ದೆಹಲಿ ಗಲಭೆಗಳ ವೇಳೆ ಫೈಜಾನ್ ಎನ್ನುವ ಮುಸ್ಲಿಂ ಯುವಕನನ್ನು ರಾಷ್ಟ್ರಗೀತೆ ಹಾಡುವಂತೆ ಹೇಳಿ ಮನಬಂದಂತೆ ಥಳಿಸಿ ಕೊಂದ ದೆಹಲಿ ಪೊಲೀಸರ ಮೇಲಿನ ತನಿಖೆಗೆ ಸಂಬಂಧಿಸಿದ ಪ್ರಕರಣ ತೆವಳುತ್ತಾ ಸಾಗುತ್ತಿರುವ ಬಗ್ಗೆ ದೆಹಲಿ ಹೈಕೋರ್ಟ್ ಮಂಗಳವಾರ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ [ಕಿಸ್ಮತುನ್ ವರ್ಸಸ್ ದೆಹಲಿ ಸರ್ಕಾರ].
ಪ್ರಕರಣದ ತನಿಖೆಯ ಕುರಿತ ಸ್ಥಿತಿಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ದೆಹಲಿ ಪೊಲೀಸರ ನಡೆಗೆ ನ್ಯಾ. ಮುಕ್ತಾ ಗುಪ್ತ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಇದು ಎಲ್ಲಿಗೂ ಸೇರದ ವರದಿ ಎಂದರು. "ಐವರು ಯುವಕರ ಮೇಲೆ ಹಲ್ಲೆ ಮಾಡಲಾಗಿದೆ. ಒಬ್ಬ ಹತನಾಗಿದ್ದು, ನಾಲ್ವರು ಬದುಕುಳಿದಿದ್ದಾರೆ. ಈ ಪ್ರಕರಣದಲ್ಲಿ ಯಾವೊಬ್ಬ ಪ್ರತ್ಯಕ್ಷ ಸಾಕ್ಷಿಯ ನೆರವನ್ನೂ ನೀವು ಪಡೆದಿಲ್ಲ, ಆದರೆ ಜಗತ್ತೆಲ್ಲಾ ಸುತ್ತಿದ್ದೀರಿ," ಎಂದು ಗುಪ್ತಾ ಕಣ್ಣಮುಂದೇ ಇರುವ ಸಾಕ್ಷ್ಯಗಳನ್ನು ಪೊಲೀಸರ ತನಿಖೆ ಪರಿಗಣಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸರಿಂದ ಗಂಭೀರ ಥಳಿತಕ್ಕೊಳಗಾಗಿದ್ದ ಯುವಕ ಬಂಧನದಿಂದ ಬಿಡುಗಡೆಯಾದ ಕೆಲ ಹೊತ್ತಿನಲ್ಲಿಯೇ ಅಸುನೀಗಿದ್ದ ಪ್ರಕರಣ ಇದಾಗಿದೆ. ಯುವಕನ ತಾಯಿ ಪೊಲೀಸ್ ದೌರ್ಜನ್ಯದ ವಿರುದ್ಧ ಅರ್ಜಿ ದಾಖಲಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ 'ಬಾರ್ ಅಂಡ್ ಬೆಂಚ್' ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.