Calcutta High Court
Calcutta High Court 
ಸುದ್ದಿಗಳು

ಸ್ತ್ರೀಧನ ಸೇರಿ ಮಹಿಳೆ ಪಡೆಯಬಹುದಾದ ಯಾವುದೇ ಆರ್ಥಿಕ ಸಂಪನ್ಮೂಲ ಕಸಿಯುವುದು ಕೌಟುಂಬಿಕ ದೌರ್ಜನ್ಯ: ಕಲ್ಕತ್ತಾ ಹೈಕೋರ್ಟ್

Bar & Bench

ಮಹಿಳೆಯ ಸ್ತ್ರೀಧನ ಅಥವಾ ಆಕೆ ಪಡೆಯಬಹುದಾದ ಯಾವುದೇ ಆರ್ಥಿಕ ಸಂಪನ್ಮೂಲವನ್ನು ಕಸಿದುಕೊಳ್ಳುವುದು ಕೌಟುಂಬಿಕ ದೌರ್ಜನ್ಯದಿಂದ ಮಹಿಳೆರಯ ಸಂರಕ್ಷಣಾ ಕಾಯಿದೆ- 2005ರ ಅಡಿ ಕೌಟುಂಬಿಕ ಹಿಂಸೆ ಎಂದು ಕಲ್ಕತ್ತಾ ಹೈಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ [ನಂದಿತಾ ಸರ್ಕಾರ್ ಮತ್ತು ತಿಲಕ್ ಸರ್ಕಾರ್ ನಡುವಣ ಪ್ರಕರಣ].

ಸ್ತ್ರೀಧನ ಎನ್ನುವುದು ಉತ್ತರ ಭಾರತದಲ್ಲಿ ಒಬ್ಬ ಮಹಿಳೆಯ ಮದುವೆಯ ವೇಳೆ ಆಕೆಯ ಕುಟುಂಬ ಸ್ವಯಂಪ್ರೇರಣೆಯಿಂದ ಆಕೆಗೆ ನೀಡುವ ಉಡುಗೊರೆ/ಕಾಣಿಕೆ.

ಕೌಟುಂಬಿಕ ದೌರ್ಜನ್ಯದಿಂದ ಮಹಿಳೆರಯ ಸಂರಕ್ಷಣಾ ಕಾಯಿದೆ- 2005ರ ವ್ಯಾಪ್ತಿಯಲ್ಲಿ ʼಆರ್ಥಿಕ ದುರುಪಯೋಗʼವೂ ಸೇರಿದೆ ಎಂದು ನ್ಯಾ. ಸುಭೇಂದು ಸಮಂತ ಅವರಿದ್ದ ಏಕಸದಸ್ಯ ಪೀಠ  ತಿಳಿಸಿದೆ.

“ನೊಂದ ವ್ಯಕ್ತಿಗೆ ಯಾವುದೇ ಕಾನೂನಿನಡಿ ಅವರು ಅರ್ಹತೆ ಹೊಂದಿರುವ ಯಾವುದೇ ಆರ್ಥಿಕ ಅಥವಾ ಹಣಕಾಸಿನ ಸಂಪನ್ಮೂಲ ನೀಡಬೇಕಿದ್ದು ಇದರಿಂದ ಅರ್ಜಿದಾರರನ್ನು ವಂಚಿತರನ್ನಾಗಿ ಮಾಡಿರುವುದು ಕೂಡ ಕೌಟುಂಬಿಕ ಹಿಂಸಾಚಾರವಾಗುತ್ತದೆ. ಈ ಪ್ರಕರಣದಲ್ಲಿ ಅರ್ಜಿದಾರರು ಪ್ರತಿವಾದಿಗಳ ಸುಪರ್ದಿಯಲ್ಲಿರುವ ಸ್ತ್ರೀಧನವನ್ನು ದೀರ್ಘಕಾಲದಿಂದ ಪಡೆಯದೆ ವಂಚಿತರಾಗಿದ್ದಾರೆ. ಈ ಸಂಗತಿ ಕೌಟುಂಬಿಕ ಹಿಂಸಾಚಾರಕ್ಕೆ ಸಮ” ಎಂದು ನ್ಯಾಯಾಲಯ ಹೇಳಿದೆ.

ಪತಿ ಸಾವನ್ನಪ್ಪಿದ ಬಳಿಕ ಆತನ ಮನೆ ತೊರೆದಿದ್ದ ವಿಧವೆಯೊಬ್ಬರಿಗೆ ಪರಿಹಾರ ಮತ್ತು ಇತರೆ ಆರ್ಥಿಕ ಸೌಲಭ್ಯ ಕಲ್ಪಿಸಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವೊಂದು ಆದೇಶ ಹೊರಡಿಸಿತ್ತು. ಈ ಆದೇಶವನ್ನು ಹೌರಾದ ಸೆಷನ್ಸ್ ನ್ಯಾಯಾಧೀಶರು ರದ್ದುಗೊಳಿಸಿದ್ದರು. ಹೌರಾದ ನ್ಯಾಯಾಲಯ ನೀಡಿದ್ದ ಆದೇಶವನ್ನು ಪೀಠ ಇದೀಗ ವಜಾಗೊಳಿಸಿದೆ.  

ವಿಧವೆಯು ವೈವಾಹಿಕ ಮನೆಯನ್ನು ತೊರೆಯುವುದಕ್ಕೆ ಎರಡು ಕಾರಣಗಳು ಇರಬಹುದು ಎಂದು ಹೈಕೋರ್ಟ್ ಹೇಳಿದೆ. "ಮೊದಲನೆಯದಾಗಿ, ವಿಧವೆ ತನ್ನ ಗಂಡ ಇಲ್ಲದಿರುವಾಗ ಒಂಟಿತನ ಅನುಭವಿಸಿ ತನ್ನ ತಂದೆಯ ಮನೆಯಲ್ಲಿ ಆರಾಮದಾಯಕವಾದ ಆಶ್ರಯ ಪಡೆದಿರಬಹುದು; ಎರಡನೆಯದಾಗಿ, ಆಕೆಯ ಗಂಡನ ಮನೆಯವರೊಂದಿಗೆ ಯಾವುದೇ ಉತ್ತಮ ಸಂಬಂಧಗಳು ಇಲ್ಲದೆ ಹೋಗಿರಬಹುದು; ಅಂದರೆ ಮಹಿಳೆ ತನ್ನ ವೈವಾಹಿಕ ಮನೆಯಲ್ಲಿ ಉತ್ತಮ ಬದುಕು ಹೊಂದಿಲ್ಲದೇ ಇರಬಹುದು." ಪೀಠ ತಿಳಿಸಿದೆ.

ವಿಧವೆಯ ಸಂಪೂರ್ಣ ವಿವರಗಳನ್ನು ಗಮನಿಸದೆ ಸೆಷನ್ಸ್‌ ನ್ಯಾಯಾಲಯ ಅನ್ಯಾಯ ಮಾಡಿದೆ ಎಂದು ಕೂಡ ನ್ಯಾಯಾಲಯ ಹೇಳಿದೆ.  ಇದಲ್ಲದೆ ಆಕೆ ಯಾವುದೇ ಸ್ವತಂತ್ರ ಆದಾಯ ಮೂಲವನ್ನೂ ಹೊಂದಿಲ್ಲ ಎಂಬ ವಿಚಾರವನ್ನು ಪೀಠ ಗಣನೆಗೆ ತೆಗೆದುಕೊಂಡಿತು.