ಪ್ರಕರಣವೊಂದರ ಜಾಮೀನು ಅರ್ಜಿ ವಿಚಾರಣೆಯಿಂದ ಶುಕ್ರವಾರ ಹಿಂದೆ ಸರಿದಿರುವ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಪಂಕಜ್ ಭಾಟಿಯಾ ಅವರು ತಾವು ನೀಡಿದ್ದ ತೀರ್ಪಿನ ಕುರಿತು ಸುಪ್ರೀಂ ಕೋರ್ಟ್ ಮಾಡಿರುವ ಅವಲೋಕನಗಳು ಹತಾಶೆ ಉಂಟುಮಾಡಿವೆ ಎಂದಿದ್ದಾರೆ.
ಅಷ್ಟೇ ಅಲ್ಲದೆ ಜಾಮೀನು ಅರ್ಜಿಗಳ ವಿಚಾರಣೆ ರೋಸ್ಟರ್‌ನಿಂದಲೇ ತಮ್ಮನ್ನು ತೆಗೆದುಹಾಕುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವಿ ಮಾಡಿದ್ದಾರೆ.
ನ್ಯಾ. ಭಾಟಿಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ, ನ್ಯಾ. ಭಾಟಿಯಾ ಅವರು ನೀಡಿದ ಜಾಮೀನು ಆದೇಶ ತಾನು ಈಚೆಗೆ ಕಂಡ ಅತ್ಯಂತ ಆಘಾತಕಾರಿ, ನಿರಾಶಾದಾಯಕ ಆದೇಶಗಳಲ್ಲಿ ಒಂದು ಎಂದು ಕಿಡಿಕಾರಿತ್ತು.
ಪ್ರಕರಣದ ವಿಚಾರಣೆ ವೇಳೆ ನ್ಯಾ. ಭಾಟಿಯಾ ಅವರು ʼಉನ್ನತ ನ್ಯಾಯಾಲಯಗಳಿಂದ ತಮ್ಮ ಆದೇಶ ರದ್ದಾಗಿಲ್ಲ, ಹಸ್ತಕ್ಷೇಪವಾಗಿಲ್ಲ ಎಂದು ಯಾವುದೇ ನ್ಯಾಯಾಧೀಶರು ಹೇಳುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ. ತೀರ್ಪನ್ನು ಪರಿಶೀಲಿಸಿದಾಗ ಜಾಮೀನು ಆದೇಶದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದೆ ಎಂದು ನನಗೆ ಅನ್ನಿಸುತ್ತದೆ. ಆದರೂ ತೀರ್ಪನಲ್ಲಿ ಅದರಲ್ಲಿಯೂ ಪ್ಯಾರಾಗಳು ಅಪಾರವಾದ ಸ್ಥೈರ್ಯ ಕುಗ್ಗಿಸುವಂತಹ ಮತ್ತು ಪ್ರತಿಕೂಲವಾದಂತಹ ಪರಿಣಾಮ ಬೀರಿವೆʼ ಎಂದಿದ್ದಾರೆ.
ತೀರ್ಪಿನಲ್ಲಿ ಮಾಡಲಾದ ಅವಲೋಕನ ನನ್ನ ಮೇಲೆ ಅಪಾರವಾದ ಸ್ಥೈರ್ಯ ಕುಗ್ಗಿಸುವ ಮತ್ತು ಪ್ರತಿಕೂಲ ಪರಿಣಾಮ ಬೀರಿದೆ.ನ್ಯಾ. ಪಂಕಜ್ ಭಾಟಿಯಾ
22 ವರ್ಷದ ಸುಷ್ಮಾ ವರದಕ್ಷಿಣೆ ಹಿಂಸೆಗೆ ಬಲಿಯಾಗಿದ್ದರು. ವಿವಾಹದ ವೇಳೆ ₹3.5 ಲಕ್ಷ ನಗದು ಸೇರಿದಂತೆ ವಿವಿಧ ಬಗೆಯ ವರದಕ್ಷಿಣೆ ನೀಡಲಾಗಿದ್ದರೂ ಆರೋಪಿ ಪತಿಯ ಕುಟುಂಬ ನಾಲ್ಕು ಚಕ್ರದ ವಾಹನಕ್ಕೆ ಬೇಡಿಕೆ ಇಟ್ಟು ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ದೂರು ದಾಖಲಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ಆಕೆಯ ಕುತ್ತಿಗೆ ಬಿಗಿದು ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆ ವರದಿ ತಿಳಿಸಿತ್ತು.
ಜಾಮೀನು ನೀಡುವ ವೇಳೆ ಹೈಕೋರ್ಟ್, ಹೈಯೋಯ್ಡ್ ಎಲುಬು ಮುರಿಯದೇ ಇರುವುದರಿಂದ ಕುತ್ತಿಗೆಯನ್ನು ಬಿಗಿದು ಕೊಲ್ಲುವುದು ಸಾಧ್ಯವಿಲ್ಲ ಎಂಬ ಆರೋಪಿ ಪರ ವಕೀಲರ ವಾದ ಗಣನೆಗೆ ತೆಗೆದುಕೊಂಡಿತ್ತು. ಆರೋಪಿಗೆ ಅಪರಾಧ ಇತಿಹಾಸವಿಲ್ಲ ಎಂದ ಅದು ಜೈಲಿನಲ್ಲಿ ಈಗಾಗಲೇ ಆತ ಅವಧಿ ಕಳೆದಿರುವುದನ್ನು ಗಮನಿಸಿ ಜಾಮೀನು ಮಂಜೂರು ಮಾಡಿತ್ತು.
ಆದರೆ ಈ ತೀರ್ಪು ಅಪೂರ್ಣವಾದುದು ಹಾಗೂ ನಿರಾಶಾದಯಕ ಎಂದಿದ್ದ ಸುಪ್ರೀಂ ಕೋರ್ಟ್ ಆರೋಪಿ ಕೂಡಲೇ ವಿಚಾರಣಾ ನ್ಯಾಯಾಲಯದೆದುರು ಶರಣಾಗಬೇಕು ಎಂದು ನಿರ್ದೇಶಿಸಿತ್ತು.