ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್ 
ಸುದ್ದಿಗಳು

ಡೆಂಗಿ: ಸೊಳ್ಳೆ ಹೆಚ್ಚಿಸುವ ಚಟುವಟಿಕೆಗೆ ದಂಡ ವಿಧಿಸುವ ಕುರಿತು ನಿರ್ಧರಿಸಲು ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಆದೇಶ

Bar & Bench

ಸೊಳ್ಳೆೆಗಳ ಹೆಚ್ಚಳಕ್ಕೆ ಕಾರಣವಾಗುವ ಚಟುವಟಿಕೆಗಳಿಗೆ ದಂಡವನ್ನು ರೂ 500ರಿಂದ ರೂ 5,000ದವರೆಗೆ ಹೆಚ್ಚಿಸಲು ದೆಹಲಿ ಸರ್ಕಾರ ಕಳುಹಿಸಿದ ಪ್ರಸ್ತಾವನೆಯ ಬಗ್ಗೆ ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಅಲ್ಲದೆ ರಾಷ್ಟ್ರ ರಾಜಧಾನಿಯ ಎಲ್ಲಾ 12 ವಲಯಗಳಲ್ಲಿ ಡೆಂಗಿ ಹರಡಿರುವ ಪ್ರಮಾಣವ ವಿವರಿಸುವ ಎಲ್ಲಾ ಅಂಕಿ ಅಂಶಗಳನ್ನು ಒಳಗೊಂಡ ಸ್ಥಿತಿಗತಿ ವರದಿಯನ್ನು ಮೂರು ವಾರಗಳೊಳಗೆ ಸಲ್ಲಿಸುವಂತೆ ದೆಹಲಿ ಮಹಾನಗರ ಪಾಲಿಕೆಗೆ (ಎಂಸಿಡಿ) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ  ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 19ಕ್ಕೆ ಮುಂದೂಡಲಾಗಿದೆ.

ನಗರದಲ್ಲಿ ಸೊಳ್ಳೆ ಮತ್ತು ಸೊಳ್ಳೆ ಸಂಬಂಧಿತ ಕಾಯಿಲೆಗಳ ಬಗ್ಗೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಳ್ಳಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಎಂಸಿಡಿ ಸಲ್ಲಿಸಿದ ಇತ್ತೀಚಿನ ವರದಿಯ ಪ್ರಕಾರ, ನಗರದ ಕೆಲವು ಪ್ರದೇಶಗಳಲ್ಲಿ ಡೆಂಗಿ ಪ್ರಕರಣಗಳು ಶೇ 300ಕ್ಕಿಂತ ಹೆಚ್ಚಿದೆ ಎಂದು ಅಮಿಕಸ್ ಕ್ಯೂರಿ ರಜತ್‌ ಅನೇಜಾ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಹೈಕೋರ್ಟ್ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಪ್ರಕರಣದ ಮೇಲ್ವಿಚಾರಣೆ ಮಾಡುತ್ತಿದ್ದರೂ ಡೆಂಗಿ ಪ್ರಕರಣಗಳು ಹೆಚ್ಚಾಗಿವೆ ಎಂದು ಅನೇಜಾ ಗಮನಸೆಳೆದರು.

ಆಗ ʼಹೈಕೋರ್ಟ್ ಪ್ರಕರಣವನ್ನು ಮೇಲ್ವಿಚಾರಣೆ ಮಾಡುತ್ತಿರುವುದರಿಂದಲೇ, ಪ್ರಕರಣಗಳು 300% ಹೆಚ್ಚಾಗಿವೆ, ಇಲ್ಲದಿದ್ದರೆ ಅವು 3000% ರಷ್ಟು ಹೆಚ್ಚಾಗುತ್ತಿದ್ದವುʼ ಎಂದು ಪೀಠ ಪ್ರತಿಕ್ರಿಯಿಸಿತು.