Karnataka HC & Justices S Sunil Dutt Yadav and C M Poonacha 
ಸುದ್ದಿಗಳು

ನ್ಯಾಯಾಂಗ ಆದೇಶದ ಹೊರತಾಗಿಯೂ ಪತಿಯ ವಶಕ್ಕೆ ಮಗು ಒಪ್ಪಿಸದ ಮಹಿಳೆ ವಿರುದ್ಧ ಜಾಮೀನುರಹಿತ ವಾರೆಂಟ್‌ ಜಾರಿ

ಮಗುವನ್ನು ಅರ್ಜಿದಾರ ಪತಿಯ ಸುಪರ್ದಿಗೆ ನೀಡುವಂತೆ 2023ರ ಜನವರಿ 31ರಂದು ನೀಡಿದ ಆದೇಶವನ್ನು ಪತ್ನಿ ಪಾಲಿಸಿಲ್ಲ. ಆ ಮೂಲಕ ಪತ್ನಿ ನ್ಯಾಯಾಲಯದ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂದಿರುವ ನ್ಯಾಯಾಲಯ.

Bar & Bench

ಅಕ್ರಮ ಸಂಬಂಧಕ್ಕೆ ಹೆಚ್ಚು ಮಹತ್ವ ನೀಡಿರುವುದನ್ನು ಪರಿಗಣಿಸಿ ಮಗುವನ್ನು ಪತಿಯ ಸುಪರ್ದಿಗೆ ಒಪ್ಪಿಸಲು ಹೊರಡಿಸಿದ್ದ ತನ್ನ ಆದೇಶ ಪಾಲಿಸದ ಮಹಿಳೆ ವಿರುದ್ಧ ಗುರುವಾರ ಕರ್ನಾಟಕ ಹೈಕೋರ್ಟ್‌ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ನ್ಯಾಯಾಲಯದ ಆದೇಶದ ಹೊರತಾಗಿಯೂ ಮಗುವನ್ನು ತನ್ನ ಸುಪರ್ದಿಗೆ ನೀಡದ ಪತ್ನಿಯ ಧೋರಣೆ ಆಕ್ಷೇಪಿಸಿ ಪತಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸುನಿಲ್‌ ದತ್ ಯಾದವ್ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ನಡೆಸಿತು.

ಮಗುವನ್ನು ಅರ್ಜಿದಾರ ಪತಿಯ ಸುಪರ್ದಿಗೆ ನೀಡುವಂತೆ 2023ರ ಜನವರಿ 31ರಂದು ನೀಡಿದ ಆದೇಶವನ್ನು ಪತ್ನಿ ಪಾಲಿಸಿಲ್ಲ. ಆ ಮೂಲಕ ಪತ್ನಿ ನ್ಯಾಯಾಲಯದ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ನಡವಳಿಕೆಯನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಬೇಕಿದೆ. ಕಠಿಣ ಕ್ರಮ ಕೈಗೊಳ್ಳವರೆಗೂ ನ್ಯಾಯಾಲಯದ ಮುಂದೆ ಆಕೆ ಹಾಜರಾಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಮತ್ತೊಂದಡೆ ಪತ್ನಿಯ ಈ ನಡೆ ನ್ಯಾಯಾಂಗ ಪ್ರಕ್ರಿಯೆ ದುರ್ಬಳಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಲಯವು ಆಕೆಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.

ಅರ್ಜಿಯ ಮುಂದಿನ ವಿಚಾರಣೆ ವೇಳೆ ಅರ್ಜಿದಾರರ ಪತ್ನಿಯು ನ್ಯಾಯಾಲಯದ ಮುಂದೆ ಹಾಜರಾಗುವಂತೆ ನಗರ ಪೊಲೀಸ್ ಆಯುಕ್ತರು ನೋಡಿಕೊಳ್ಳಬೇಕು. ಈ ವೇಳೆ ಮಗುವೂ ಜೊತೆಯಲ್ಲಿರುವಂತೆ ಖಚಿತಪಡಿಸಿಕೊಳ್ಳಬೇಕು. ಮಗುವನ್ನು ನ್ಯಾಯಾಲಯಕ್ಕೆ ಕರೆತರುವಾಗ ಎಲ್ಲಾ ಸುರಕ್ಷತೆ ಮತ್ತು ಕಾಳಜಿ ಕ್ರಮಗಳನ್ನು ಪೊಲೀಸರು ಕೈಗೊಳ್ಳಬೇಕು ಎಂದು ಆದೇಶದಲ್ಲಿ ಪೀಠವು ನಿರ್ದೇಶಿಸಿದೆ.

