Supreme Court, Delhi and Haryana 
ಸುದ್ದಿಗಳು

ದೆಹಲಿಗೆ 137 ಕ್ಯೂಸೆಕ್ ನೀರು ಬಿಡುವಂತೆ ಹಿ.ಪ್ರದೇಶಕ್ಕೆ ಸುಪ್ರೀಂ ನಿರ್ದೇಶನ: ಅಡ್ಡಿಪಡಿಸದಂತೆ ಹರಿಯಾಣಕ್ಕೆ ತಾಕೀತು

ಹಿಮಾಚಲ ಪ್ರದೇಶದಿಂದ ರಾಷ್ಟ್ರ ರಾಜಧಾನಿಗೆ ನೀರು ಸರಬರಾಜು ಮಾಡಲು ಅನುವಾಗುವಂತೆ ಹರಿಯಾಣಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿದೆ.

Bar & Bench

ಬಿಸಿಗಾಳಿಯಿಂದ ಉತ್ತರ ಭಾರತದ ಹಲವು ರಾಜ್ಯಗಳು ತತ್ತರಿಸಿರುವ ನಡುವೆಯೇ ರಾಷ್ಟ್ರ ರಾಜಧಾನಿ ದೆಹಲಿ ಎದುರಿಸುತ್ತಿರುವ ತೀವ್ರ ನೀರಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ತುರ್ತಾಗಿ 137 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ [ದೆಹಲಿ ಸರ್ಕಾರ ಮತ್ತು ಹರಿಯಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಹರಿಯಾಣ ಸರ್ಕಾರಕ್ಕೆ ಪೂರ್ವ ಸೂಚನೆ ನೀಡಿ ನಾಳೆ (ಶುಕ್ರವಾರ) ನೀರು ಹರಿಸುವಂತೆ ಹಿಮಾಚಲ ಪ್ರದೇಶಕ್ಕೆ ಸೂಚಿಸಿರುವ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ರಜಾಕಾಲೀನ ಪೀಠ ಹಿಮಾಚಲ ಪ್ರದೇಶದಿಂದ ದೆಹಲಿಗೆ ಹರಿಯುವ ನೀರನ್ನು ಹರಿಯಾಣ ತಡೆಯದೆ ರಾಷ್ಟ್ರ ರಾಜಧಾನಿಗೆ ಅನುಕೂಲ ಮಾಡಿಕೊಡಬೇಕು ಎಂದು ತಾಕೀತು ಮಾಡಿದೆ.

ನೀರು ಹರಿಸಲು ತನಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಈ ಹಿಂದೆ ಹಿಮಾಚಲ ಪ್ರದೇಶ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿದ ನ್ಯಾಯಾಲಯ ಮೇಲ್ದಂಡೆಯಿಂದ 137 ಕ್ಯೂಸೆಕ್‌ ನೀರು ಹರಿಸಲು ನಿರ್ದೇಶಿಸುತ್ತಿದ್ದು. ಇದರಿಂದ ನೀರು ಹತ್ನಿಕುಂಡ್‌ ಬ್ಯಾರೇಜ್‌ ತಲುಪಿ ವಜೀರಾಬಾದ್ ಮೂಲಕ ದೆಹಲಿ ಪ್ರವೇಶಿಸುತ್ತದೆ. ಹಿಮಾಚಲ ಪ್ರದೇಶ ರಾಜ್ಯ ಪೂರ್ವ ಸೂಚನೆ ನೀಡಿ ಹೆಚ್ಚುವರಿ ನೀರು ಬಿಡುಗಡೆ ಮಾಡಬೇಕು. ಹಾಗೆ ಬಿಟ್ಟ ನೀರು ಹತ್ನಿಕುಂಡ್‌ನಿಂದ ವಜೀರಾಬಾದ್‌ಗೆ ಹರಿಯಲು ಹರಿಯಾಣ ರಾಜ್ಯ ಅನುಕೂಲ ಕಲ್ಪಿಸಬೇಕು. ಇದರಿಂದ ದೆಹಲಿಗೆ ಅಡೆತಡೆಯಿಲ್ಲದೆ ತಲುಪುವ ನೀರು ಅಲ್ಲಿನ ನಿವಾಸಿಗಳಿಗೆ ದೊರೆಯುತ್ತದೆ ಎಂದಿದೆ.

ನೀರಿನ ಒಳಹರಿವನ್ನು ಮಾಪನ ಮಾಡುವಂತೆ ಯಮುನಾ ನದಿ ಮೇಲ್ದಂಡೆ ಮಂಡಳಿಗೆ (ಯುವೈಆರ್‌ಬಿ) ನಿರ್ದೇಶನ ನೀಡಿರುವ ಪೀಠ ಸೋಮವಾರ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದ್ದು ಅಷ್ಟರೊಳಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ಹಿಮಾಚಲ ಪ್ರದೇಶದಿಂದ ರಾಷ್ಟ್ರ ರಾಜಧಾನಿಗೆ ನೀರು ಸರಬರಾಜು ಮಾಡಲು ಅನುವಾಗುವಂತೆ ಹರಿಯಾಣಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿದೆ.

ಈ ಹಿಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ದೆಹಲಿ ಸರ್ಕಾರದ ಬೇಡಿಕೆ ಪರಿಹರಿಸುವ ನಿಟ್ಟಿನಲ್ಲಿ ಯಮುನಾ ನದಿ ಮೇಲ್ದಂಡೆ ಮಂಡಳಿಯ ಭಾಗವಾಗಿರುವ ಎಲ್ಲಾ ಪಾಲುದಾರ ರಾಜ್ಯಗಳ ಸಭೆ ನಡೆಸುವಂತೆ ಪೀಠ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು.