Karnataka High Court 
ಸುದ್ದಿಗಳು

ಸಮಾನ ವೇತನಕ್ಕೆ ಆಗ್ರಹ: ಸಾರಿಗೆ ನೌಕರರ ಮುಷ್ಕರಕ್ಕೆ ತಡೆಯೊಡ್ಡಿ ಮಧ್ಯಂತರ ಆದೇಶ ಮಾಡಿದ ಹೈಕೋರ್ಟ್‌

ಮುಷ್ಕರ ನಡೆಸುವುದರಿಂದ ಸಾರ್ವಜನಿಕರ ಸಂಚಾರ, ಉದ್ಯೋಗಿಗಳು, ಆಸ್ಪತ್ರೆ, ಔಷಧಾಲಯಗಳ ಸಿಬ್ಬಂದಿ ಮತ್ತು ವಾರ್ಷಿಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಲಿದೆ ಎಂದು ಹೇಳಿರುವ ನ್ಯಾಯಾಲಯ.

Bar & Bench

ಸರ್ಕಾರಿ ನೌಕರರಿಗೆ ಸಮಾನವಾಗಿ ವೇತನ ನೀಡಬೇಕು ಎಂದು ಆಗ್ರಹಿಸಿ ಹಾಗೂ ಸಾರಿಗೆ ನೌಕರರ ಮೇಲಿನ ಕಾನೂನುಬಾಹಿರ ಪ್ರಕರಣಗಳನ್ನು ಹಿಂಪಡೆಯಲು ಒತ್ತಾಯಿಸಿ ರಾಜ್ಯ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ, ಶುಕ್ರವಾರ ನಡೆಸಲು ನಿರ್ಧರಿಸಿದ್ದ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್ ತಡೆಯೊಡ್ಡಿದೆ. ಮೂರು ವಾರಗಳ ಕಾಲ ಮುಷ್ಕರ ನಡೆಸದಂತೆ ನಿದೇಶಿಸಿ ಮಧ್ಯಂತರ ಆದೇಶ ಹೊರಡಿಸಿದೆ.

ಮುಷ್ಕರ ನಡೆಸದಂತೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಗೆ ನಿರ್ದೇಶಿಸುವಂತೆ ಕೋರಿ ಶಿವಮೊಗ್ಗದ ಹಾರೋಗೋಳಿಗೆ ಗ್ರಾಮದ ಹಿರಿಯ ನಾಗರಿಕ ಎಚ್ ಎಂ ವೆಂಕಟೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಪ್ರಕರಣದ ಸಂಬಂಧ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯೊಂದಿಗೆ ಕಾರ್ಮಿಕ ಆಯುಕ್ತರು ಮಾರ್ಚ್‌ 20ರಂದು ಮಧ್ಯಾಹ್ನ 2.30ಕ್ಕೆ ಸಂಧಾನ ಸಭೆ ಏರ್ಪಡಿಸಿದ್ದರು. ಆದರೆ, ಯಾವುದೇ ನಿರ್ದಿಷ್ಟ ನಿರ್ಣಯಕ್ಕೆ ಬರುವಲ್ಲಿ ಸಭೆ ವಿಫಲವಾಯಿತು. ಇದರಿಂದ ಏಪ್ರಿಲ್‌ 6ರಂದು ಬೆಳಗ್ಗೆ 11.30ಕ್ಕೆ ಮತ್ತೆ ಸಂಧಾನ ಸಭೆ ನಿಗದಿಪಡಿಸಲಾಗಿದೆ. ಅದರಂತೆ ಏಪ್ರಿಲ್‌ 6ರಂದು ಸಂಧಾನ ಸಭೆ ನಡೆಯಲಿದೆ. ಮುಷ್ಕರ ನಡೆಸುವುದರಿಂದ ಸಾರ್ವಜನಿಕರ ಸಂಚಾರಕ್ಕೆ, ಉದ್ಯೋಗಿಗಳು, ಆಸ್ಪತ್ರೆ, ಔಷಧಾಲಯಗಳ ಸಿಬ್ಬಂದಿ ಮತ್ತು ವಾರ್ಷಿಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಗಂಭೀರ ತೊಂದರೆ ಉಂಟಾಗಲಿದೆ. ಇದನ್ನು ತಪ್ಪಿಸಲು ಮೂರು ವಾರ ಕಾಲ ವೇದಿಕೆ ಮುಷ್ಕರ ನಡೆಸಬಾರದು ಎಂದು ಪೀಠವು ನಿರ್ದೇಶಿಸಿದೆ.

ಈ ಮಧ್ಯಂತರ ಆದೇಶವು ಏಪ್ರಿಲ್‌ 6ರಂದು ಸಂಧಾನ ಸಭೆ ನಡೆಸುವುದಕ್ಕೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಪೀಠವು ವೇದಿಕೆ ತನ್ನ ಯಾವುದೇ ಬೇಡಿಕೆಗಳಿದ್ದರೆ ಸಂಧಾನ ಸಭೆಯಲ್ಲಿ ಮಂಡಿಸಬೇಕು. ಆ ನಿಟ್ಟಿನಲ್ಲಿ ವೇದಿಕೆಗೆ ನ್ಯಾಯಾಲಯ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ. ಆದರೆ, ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಣೆ ಮಾಡುವ ಉದ್ದೇಶ ಈ ಮಧ್ಯಂತರ ಆದೇಶ ಹೊರಡಿಸಲಾಗುತ್ತಿದೆ ಎಂದು ಮೌಖಿಕವಾಗಿ ಹೇಳಿತು.

ಇದೇ ವೇಳೆ ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ-ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಗೆ ನೋಟಿಸ್ ಜಾರಿಗೊಳಿಸಿದ ಪೀಠವು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಕೆಗೆ ನಡೆಸುವ ಕಾನೂನಿನ ಪ್ರಕ್ರಿಯೆಗೆ ಅರ್ಜಿದಾರರ ಯಾವುದೇ ವಿರೋಧವಿಲ್ಲ. ಆದರೆ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾರ್ಚ್‌ 24ರಂದು (ಶುಕ್ರವಾರ) ಮುಷ್ಕರ ನಡೆಸಲು ವೇದಿಕೆ ಕೈಗೊಂಡಿರುವ ನಿರ್ಧಾರಕ್ಕೆ ಆಕ್ಷೇಪವಿದೆಯಷ್ಟೇ. ಒಂದೊಮ್ಮೆ ನಿಗದಿಯಂತೆ ಮುಷ್ಕರ ನಡೆದರೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ತಬ್ದವಾಗುತ್ತದೆ. ಇದು ಸಾರ್ವಜನಿಕರು, ಉದ್ಯೋಗಿಗಳು, ವಿಶೇಷವಾಗಿ ಆರೋಗ್ಯ ಸಂಸ್ಥೆಗಳು ಹಾಗೂ ಔಷಧಾಲಯ ನೌಕರರಿಗೆ ತೀವ್ರ ಅನಾನುಕೂಲತೆ ಮತ್ತು ತೊಂದರೆ ಉಂಟು ಮಾಡಲಿದೆ ಎಂದು ಪೀಠದ ಗಮನಕ್ಕೆ ತಂದರು.

ಹಾಗೆಯೇ, ಮುಷ್ಕರ ನಡೆಸಲು ನಿರ್ಧರಿಸಿರುವ ಸಮಯದಲ್ಲಿ ಹಲವು ತರಗತಿಗಳ ವಾರ್ಷಿಕ ಪರೀಕ್ಷೆ ನಡೆಯುತ್ತಿದೆ. ಈ ಮುಷ್ಕರವು ವಿದ್ಯಾರ್ಥಿಗಳು ಶಾಲೆ ಮತ್ತು ಪರೀಕ್ಷಾ ಕೇಂದ್ರಗಳಿಗೆ ತಲುಪುವುದಕ್ಕೆ ತೊಂದರೆಯಾಗುತ್ತದೆ. ವಿದ್ಯಾರ್ಥಿಗಳು ಸಕಾಲದಲ್ಲಿ ಪರೀಕ್ಷೆಗೆ ಹಾಜರಾಗುವ ಅವಕಾಶದಿಂದ ವಂಚಿತರಾಗಲಿದೆ. ಇದು ಅವರ ಭವಿಷ್ಯದ ಶೈಕ್ಷಣಿಕದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.