Drugs  
ಸುದ್ದಿಗಳು

ನೈಜೀರಿಯಾದ ಇಬ್ಬರು ಪ್ರಜೆಗಳ ಬಿಡುಗಡೆ; ಗಡಿಪಾರಿಗೆ ಎಫ್‌ಆರ್‌ಆರ್‌ಒಗೆ ಹಸ್ತಾಂತರಿಸಲು ನಿರ್ದೇಶಿಸಿದ ಹೈಕೋರ್ಟ್‌

ಎಸ್‌ಒಪಿಯಲ್ಲಿ ತಿಳಿಸಿರುವಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ರಚಿಸಬೇಕು ಹಾಗೂ ಸಮಿತಿ ರಚನೆಯ ಕುರಿತು ಈ ಆದೇಶದ ಪ್ರತಿ ಸ್ವೀಕರಿಸಿದ ದಿನಾಂಕದಿಂದ ನಾಲ್ಕು ತಿಂಗಳೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದಿರುವ ಹೈಕೋರ್ಟ್‌.

Bar & Bench

ಮಾದಕವಸ್ತು ಸಂಗ್ರಹ ಹಾಗೂ ಮಾರಾಟ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಿಡುಗಡೆಗೊಳಿಸಿರುವ ಕರ್ನಾಟಕ ಹೈಕೋರ್ಟ್, ಅಧಿಕೃತ ದಾಖಲೆಗಳಿಲ್ಲದೆ ಕಳೆದೊಂದು ದಶಕದಿಂದ ಭಾರತದಲ್ಲಿ ನೆಲೆಸಿರುವ ಅರ್ಜಿದಾರ ವಿದೇಶಿಗರು ಬಿಡುಗಡೆಗೊಂಡ ನಂತರ ದೇಶದಿಂದ ಗಡಿಪಾರು ಮಾಡಲು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಹಸ್ತಾಂತರಿಸಬೇಕು ಎಂದು ಆದೇಶಿಸಿದೆ.

ಅಕ್ರಮವಾಗಿ ಬಂಧನದಲ್ಲಿರಿಸಲಾಗಿರುವ ನಮ್ಮನ್ನು ಬಿಡುಗಡೆ ಮಾಡಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ನೈಜೀರಿಯಾ ಪ್ರಜೆಗಳಾದ (ಸದ್ಯ ಕೋಗಿಲು ಲೇ ಔಟ್‌ ವಿಳಾಸ ಹೊಂದಿರುವ) ಇಮೆಕಾ ಜೇಮ್ಸ್‌ ಐವೊಬಾ ಹಾಗೂ ವುಡೆರಿಕ್‌ ಫಿಡೆಲಿಸ್‌ ಸಲ್ಲಿಸಿದ್ದ ಅರ್ಜಿ ಕುರಿತು ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಬುಧವಾರ ಪ್ರಕಟಿಸಿತು.

ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ಪೀಠವು ಅರ್ಜಿದಾರರಿಗೆ ನೀಡಲಾದ ಬಂಧನದ ಕಾರಣಗಳು ದೋಷಪೂರಿತವಾಗಿರುವುದರಿಂದ ಹಾಗೂ ಬಂಧನದ ಕಾರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿರುವುದರಿಂದ ಅರ್ಜಿದಾರರು ಬಿಡುಗಡೆ ಹೊಂದಲು ಅರ್ಹರಾಗಿದ್ದಾರೆ. ಅರ್ಜಿದಾರರು ಬಿಡುಗಡೆಯಾದ ತಕ್ಷಣ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ 10 ವರ್ಷಗಳಿಗೂ ಹೆಚ್ಚು ಕಾಲ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಕಾರಣಕ್ಕಾಗಿ, ಅವರ ವಿರುದ್ಧದ ಕಾನೂನು ಪ್ರಕ್ರಿಯೆ ಹಿಂಪಡೆಯುವುದಕ್ಕೆ ಹಾಗೂ ಗಡೀಪಾರು ಮಾಡುವುದಕ್ಕೆ ಸಂಬಂಧಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್‌ಒಪಿ) ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲು ಅವರನ್ನು ಸಂಬಂಧಪಟ್ಟ ವ್ಯಾಪ್ತಿಯ ಎಫ್‌ಆರ್‌ಆರ್‌ಒಗೆ ಹಸ್ತಾಂತರಿಸಬೇಕು ಎಂದು ಆದೇಶಿಸಿದೆ.

ಇದೇ ವೇಳೆ, ಎಸ್‌ಒಪಿಯಲ್ಲಿ ತಿಳಿಸಿರುವಂತೆ ರಾಜ್ಯ ಮಟ್ಟದ ಪರಿಶೀಲನಾ (ಸ್ಕ್ರೀನಿಂಗ್) ಸಮಿತಿ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ (ಸ್ಕ್ರೀನಿಂಗ್) ಸಮಿತಿಯನ್ನು ರಚಿಸಬೇಕು ಹಾಗೂ ಸಮಿತಿ ರಚನೆಯ ಕುರಿತು ಈ ಆದೇಶದ ಪ್ರತಿ ಸ್ವೀಕರಿಸಿದ ದಿನಾಂಕದಿಂದ ನಾಲ್ಕು ತಿಂಗಳೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.

