Jharkhand High Court and Section 498A 
ಸುದ್ದಿಗಳು

ವರದಕ್ಷಿಣೆ ತಾರದ ಕಾರಣಕ್ಕೆ ಕ್ಯಾನ್ಸರ್ ಪೀಡಿತ ಪತ್ನಿಗೆ ಚಿಕಿತ್ಸೆ ಕೊಡಿಸದಿರುವುದು ಕ್ರೌರ್ಯ: ಜಾರ್ಖಂಡ್ ಹೈಕೋರ್ಟ್

ತನ್ನ ಪತ್ನಿ ವಿರುದ್ಧ ಆರೋಪಿ-ಪತಿ ಸಂಜಯ್ ಕುಮಾರ್ ರೈ ಕ್ರೌರ್ಯ ಎಸಗಿದ ಆರೋಪವನ್ನು ನ್ಯಾಯಮೂರ್ತಿ ಅಂಬುಜ ನಾಥ್ ಅವರಿದ್ದ ಪೀಠ ಎತ್ತಿಹಿಡಿದಿದೆ.

Bar & Bench

ವರದಕ್ಷಿಣೆಯ ಬೇಡಿಕೆ ಈಡೇರಿಸಿಕೊಳ್ಳುವುದಕ್ಕಾಗಿ ಎಂಬ ಕಾರಣಕ್ಕೆ ತನ್ನ ಸಂಗಾತಿಗೆ ವೈದ್ಯಕೀಯ ನೆರವು ನೀಡದಿರುವುದು ಐಪಿಸಿ ಸೆಕ್ಷನ್‌ 498 ಎ ಅಡಿಯಲ್ಲಿ ಕ್ರೌರ್ಯ ಎನಿಸಿಕೊಳ್ಳುತ್ತದೆ ಎಂದು ಜಾರ್ಖಂಡ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಸಂಜಯ್ ಕುಮಾರ್ ರೈ ಮತ್ತಿತರರು ಹಾಗೂ ರಾಜ್ಯ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ತನ್ನ ಪತ್ನಿ ವಿರುದ್ಧ ಆರೋಪಿ-ಪತಿ ಸಂಜಯ್ ಕುಮಾರ್ ರೈ ಕ್ರೌರ್ಯ ಎಸಗಿದ ಆರೋಪವನ್ನು ನ್ಯಾಯಮೂರ್ತಿ ಅಂಬುಜ್‌ ನಾಥ್ ಅವರಿದ್ದ ಪೀಠ ಎತ್ತಿಹಿಡಿದಿದೆ. ಈ ಕಾರಣಕ್ಕೆ ಆತ ಅಪರಾಧಿ ಎಂದು ಅದು ಹೇಳಿದೆ.

"ವರದಕ್ಷಿಣೆಯ ಬೇಡಿಕೆಈಡೇರಿಸಿಕೊಳ್ಳುವುದಕ್ಕಾಗಿ ತನ್ನ ಸಂಗಾತಿಗೆ ಸೂಕ್ತ ವೈದ್ಯಕೀಯ ನೆರವು ನೀಡದಿರುವುದು ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಕ್ರೌರ್ಯದ ವ್ಯಾಖ್ಯಾನದ ವ್ಯಾಪ್ತಿಗೆ ಬರುತ್ತದೆ. ವರದಕ್ಷಿಣೆಯ ಬೇಡಿಕೆ ಈಡೇರಿಕೆಗಾಗಿ ತನ್ನ ಪತ್ನಿ ನೀಲಂ ದೇವಿ ಅವರನ್ನು ಕ್ರೌರ್ಯಕ್ಕೆ ಒಳಪಡಿಸಿದ್ದಕ್ಕಾಗಿ ಐಪಿಸಿ ಸೆಕ್ಷನ್‌ 498 ಎ ಅಡಿಯಲ್ಲಿ ಅರ್ಜಿದಾರ ಸಂಜಯ್‌ ಕುಮಾರ್‌ ರೈ ಅಲಿಯಾಸ್‌ ಸಂಜಯ್ ಕುಮಾರ್ ರಾಯ್ ಅವರು ತಪ್ಪಿತಸ್ಥ ಎಂದು ವಿಚಾರಣಾ ನ್ಯಾಯಾಲಯ ಮತ್ತು ಮೇಲ್ಮನವಿ ನ್ಯಾಯಾಲಯ ಸೂಕ್ತ ರೀತಿಯಲ್ಲಿ ಕಂಡುಕೊಂಡಿವೆ” ಎಂದು ಪೀಠ ಹೇಳಿದೆ.

