Asif Iqbal Tanha, Devangana Kalita, Natasha Narwal
Asif Iqbal Tanha, Devangana Kalita, Natasha Narwal  
ಸುದ್ದಿಗಳು

ದೆಹಲಿ ಗಲಭೆ: ತನ್ಹಾ, ದೇವಾಂಗನಾ, ನತಾಶಾ ಜಾಮೀನು ಪ್ರಶ್ನಿಸಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ

Bar & Bench

ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ ವಿದ್ಯಾರ್ಥಿ ಹೋರಾಟಗಾರರಾದ ಆಸಿಫ್ ಇಕ್ಬಾಲ್ ತನ್ಹಾ, ದೇವಾಂಗನಾ ಕಲಿತಾ ಹಾಗೂ ನತಾಶಾ ನರ್ವಾಲ್ ಅವರಿಗೆ ಜಾಮೀನು ನೀಡಿದ್ದ ದೆಹಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾ ಮಾಡಿದೆ [ದೆಹಲಿ ಸರ್ಕಾರ ಮತ್ತು ದೇವಾಂಗನಾ ಕಲಿತಾ ನಡುವಣ ಪ್ರಕರಣ].

ಹೈಕೋರ್ಟ್‌ನ ಆದೇಶವನ್ನು ಪೂರ್ವನಿದರ್ಶನವೆಂದು ಪರಿಗಣಿಸಲಾಗದು, ಅದರಲ್ಲಿಯೂ ವಿಚಾರಣಾರ್ಹತೆಯ ಕುರಿತಾದ ಪ್ರಾಥಮಿಕ ವಿಷಯಗಳ ಕುರಿತು ನಡೆದ ವಿಸ್ತೃತ ಚರ್ಚೆಯ ಹಿನ್ನೆಲೆಯಲ್ಲಿ ಹಾಗೆ ಭಾವಿಸಲಾಗದು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಪುನರುಚ್ಚರಿಸಿತು.

ಜಾಮೀನು ವಿಚಾರಣೆಯಲ್ಲಿ ಕಾನೂನಿನ ವ್ಯಾಖ್ಯಾನ ಮತ್ತು ಅಭಿಪ್ರಾಯ ವ್ಯಕ್ತಪಡಿಸದಂತೆ ನೋಡಿಕೊಳ್ಳುವುದು ಮಧ್ಯಂತರ ಆದೇಶದ ಉದ್ದೇಶವಾಗಿರುತ್ತದೆ. ಕಾನೂನಿನ ಶಾಸನಾತ್ಮಕ ಅರ್ಥ ವ್ಯಾಖ್ಯಾನದ ಕುರಿತಾದ ಕಾನೂನಿನ ನಿಲುವಿನ ಚರ್ಚೆಗೆ ತಾನು ಹೋಗಿಲ್ಲ ಎಂದು ಪೀಠ ಹೇಳಿತು.

ಪ್ರಕರಣ ಮುಂದೂಡುವಂತೆ ದೆಹಲಿ ಪೊಲೀಸರು ಮಾಡಿದ್ದ ಮನವಿಯನ್ನೂ ಪೀಠ ತಿರಸ್ಕರಿಸಿದೆ. “ಇಲ್ಲ, ಇಲ್ಲ (ಮುಂದೂಡುವುದಿಲ್ಲ) ಪ್ರತಿ ಬಾರಿಯೂ ಮುಂದೂಡಲಾಗದು. ನೀವು ವಾದಿಸಲು ಇದು ಒಳ್ಳೆಯ ದಿನ. ನಾವು ಈ ಹಿಂದೆ ಇದಕ್ಕೆಲ್ಲಾ ಒಪ್ಪಿದ್ದೇ ಹೀಗೆ ಮುಂದೂಡಲು ಕಾರಣ. ಈ ಹಿಂದೆಲ್ಲಾ ಸುಪ್ರೀಂ ಕೋರ್ಟ್ ಅಂತಹ ಮನವಿಗಳನ್ನು ಒಪ್ಪಿರಲಿಲ್ಲ. ಇನ್ನು ವಿಚಾರಣೆಗೆ ಅಡ್ಡಿಪಡಿಸಬೇಡಿ" ಎಂದು ಪೀಠ ಹೇಳಿತು. ಮನವಿಯನ್ನು ತಿರಸ್ಕರಿಸುವ ಆದೇಶದಲ್ಲಿಯೂ ಅದೇ ವಿಚಾರವನ್ನು ನ್ಯಾಯಾಲಯ ದಾಖಲಿಸಿತು.

“ಮತ್ತೂ ಒಮ್ಮೆ ಪ್ರಕರಣ ಮುಂದೂಡುವಂತೆ ಕೋರಿರುವುದನ್ನು ನಾವು ಗಮನಿಸಿದ್ದೇವೆ. ಪ್ರಕರಣದಲ್ಲಿ ನಿಜವಾಗಿಯೂ ಏನೂ ಉಳಿದಿಲ್ಲವಾದ್ದರಿಂದ ನಾವು ಆಸ್ಪದ ನೀಡಿಲ್ಲ. ಜಾಮೀನು ವಿಚಾರಣೆಯನ್ನು ದೀರ್ಘಕಾಲದವರೆಗೆ ನಡೆಸಬಾರದು” ಎಂದು ನುಡಿದ ಪೀಠ ಮೇಲ್ಮನವಿಯನ್ನು ತಿರಸ್ಕರಿಸಿತು.

ಫೆಬ್ರವರಿ 2020 ರಲ್ಲಿ ರಾಷ್ಟ್ರ ರಾಜಧಾನಿಯ ಈಶಾನ್ಯ ಭಾಗದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಸಂಚು ನಡೆಸಿದ್ದಾರೆ ಎಂದು ಆರೋಪಿಸಿ ಕಲಿತಾ, ನರ್ವಾಲ್‌ ಹಾಗೂ ತನ್ಹಾ ಅವರನ್ನು ಮೇ 2020ರಲ್ಲಿ ಬಂಧಿಸಲಾಗಿತ್ತು. ದೆಹಲಿ ಹೈಕೋರ್ಟ್ ಜೂನ್ 15ರಂದು ಅವರಿಗೆ ಜಾಮೀನು ನೀಡುವವರೆಗೆ ಸುಮಾರು ಒಂದು ವರ್ಷಗಳ ಕಾಲ ಅವರೆಲ್ಲಾ ಬಂಧನದಲ್ಲಿದ್ದರು. ದೆಹಲಿ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್‌ಅವಲೋಕನಗಳಿಗೆ ಯಾವುದೇ ತಳಹದಿಯಿಲ್ಲ, ಅವು ಆರೋಪಪಟ್ಟಿಗಿಂತ ಮಿಗಿಲಾಗಿ ಸಾಮಾಜಿಕ ಮಾಧ್ಯಮದ ನಿರೂಪಣೆಯನ್ನು ಆಧರಿಸಿವೆ ಎಂದು ದೂರಿದ್ದರು.