ಸರ್ಕಾರಿ ಅಭಿಯೋಜಕ ವಿ ಎಸ್‌ ಹೆಗ್ಡೆ ಅವರು “ನ್ಯಾಯಾಲಯವು ಪ್ರಕರಣ ಸಂಬಂಧ ಮಹಿಳೆಗೆ ಹಿಂದೆ ನೋಟಿಸ್ ನೀಡಿದಾಗ ಅರ್ಜಿದಾರರ ಪತ್ನಿ ರಿಜಿಸ್ಟ್ರಿಯಲ್ಲಿ ಮೆಮೊ ಸಲ್ಲಿಸಿದ್ದಾರೆ. ಇದರಿಂದ ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೆ ಇರುವುದು ಆಕೆಗೆ ತಿಳಿದಿರುವುದು ಸ್ಪಷ್ಟವಾಗುತ್ತದೆ. ಆದರೂ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಆಕೆ ತಪ್ಪಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಸಾಕಷ್ಟು ಶ್ರಮ ವಹಿಸಿದರೂ ಆಕೆಯನ್ನು ಪತ್ತೆ ಹಚ್ಚಲಾಗಿಲ್ಲ. ಆಕೆ ಮನೆ ಖಾಲಿ ಮಾಡಿದ್ದು, ಕಚೇರಿಯಲ್ಲೂ ಲಭ್ಯವಾಗುತ್ತಿಲ್ಲ. ದೆಹಲಿಯಲ್ಲಿ ನೆಲೆಸಿದ್ದಾರೆ ಎಂಬ ಬಗ್ಗೆ ಮಾಹಿತಿಯಿದ್ದು, ನೋಟಿಸ್ ಜಾರಿಗೊಳಿಸಲು ಪ್ರಯತ್ನಿಸಲಾಗಿದೆ. ವಿದೇಶಿ ಪ್ರಾದೇಶಿಕ ನೋಂದಣಿ ಅಧಿಕಾರಿಗೂ ಪ್ರಕರಣದ ಕುರಿತು ಮಾಹಿತಿ ನೀಡಿದ್ದು, ಲುಕ್‌ಔಟ್ ನೋಟಿಸ್ ಸಹ ಜಾರಿಗೊಳಿಸಲಾಗಿದೆ” ಎಂದು ಪೀಠದ ಗಮನಕ್ಕೆ ತಂದರು.

ಇದನ್ನು ಪರಿಗಣಿಸಿದ ನ್ಯಾಯಾಲಯವು ಮಹಿಳೆ ಕರ್ನಾಟಕದ ವ್ಯಾಪ್ತಿಯಿಂದ ಹೊರಗಿದ್ದರೆ ಸಂಬಂಧಪಟ್ಟದ ಪೋಲೀಸರು ಅಧಿಕಾರಿಗಳು ನ್ಯಾಯಾಲಯ ಹೊರಡಿಸಿರುವ ಜಾಮೀನು ರಹಿತ ವಾರೆಂಟ್ ಜಾರಿಗೆ ಸಹಕರಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮುಂದೂಡಿದೆ.

ಅರ್ಜಿದಾರರು ಮತ್ತವರ ಪತ್ನಿ ನಡುವೆ ಕೌಟುಂಬಿಕ ವ್ಯಾಜ್ಯವಿತ್ತು. ತಾಯಿ ಬಳಿಯಿರುವ ಮಗನನ್ನು ತನ್ನ ಸುಪರ್ದಿಗೆ ಒಪ್ಪಿಸುವಂತೆ ಪತ್ನಿಗೆ ನಿರ್ದೇಶಿಸುವಂತೆ ಕೋರಿ ಅರ್ಜಿದಾರ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ್ದ ನ್ಯಾಯಾಲಯವು ಒಂದು ತಿಂಗಳಲ್ಲಿ ಮಗುವನ್ನು ಪತಿಯ ವಶಕ್ಕೆ ನೀಡುವಂತೆ ಪತ್ನಿಗೆ 2022ರ ಮಾರ್ಚ್‌ 3ರಂದು ನಿರ್ದೇಶಿಸಿತ್ತು. ಆದರೆ, ಮಗವನ್ನು ತನ್ನ ಸುಪರ್ದಿಗೆ ನೀಡದ ಹಿನ್ನೆಲೆಯಲ್ಲಿ ಅಕ್ರಮ ಬಂಧನ ಆರೋಪ ಸಂಬಂಧ ಪತ್ನಿ ವಿರುದ್ಧ ಪತಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪತ್ನಿ ಬೇರೆ ವ್ಯಕ್ತಿಯೊಂದಿಗಿನ ಅಕ್ರಮ ಸಂಬಂಧದ ಹೊಂದಿರುವ ವಿಚಾರ ತಿಳಿದ ಹೈಕೋರ್ಟ್, ಮಗನ ಯೋಗಕ್ಷೇಮಕ್ಕಿಂತ ಅಕ್ರಮ ಸಂಬಂಧಕ್ಕೆ ಆಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಮಗುವಿನ ನೆಮ್ಮದಿ ಮತ್ತು ಭಾವನಾತ್ಮಕತೆಯನ್ನಷ್ಟೇ ಪರಿಗಣಿಸಬಾರದು. ಮಗು ಬೆಳೆಯುವ ವಾತಾವರಣ ಮತ್ತು ಸುತ್ತಲಿನ ಪರಿಸ್ಥಿತಿ ಕಂಡು ಕಲಿಯಬಹುದಾದ ನೈತಿಕ ಮೌಲ್ಯ ಮತ್ತು ಮಗುವಿಗೆ ಸಿಗಬಹುದಾದ ಆರೈಕೆ ಮತ್ತು ವಾತ್ಸಲ್ಯವನ್ನೂ ಪರಿಗಣಿಸಬೇಕಾಗುತ್ತದೆ ಎಂದಿತ್ತು. ಮುಂದುವರೆದು ಮಗುವನ್ನು ಪತಿಯ ಸುಪರ್ದಿಗೆ ನೀಡುವಂತೆ 2023ರ ಜನವರಿ 31ರಂದು ನ್ಯಾಯಾಲಯವು ಪತ್ನಿಗೆ ಆದೇಶಿಸಿತ್ತು.