ನ್ಯಾಯಾಲಯ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಕ್ರಿಮಿನಲ್ ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸಿತು. ಪತಿ ಸಂಜಯ್ ಕುಮಾರ್ ರೈ ಐಪಿಸಿಯ ಸೆಕ್ಷನ್ 498 ಎ ಅಡಿಯಲ್ಲಿ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ, ತನಗೆ ಕಿರುಕುಳ ನೀಡುತ್ತಿದ್ದ ಗಂಡನ ಮನೆಯ ಸದಸ್ಯರನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಪತ್ನಿ ನೀಲಮ್ ದೇವಿ ಸಲ್ಲಿಸಿದ್ದ ಅರ್ಜಿ (ಅರ್ಜಿಯನ್ನು ಆಕೆಯ ಮರಣದ ಬಳಿಕ ತಂದೆ ವಹಿಸಿಕೊಂಡಿದ್ದರು) ಹಾಗೂ ಸಂತ್ರಸ್ತೆಯ ಮೈದುನನನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಂತ್ರಸ್ತೆಯ ತಂದೆ ಸಲ್ಲಿಸಿದ್ದ ಅರ್ಜಿ ಇವುಗಳಲ್ಲಿ ಸೇರಿವೆ.

ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ ಸಂತ್ರಸ್ತೆಗೆ ವೈದ್ಯಕೀಯ ನೆರವು ನೀಡಲು ಪತಿ ವಿಫಲರಾಗಿದ್ದಾರೆ ಎಂದು ಹೈಕೋರ್ಟ್‌ ತೀರ್ಪು ನೀಡಿದೆ. ತನ್ನ ಹೆಂಡತಿಯನ್ನು ಕ್ರೌರ್ಯಕ್ಕೆ ಒಳಪಡಿಸಿದ್ದಕ್ಕಾಗಿ ಐಪಿಸಿಯ ಸೆಕ್ಷನ್ 498 ಎ ಅಡಿಯಲ್ಲಿ ಗಂಡ ತಪ್ಪಿತಸ್ಥನೆಂದು ಸರಿಯಾಗಿ ತೀರ್ಪು ನೀಡಿದೆ ಎಂದು ಹೈಕೋರ್ಟ್ ಹೇಳಿದೆ.

ಗಂಡನ ಮನೆಯ ಸದಸ್ಯರು ತನ್ನನ್ನು ಅನುಚಿತವಾಗಿ ನಡೆಸಿಕೊಂಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಅಸ್ಪಷ್ಟ ಹೇಳಿಕೆ ನೀಡಿದ್ದು ಆಕೆಗೆ ಅವರು ಯಾವುದೇ ಗಾಯ ಉಂಟು ಮಾಡಿಲ್ಲ  ಎಂದು ನ್ಯಾಯಾಲಯ ತೀರ್ಮಾನಿಸಿದೆ. ಈ ಕುರಿತು ಪ್ರಾಸಿಕ್ಯೂಷನ್‌ ಬಲವಾದ ಸಾಕ್ಷ್ಯ ಒದಗಿಸದ ಹಿನ್ನೆಲೆಯಲ್ಲಿ ಅತ್ತೆ- ಮಾವಂದಿರನ್ನು ಖುಲಾಸೆಗೊಳಿಸಿದ್ದ ಕೆಳ ನ್ಯಾಯಾಲಯಗಳ ತೀರ್ಪನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.