ಭಾರತದ ಸಂವಿಧಾನದ ವಿಧಿ 22(1)ರ ಪ್ರಕಾರ, ಬಂಧಿಸಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಆತನ ಬಂಧನಕ್ಕೆ ಕಾರಣಗಳನ್ನು ತಿಳಿಸುವುದು ಕಡ್ಡಾಯವಾಗಿದೆ. ಬಂಧನದ ಕಾರಣಗಳನ್ನು ತಿಳಿಸಬೇಕು ಎನ್ನುವುದು ಒಂದು ಕಡ್ಡಾಯವಾದ ಸಾಂವಿಧಾನಿಕ ರಕ್ಷಣೆಯಾಗಿದೆಯೇ ಹೊರತು ಅದು ಔಪಚಾರಿಕ ಕಾರ್ಯವಿಧಾನವಷ್ಟೇ ಅಲ್ಲ. 22ನೇ ವಿಧಿಯು ಕೇವಲ ನಾಗರಿಕ ಕೇಂದ್ರಿತವಲ್ಲದೆ, ವ್ಯಕ್ತಿ ಕೇಂದ್ರಿತವಾಗಿದೆ. ಈ ಹಿನ್ನೆಲೆಯಲ್ಲಿ ಅದರ ಅಡಿ‌ ದೊರೆತಿರುವ ಸಾಂವಿಧಾನಿಕ ರಕ್ಷಣೆಯು ಭಾರತದ ಭೂಪ್ರದೇಶದಲ್ಲಿರುವ ವಿದೇಶಿಗರಿಗೂ ಸೇರಿದಂತೆ ದೇಶದ ಎಲ್ಲ ಪ್ರಜೆಗಳಿಗೂ ಅನ್ವಯಿಸುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಬಂಧನದ ಕಾರಣಗಳನ್ನು ತಿಳಿಸಲು ಕಾನೂನು ಯಾವುದೇ ಕಟ್ಟುನಿಟ್ಟಾದ ಸ್ವರೂಪವನ್ನು ನಿಗದಿಪಡಿಸಿಲ್ಲ. ಬಂಧಿತ ವ್ಯಕ್ತಿಗೆ ಆತನ ಬಂಧನದ ಆಧಾರದ ಬಗ್ಗೆ ಅರಿವು ಮೂಡಿಸಿದರೆ, ಅದು ಕಾನೂನಿನ ಗಮನಾರ್ಹ ಪಾಲನೆ ಎಂದು ಪರಿಗಣಿಸಲ್ಪಡುತ್ತದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಂಗ ವಿಮರ್ಶೆಯು ಬಂಧನದ ಕಾರಣಗಳನ್ನು ತಿಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದಕ್ಕಷ್ಟೇ ಸೀಮಿತವಾಗಿರುತ್ತದೆಯೇ ಹೊರತು ಆ ಕಾರಣಗಳು ಸಮರ್ಪಕವಾಗಿವೆಯೇ ಅಥವಾ ಸರಿಯಾಗಿವೆಯೇ ಎಂಬ ಬಗ್ಗೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ.

ಆದೇಶ ಪ್ರಕಟಿಸಿದ ಬಳಿಕ ನ್ಯಾಯಾಲಯದಲ್ಲಿ ಹಾಜರಿದ್ದ ಉಪ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್ ಅವರು ಬಹುಶಃ ಎಸ್‌ಒಪಿಗೆ ಸಂಬಂಧಿಸಿದಂತೆ ದೇಶದಲ್ಲೇ ಮೊದಲ ತೀರ್ಪು ಇದಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ಇಂಥ ಜನರು ಒಂದಿಲ್ಲೊಂದು ಅಪರಾಧ ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿಯೇ ಸಿಲುಕಿಕೊಳ್ಳುತ್ತಾರೆ. ಆನಂತರ ಪ್ರಕರಣದ ವಿಚಾರಣೆ ಬಾಕಿ ಇದೆ ಎಂಬ ನೆಪದಲ್ಲಿ ಅವಧಿ ಮೀರಿ ಇಲ್ಲಿಯೇ ಉಳಿದುಕೊಳ್ಳಲು ಯತ್ನಿಸುತ್ತಾರೆ. ಇದಕ್ಕೆ ಎಸ್‌ಒಪಿಯೇ ಸರಿಯಾಗಿದೆ ಎಂದು ಮೌಖಿಕವಾಗಿ ಹೇಳಿತು.

ಪ್ರಕರಣದ ಹಿನ್ನೆಲೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಅರ್ಜಿದಾರರನ್ನು 2024ರ ಮೇ 12ರಂದು ನಗರದ ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಈ ವೇಳೆ, ಆರೋಪಿಗಳಿಂದ 400 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಅವರ ವಿರುದ್ಧ ಎನ್‌ಡಿಪಿಎಸ್ ಕಾಯಿದೆ ಹಾಗೂ ವಿದೇಶಿಯರ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವು ಬೆಂಗಳೂರಿನ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು.