RSS Leader Kalladka Prabhakar Bhat and Karnataka HC 
ಸುದ್ದಿಗಳು

[ಮುಸ್ಲಿಮ್‌‌ ಮಹಿಳೆಯರ ವಿರುದ್ಧದ ಭಾಷಣ] ಭಟ್‌ ಭಾಷಣದ ಲಿಖಿತ ರೂಪವನ್ನು ಪ್ರಾಸಿಕ್ಯೂಷನ್‌ ಸಲ್ಲಿಸಲಿ: ವಕೀಲ ಬಾಲನ್‌

ತನ್ನ ವಿರುದ್ಧದ ಎಫ್‌ಐಆರ್‌ ರದ್ದತಿ ಕೋರಿ ಪ್ರಭಾಕರ ಭಟ್  ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Bar & Bench

ಮುಸ್ಲಿಮ್ ಮಹಿಳೆಯರು ಮತ್ತು ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಆರೋಪಕ್ಕೆ ಗುರಿಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಸರ್ಕಾರದ ವಕೀಲರು ನೀಡಿರುವ ಮುಚ್ಚಳಿಕೆಯನ್ನು ಫೆಬ್ರವರಿ 16ರವರೆಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಿಸ್ತರಿಸಿದೆ.

ತನ್ನ ವಿರುದ್ಧದ ಎಫ್‌ಐಆರ್‌ ರದ್ದತಿ ಕೋರಿ ಪ್ರಭಾಕರ ಭಟ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರ ಪ್ರಭಾಕರ ಭಟ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ಆಕ್ಷೇಪಾರ್ಹ ಎನ್ನಲಾದ ಪ್ರಭಾಕರ ಭಟ್ ಅವರ ಭಾಷಣದ ಲಿಖಿತ ರೂಪವನ್ನು ಪೀಠಕ್ಕೆ ಸಲ್ಲಿಸಿದರು.

ಇದಕ್ಕೆ ದೂರುದಾರೆ ನಜ್ಮಾ ನಜೀರ್‌ ಪರ ವಕೀಲ ಎಸ್.ಬಾಲನ್, "ಈ ಪ್ರತಿಯನ್ನು ಪ್ರಾಸಿಕ್ಯೂಷನ್ ನೀಡಬೇಕು. ಅರ್ಜಿದಾರರ ಪರ ವಕೀಲರಲ್ಲ" ಎಂದು ಅಕ್ಷೇಪಿಸಿದರು.

ಈ ಕುರಿತಂತೆ ಮುಂದಿನ ವಿಚಾರಣೆಯಲ್ಲಿ ವಾದ ಆಲಿಸುವುದಾಗಿ ತಿಳಿಸಿದ ಪೀಠವು ಮಧ್ಯಂತರ ಆದೇಶ ವಿಸ್ತರಿಸಿ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿತು.