Dengue with Karnataka HC 
ಸುದ್ದಿಗಳು

ಡೆಂಗಿ ಹೆಚ್ಚಳ: ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಿಕೊಂಡು, ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಡೆಂಗಿ ಜ್ವರದ ಹೆಚ್ಚಳ ಸಂಬಂಧ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಿಸಬೇಕಾದ ಅಗತ್ಯವಿದೆ ಎಂದು ಉಲ್ಲೇಖಿಸಿ ಪತ್ರಿಕೆಯೊಂದಕ್ಕೆ ಓದುಗರೊಬ್ಬರು ಬರೆದಿರುವ ಪತ್ರ ಆಧರಿಸಿ ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಲು ಆದೇಶಿಸಿದ ನ್ಯಾಯಾಲಯ.

Bar & Bench

ರಾಜಧಾನಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಡೆಂಗಿ ಜ್ವರ ಪ್ರಕರಣಗಳ ಹೆಚ್ವಳವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್ ಬುಧವಾರ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ರಿಜಿಸ್ಟ್ರಾರ್‌ ಜನರಲ್‌ಗೆ ಆದೇಶಿಸಿದೆ.

ಕಲಾಪ ಪ್ರಾರಂಭವಾಗುತ್ತಿದ್ದ ಮುಖ್ಯನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಷಯ ಪ್ರಸ್ತಾಪಿಸಿತು.

ಡೆಂಗಿ ಜ್ವರದ ಹೆಚ್ಚಳ ಸಂಬಂಧ ರಾಜ್ಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕಾದ ಅಗತ್ಯವಿದೆ ಎಂದು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದಕ್ಕೆ ರಾಯಚೂರಿನ ವ್ಯಕ್ತಿಯೊಬ್ಬರು ಓದುಗರ ವಿಭಾಗಕ್ಕೆ ಬರೆದ ಪತ್ರವನ್ನು ಆಧರಿಸಿ ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಲು ಆದೇಶಿಸಲಾಗುತ್ತಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ತುರ್ತು ನೋಟಿಸ್ ಜಾರಿ ಮಾಡಿ ಜುಲೈ 23ರೊಳಗೆ ಡೆಂಗಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ.  

ಉತ್ತಮ ವಾತಾವರಣದಲ್ಲಿ ಬದುಕುವುದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕಾಗಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸೊಳ್ಳೆ ನಿಯಂತ್ರಿಸಿ ಡೆಂಗಿ ಜ್ವರ ಹರಡದಂತೆ ತಡೆಯಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮ, ಬೆಂಗಳೂರು ನಗರ ಸೇರಿದಂತೆ ರಾಜ್ಯದಾದ್ಯಂತ ಡೆಂಗಿ ರೋಗಿಗಳಿಗೆ ಕಲ್ಪಿಸಿರುವ ವೈದ್ಯಕೀಯ ಸೌಲಭ್ಯದ ವಿವರ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೈಗೊಂಡಿರುವ ಕ್ರಮದ ವಿವರಣೆ ನೀಡಬೇಕು ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

ರಿಜಿಸ್ಟ್ರಾರ್ ಜನರಲ್ ಅವರು ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಸರ್ಕಾರದ ಸಂಬಂಧಿತ ಪ್ರಾಧಿಕಾರಗಳಿಗೆ ಅರ್ಜಿ ರವಾನೆಯಾಗುವವರೆಗೆ ಕಾಯಬಾರದು. ತಕ್ಷಣ ಕಾರ್ಯಪ್ರವೃತ್ತಗೊಂಡು ಇಂದೇ ನೋಟಿಸ್ ತಲುಪುವಂತೆ ನೋಡಿಕೊಳ್ಳಬೇಕು ಎಂದರು. ಸರ್ಕಾರದ ಪರವಾಗಿ ನೋಟಿಸ್‌ ಪಡೆಯುವುದಾಗಿ ಸರ್ಕಾರದ ವಕೀಲ ಎಸ್‌ ಎಸ್‌ ಮಹೇಂದ್ರ ಹೇಳಿದರು.

ಈ ವೇಳೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾದ ಅಡ್ವೋಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ ಅವರು ನ್ಯಾಯಾಲಯದ ಆದೇಶವನ್ನು ತಕ್ಷಣ ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ವಿಚಾರಣೆ ವೇಳೆಗೆ ಅನುಪಾಲನಾ ವರದಿ ಸಲ್ಲಿಸಲಾಗುವುದು ಎಂದರು.

ಇದನ್ನು ದಾಖಲಿಸಿಕೊಂಡ ಪೀಠವು ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿತು.