರತ್ ಅವರ ಪರವಾಗಿ ವಕೀಲರಾದ ಆದಿಲ್ ಸಿಂಗ್ ಬೋಪರಾಯ್ ಮತ್ತು ಸೃಷ್ಟಿ ಖನ್ನಾ ವಾದ ಮಂಡಿಸಿದರು. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್, ವಕೀಲರಾದ ಚನ್ಯಾ ಜೇಟ್ಲಿ ಹಾಗೂ ನಿನಾಜ್ ಬಲ್ದವಾಲಾ ವಾದ ಮಂಡಿಸಿದರು.
ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಶ್ರತ್ ಅವರನ್ನು ಮಾರ್ಚ್ 2020ರಲ್ಲಿ ಐಪಿಸಿ, ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯಿದೆ, ಶಸ್ತ್ರಾಸ್ತ್ರ ಕಾಯಿದೆ, ಯುಎಪಿಎ ಅಡಿಯಲ್ಲಿ ಬಂಧಿಸಲಾಗಿತ್ತು. ಬಳಿಕ ಆಕೆ ವಿಶೇಷ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು.