ಸುದ್ದಿಗಳು

ತುಳಿತಕ್ಕೊಳಗಾದ ಸಮುದಾಯಗಳಿಗೆ ಹಾನಿ: ಗ್ಯಾರಂಟಿ ಫಲಾನುಭವಿಗಳಿಗೆ ನಗದು ಬಿಡುಗಡೆಗೆ ತಡೆ ನೀಡಲು ಹೈಕೋರ್ಟ್‌ ನಕಾರ

ನೀತಿ ಸಂಹಿತೆ ಜಾರಿಯಾದ ಮೇಲೆ ಹಣ ನೀಡುವುದೇ ಅಥವಾ ನೀತಿ ಸಂಹಿತೆ ಜಾರಿಯಾಗುವುದಕ್ಕೆ ಮೊದಲೇ ನೀಡುವುದೇ ಎಂಬುದು ಇಲ್ಲಿ ವಿಷಯ. ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವುದಕ್ಕೂ ಮುನ್ನ ಸರ್ಕಾರವು ಆಯೋಗದಿಂದ ಅನುಮತಿ ಪಡೆದಿಲ್ಲ ಎಂದ ಅರುಣ್‌ ಶ್ಯಾಮ್‌.

Bar & Bench

“ನ್ಯಾಯಾಲಯ ಮಾಡುವ ಯಾವುದೇ ಆದೇಶವು ಅಂತಿಮವಾಗಿ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಹಾನಿ ಮಾಡಲಿದೆ. ರಾಜ್ಯ ಸರ್ಕಾರ ನೀತಿ ಜಾರಿಗೊಳಿಸಿದ್ದು, ಅದನ್ನು ಮುಂದುವರಿಸುತ್ತಿದೆ” ಎಂದಿರುವ ಕರ್ನಾಟಕ ಹೈಕೋರ್ಟ್‌, ಬಾಗಲಕೋಟೆ ಮತ್ತು ದಾವಣೆಗೆರೆ ವಿಧಾನಸಭೆ ಉಪಚುನಾವಣೆ ಮುಗಿಯುವವರೆಗೆ ಗೃಹಲಕ್ಷ್ಮಿ, ಯುವನಿಧಿ, ಗೃಹ ಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳ ಭಾಗವಾಗಿ ನಗದು ಬಿಡುಗಡೆ ಮಾಡದಂತೆ ತಡೆ ನೀಡಬೇಕು ಎಂಬುದಕ್ಕೆ ನಿರಾಕರಿಸಿದೆ.

ಆರೇಳು ತಿಂಗಳಿಂದ ಗ್ಯಾರಂಟಿ ಯೋಜನೆಗಳ ಭಾಗವಾಗಿ ನಗದು ಬಿಡುಗಡೆಯನ್ನು ತಡೆಹಿಡಿಯಲಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಉಪಚುನಾವಣೆಯನ್ನು ಕೇಂದ್ರೀಕರಿಸಿ ಏಕಕಾಲಕ್ಕೆ ಬಾಕಿ ಪಾವತಿಸುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿರುವ ಗೌತಮ್‌ ಕುಮಾರ್‌ ಜೈನ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Sachin Shankar Magadum

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಚುನಾವಣಾ ಆಯೋಗವು ಶಕ್ತಿಯುತವಾಗಿದ್ದು, ಕಾನೂನಿನ ಅನ್ವಯ ಅವರು ಕ್ರಮಕೈಗೊಳ್ಳಲಿದ್ದಾರೆ. ಆರು ತಿಂಗಳಿಂದ ಗ್ಯಾರಂಟಿ ಯೋಜನೆಗಳ ಹಣ ನೀಡಲಾಗಿಲ್ಲ ಎಂಬುದಕ್ಕೆ ದಾಖಲೆ ಸಲ್ಲಿಸಬೇಕು. ಅದನ್ನು ನಾವು ತೋರಿಸಿದರೆ ಅರ್ಜಿದಾರರಿಗೆ ದಂಡ ಹಾಕಬೇಕು, ಫೆಬ್ರವರಿವರೆಗೆ ಎಲ್ಲವನ್ನೂ ವಿತರಿಸಿರುವುದಕ್ಕೆ ದಾಖಲೆ ಸಲ್ಲಿಸುತ್ತೇನೆ. ಒಂದೆರಡು ತಿಂಗಳು ವಿಳಂಬವಾಗಿರಬಹುದು. ಚುನಾವಣಾ ಆಯೋಗವು ಹಲ್ಲಿಲ್ಲದ ಹಾವಲ್ಲ. ನಾವು ನಿಯಮ ಉಲ್ಲಂಘಿಸಿದರೆ ಅವರು ಕ್ರಮಕೈಗೊಳ್ಳುತ್ತಾರೆ” ಎಂದರು.

ಮುಂದುವರಿದು, “ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಯುವನಿಧಿ ಫಲಾನುಭವಿಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಇದು 2,500-4,000 ಇರಬೇಕು. ಬಾಗಲಕೋಟೆ, ದಾವಣಗೆರೆ ಮತ್ತು ಇನ್ನೊಂದು ಜಿಲ್ಲೆ ಸೇರಿ ಮೂರು ಜಿಲ್ಲೆಗಳಿಂದ 58 ಸಾವಿರ ಗೃಹ ಲಕ್ಷ್ಮಿ ಫಲಾನುಭವಿಗಳಿದ್ದಾರೆ. ಫಲಾನುಭವಿಗಳನ್ನು ನೀತಿ ಸಂಹಿತೆ ಜಾರಿಯಾಗುವುದಕ್ಕೂ ಮುನ್ನ ಪತ್ತೆ ಮಾಡಿದ್ದರೆ ಅದನ್ನು ಮುಂದುವರಿಸಬಹುದು ಎಂಬುದು ನಿಯಮವಾಗಿದೆ” ಎಂದರು.

ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳನ್ನು ಸರ್ಕಾರವು ಸರಿಯಾಗಿ ಜಾರಿಗೊಳಿಸಿಲ್ಲ. ಆರು ತಿಂಗಳಿಂದ ಅನ್ನಭಾಗ್ಯ ನೀಡಲಾಗಿಲ್ಲ. ನೀತಿ ಸಂಹಿತೆ ಜಾರಿಯಾದ ಮೇಲೆ ಹಣ ನೀಡುವುದೇ ಅಥವಾ ನೀತಿ ಸಂಹಿತೆ ಜಾರಿಯಾಗುವುದಕ್ಕೆ ಮೊದಲೇ ನೀಡುವುದೇ ಎಂಬುದು ಇಲ್ಲಿ ವಿಷಯವಾಗಿದೆ. ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವುದಕ್ಕೂ ಮುನ್ನ ಸರ್ಕಾರವು ಆಯೋಗದಿಂದ ಅನುಮತಿ ಪಡೆದಿಲ್ಲ. ಚುನಾವಣೆ ಮುಗಿಯುವವರೆಗೆ ಹಣ ಬಿಡುಗಡೆ ಮಾಡಬಾರದು ಎಂಬುದು ನಮ್ಮ ಕೋರಿಕೆ. ಉಚಿತ ಉಡುಗೊರೆಗಳು ದೇಶದ ಬೆಳವಣಿಗೆಗೆ ಮಾರಕ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಮಾರ್ಚ್‌ 23ರಂದು ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದೆ. ಅದು ನೀತಿ ಸಂಹಿತೆ ಜಾರಿಯಾದ ಮೇಲೆ ಹಣ ಬಿಡುಗಡೆ ಮಾಡಲಾಗಿದೆ. ಉಪಚುನಾವಣೆ ನಡೆಯುತ್ತಿರುವ ಜಿಲ್ಲೆಗಳಲ್ಲಿ ಆಯೋಗದ ಅನುಮತಿ ಪಡೆದು, ಬಿಡುಗಡೆ ಮಾಡಲಿ. ಆರು ತಿಂಗಳಿಂದ ಅನ್ನ ಭಾಗ್ಯ ನೀಡಲಾಗಿಲ್ಲ. ನೀತಿ ಸಂಹಿತೆ ಜಾರಿಯಾದ ಬಳಿಕ ಫಲಾನುಭವಿಗಳ ಸಂಖ್ಯೆಯನ್ನು ಸರ್ಕಾರ ಹೆಚ್ಚಿಸಿದೆ. ಬಾಗಲಕೋಟೆಯಲ್ಲಿ ಜನವರಿ 2026ಕ್ಕೆ 3,75,268 ಇದ್ದಿದ್ದು, 25.3.2026ಕ್ಕೆ 3,76,001ಕ್ಕೆ ಏರಿಕೆಯಾಗಿದೆ” ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಎಲ್ಲವನ್ನೂ ಪರಿಶೀಲಿಸಬೇಕಾಗುತ್ತದೆ ಎಂದು ಹೇಳಿ, ಮಧ್ಯಂತರ ತಡೆಗೆ ನಿರಾಕರಿಸಿ, ವಿಚಾರಣೆ ಮುಂದೂಡಿತು.