Lodhi Garden, Delhi  
ಸುದ್ದಿಗಳು

ನೀರಿನ ಟ್ಯಾಂಕರ್ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳದ ದೆಹಲಿ ಸರ್ಕಾರ: ಸುಪ್ರೀಂ ಕೋರ್ಟ್ ಅಸಮಾಧಾನ

Bar & Bench

ಜಲ ಕ್ಷಾಮ ಎದುರಾಗಿರುವ ದೆಹಲಿಯಲ್ಲಿ ನೀರು ಸರಬರಾಜನ್ನು ಬೇರೆಡೆಗೆ ತಿರುಗಿಸುತ್ತಿರುವ ನೀರಿನ ಟ್ಯಾಂಕರ್‌ ಮಾಫಿಯಾ ಹತ್ತಿಕ್ಕುವಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಲು ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ [ದೆಹಲಿ ಸರ್ಕಾರ ಮತ್ತು ಹರಿಯಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

(ಈ ಹಿಂದೆ ನೀಡಿದ್ದ ಆಶ್ವಾಸನೆಯಂತೆ) ನೀರು ಹರಿಸಲಾಗಿದೆ ಎಂದು ಹಿಮಾಚಲ ಪ್ರದೇಶ ಸಮರ್ಥಿಸಿಕೊಂಡಿದ್ದರೂ ದೆಹಲಿಯ ಕಾಲುವೆಗಳಲ್ಲಿ ನೀರು ಹರಿದಿಲ್ಲ ಎಂದು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ರಜಾಕಾಲೀನ ಪೀಠ ತಿಳಿಸಿತು.

ಹೀಗಾಗುವುದಕ್ಕೆ ನೀರಿನ ಟ್ಯಾಂಕರ್‌ ಮಾಫಿಯಾಗಳು ಕಾರಣವಿರಬಹುದಾಗಿದ್ದು ಪ್ರತಿ ಬೇಸಿಗೆಯಲ್ಲೂ ಇದು ಮರುಕಳಿಸುವ ಸಮಸ್ಯೆ ಎಂದು ನ್ಯಾಯಾಲಯ ಹೇಳಿತು.

ಇಂತಹ ಮಾಫಿಯಾಗಳ ಬಗ್ಗೆ ಸುದ್ದಿ ವಾಹಿನಿಗಳು ವರದಿ ಮಾಡಿರುವುದನ್ನು ನ್ಯಾಯಾಲಯ ಪ್ರಸ್ತಾಪಿಸಿತು. ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ದೆಹಲಿ ಸರ್ಕಾರ ನಿಷ್ಕ್ರಿಯವಾಗಿದ್ದರೆ ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೆ ತಿಳಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು. 

''ಹಿಮಾಚಲ ಪ್ರದೇಶದಿಂದ ನೀರು ಬರುತ್ತಿದೆ, ಹಾಗಾದರೆ  ದೆಹಲಿಯೊಳಗೆ ನೀರು ಎಲ್ಲಿಗೆ ಹೋಗುತ್ತಿದೆ? ಭಾರೀ ಪೋಲು, ಟ್ಯಾಂಕರ್ ಮಾಫಿಯಾ ಇತ್ಯಾದಿಗಳು.. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ, ದಿಲ್ಲಿಯಲ್ಲಿ ಟ್ಯಾಂಕರ್ ಮಾಫಿಯಾ ಕೆಲಸ ಮಾಡುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಂಡಿದ್ದೀರಾ? ನೀವು ಕ್ರಮ ಕೈಗೊಳ್ಳದಿದ್ದರೆ, ಟ್ಯಾಂಕರ್ ಮಾಫಿಯಾಗಳ ವಿರುದ್ಧ ಕ್ರಮ ಕೈಗೊಳ್ಳಲು ನಾವು ದೆಹಲಿ ಪೊಲೀಸರಿಗೆ ವಹಿಸುತ್ತೇವೆ. ಎಲ್ಲಾ ಸುದ್ದಿವಾಹಿನಿಗಳಲ್ಲಿ ಇದೇ ಸುದ್ದಿ ನೋಡುತ್ತಿದ್ದೇವೆ. ಈ ನಿಟ್ಟಿನಲ್ಲಿ ನೀವು ಏನನ್ನೂ ಮಾಡುತ್ತಿಲ್ಲ. ಇದು ಪ್ರತಿ ಬೇಸಿಗೆಯಲ್ಲಿ ಪದೇ ಪದೇ ಕಾಡುವ ಸಮಸ್ಯೆ. ಈ ಎಲ್ಲ ಮೂಲಗಳಿಂದ ನೀರು ಪೋಲು ಆಗುವುದನ್ನು ತಡೆಯಲು ಏನು ಮಾಡಿದ್ದೀರಿ? ... ನೀವು ಟ್ಯಾಂಕರ್ ಮಾಫಿಯಾಗಳ ವಿರುದ್ಧ ಕ್ರಮ ಕೈಗೊಂಡಿದ್ದೀರಾ ಅಥವಾ ಎಫ್ಐಆರ್ ದಾಖಲಿಸಿದ್ದೀರಾ? ಟ್ಯಾಂಕರ್ ಮಾಫಿಯಾಗಳಿಗೆ ನೀರು ಸಿಗುತ್ತಿದೆ. ಆದರೆ, ಕೊಳಾಯಿಗಳಲ್ಲಿ ಮಾತ್ರ ನೀರು ಬರುತ್ತಿಲ್ಲ” ಎಂದು ನ್ಯಾಯಾಲಯ ಕಿಡಿಕಾರಿತು.

ಆಮ್ ಆದ್ಮಿ ಪಕ್ಷದ (ಎಎಪಿ) ನೇತೃತ್ವದ ದೆಹಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಮತ್ತು ವಕೀಲ ಶದನ್ ಫರಾಸತ್ ಅವರು ಎಲ್ಲಾ ಟ್ಯಾಂಕರ್‌ಗಳು ದೆಹಲಿ ಜಲ ಮಂಡಳಿಯ ಟ್ಯಾಂಕರ್‌ಗಳೇ ಆಗಿದ್ದು ಬೇರೆಡೆಗೆ ನೀರು ಹರಿಸುವುದನ್ನು ತಪ್ಪಿಸಲು ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದರು.

ಆಗ ನ್ಯಾಯಾಲಯ ಇಂದು ಅಥವಾ ನಾಳೆಯೊಳಗೆ ನೀರಿನ ಪೋಲು ತಡೆಗಟ್ಟಲು ತೆಗೆದುಕೊಂಡ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಆದೇಶಿಸಿತು.

ಹರಿಯಾಣ ಸರ್ಕಾರದ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದರು. ಹಿಮಾಚಲ ಪ್ರದೇಶ ಸರ್ಕಾರವನ್ನು ವಕೀಲ ಅನುಪ್ ಕುಮಾರ್ ರಟ್ಟಾ ಪ್ರತಿನಿಧಿಸಿದ್ದರು. ಪ್ರಕರಣದ ಮುಂದಿನ ವಿಚಾರಣೆ ನಾಳೆ (ಗುರುವಾರ) ಮುಂದುವರೆಯಲಿದೆ