Supreme Court 
ಸುದ್ದಿಗಳು

ಎಸ್ಐಆರ್‌ ಪ್ರಕ್ರಿಯೆ: ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಎಸ್ಐಆರ್‌ನಲ್ಲಿ ತೊಡಗಿರುವವರ ಕೆಲಸದ ಅವಧಿ ಕಡಿಮೆ ಮಾಡಲು ಹೆಚ್ಚುವರಿ ಸಿಬ್ಬಂದಿ ನೇಮಿಸುವಂತೆ ಪೀಠ ಸೂಚಿಸಿತು.

Bar & Bench

ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ಆಮೂಲಾಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ತೊಡಗಿರುವ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಎದುರಿಸುತ್ತಿರುವ ಸಮಸ್ಯೆ ನಿವಾರಿಸಲು ಸುಪ್ರೀಂ ಕೋರ್ಟ್ ಗುರುವಾರ ಹಲವು ನಿರ್ದೇಶನಗಳನ್ನು ನೀಡಿದೆ.

ಎಸ್ಐಆರ್‌ನಲ್ಲಿ ತೊಡಗಿರುವವರ ಕೆಲಸದ ಅವಧಿ ಕಡಿಮೆ ಮಾಡಲು ಹೆಚ್ಚುವರಿ ಸಿಬ್ಬಂದಿ ನೇಮಿಸುವಂತೆ ಸಿಜೆಐ ಸೂರ್ಯಕಾಂತ್‌ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ಆದೇಶಿಸಿತು.

ನಿರ್ದಿಷ್ಟ ಕಾರಣಗಳನ್ನು ಉಲ್ಲೇಖಿಸಿ ಎಸ್‌ಐಆರ್‌ ಸಿಬ್ಬಂದಿ ಕೆಲಸದಿಂದ ವಿನಾಯಿತಿ ಕೋರಿದರೆ ಅದನ್ನು ನಿರ್ದಿಷ್ಟ ಪ್ರಕರಣ ಆಧರಿಸಿ ಪರಿಗಣಿಸಬೇಕು ಎಂದು ನ್ಯಾಯಾಲಯ ನುಡಿಯಿತು.

ಇದಲ್ಲದೆ, ಅವರು ನಿರ್ದಿಷ್ಟ ಕಾರಣಗಳನ್ನು ಉಲ್ಲೇಖಿಸಿ ಕೆಲಸದಿಂದ ವಿನಾಯಿತಿ ಕೋರಿದರೆ, ಅದನ್ನು ಪ್ರಕರಣದಿಂದ ಪ್ರಕರಣದ ಆಧಾರದ ಮೇಲೆ ಪರಿಗಣಿಸಬೇಕು ಎಂದು ಪೀಠ ಸ್ಪಷ್ಟಪಡಿಸಿತು.

ನಿರ್ದೇಶನದ ಪ್ರಮುಖಾಂಶಗಳು

  • ಕೆಲಸದ ಅವಧಿ ಕಡಿಮೆ ಮಾಡಲು ರಾಜ್ಯ ಸರ್ಕಾರಗಳು ಹೆಚ್ಚುವರಿ ಸಿಬ್ಬಂದಿ ನಿಯೋಜಿಸಬೇಕು.

  • ನಿರ್ದಿಷ್ಟ ಕಾರಣಗಳನ್ನು ನೀಡಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಿಬ್ಬಂದಿ ಮನವಿ ಸಲ್ಲಿಸಿದರೆ ನಿರ್ದಿಷ್ಟ ಪ್ರಕರಣ ಆಧರಿಸಿ ಮನವಿ ಪರಿಗಣಿಸಬೇಕು. ಅವರ ಬದಲಿಗೆ ಬದಲಿ ಸಿಬ್ಬಂದಿ ನೇಮಿಸಬೇಕು. ಕಾರ್ಮಿಕ ಬಲವನ್ನು ಹೆಚ್ಚಿಸುವ ಅಗತ್ಯವಿದ್ದಲ್ಲಿ ರಾಜ್ಯ ಸರ್ಕಾರಗಳು ಅದನ್ನು ಒದಗಿಸಲು ಬದ್ಧವಾಗಿರಬೇಕು

  • ನೊಂದ ವ್ಯಕ್ತಿ ಬೇರೆ ಪರಿಹಾರ ಸಿಗದಿದ್ದರೆ, ನ್ಯಾಯಾಲಯದ ಮೊರೆ ಹೋಗಬಹುದು.

ಬಿಎಲ್‌ಒಗಳು ಕೆಲಸದ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿ ನಟ ವಿಜಯ್‌ ನೇತೃತ್ವದ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

 ಅನೇಕ ಬಿಎಲ್‌ಒ ಸಿಬ್ಬಂದಿ ಮೂಲತಃ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರಾಗಿದ್ದು ತಮ್ಮ ಮೂಲ ಕೆಲಸ ಮಾತ್ರವಲ್ಲದೆ ಎಸ್‌ಐಆರ್‌ ಕೆಲಸದಿಂದಾಗಿ ಅತಿ ಒತ್ತಡಕ್ಕೆ ಸಿಲುಕಿದ್ದಾರೆ. ಪ್ರಜಾ ಪ್ರತಿನಿಧಿ ಕಾಯಿದೆಯ ಸೆಕ್ಷನ್‌ 32ರ ಅಡಿಯಲ್ಲಿ ಬಿಎಲ್‌ಒಗಳ ಮೇಲೆ ಎಫ್‌ಐಆರ್‌ ದಾಖಲಿಸಿ ಅವರು ಕೆಲಸ ಪೂರೈಸದಿದ್ದರೆ 2 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ ಎಂದ ನ್ಯಾಯಾಲಯವು, ಚುನಾವಣೆ ಸಂಬಂಧಿತ ಕರ್ತವ್ಯಗಳನ್ನು ನೆರವೇರಿಸುವುದು ಕಡ್ಡಾಯವಾದರೂ, ರಾಜ್ಯ ಸರ್ಕಾರಗಳು ತಮ್ಮ ಸಿಬ್ಬಂದಿಗೆ ಅನವಶ್ಯಕ ಹಿಂಸೆ/ಒತ್ತಡವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುತ್ತವೆ ಎಂದು ನುಡಿಯಿತು.

ಇಸಿಐ ಪರ ಹಾಜರಾದ ಹಿರಿಯ ವಕೀಲ ಮಣಿಂದರ್ ಸಿಂಗ್ ಅರ್ಜಿಗೆ ವಿರೋಧ ವ್ಯಕ್ತಪಡಿಸಿದರು. 

ಇದಕ್ಕೂ ಮುನ್ನ ಟಿವಿಕೆ ಪರವಾಗಿ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಹಾಗೂ ತಂಡ ವಾದ ಮಂಡಿಸಿತು. ತಮ್ಮ ವಾದದ ವೇಳೆ ಶಂಕರನಾರಾಯಣನ್‌ ಅವರು, ಎಸ್‌ಐಆರ್‌ನ ಒತ್ತಡದಿಂದಾಗಿ 35-40 ಮಂದಿ ಬಿಎಲ್‌ಒಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವಿವರಗಳು ನಮ್ಮ ಬಳಿ ಲಭ್ಯ ಇವೆ. ಇವರೆಲ್ಲರೂ ಅಂಗನವಾಡಿ ಕಾರ್ಯಕರ್ತರು ಹಾಗೂ ಶಿಕ್ಷಕರಾಗಿದ್ದಾರೆ. ತನ್ನ ಮದುವೆಗೆ ಹೋಗಲು ಅನುಮತಿ ಸಿಗದ ಕಾರಣಕ್ಕೆ ಒಬ್ಬ ಯುವ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೊಂದು ಮಾನವೀಯ ವಿಷಯವಾಗಿದೆ ಎಂದು ನ್ಯಾಯಾಲಯದ ಗಮನಸೆಳೆದರು.