D S Veeraiah (BJP former MLC) & Karnataka HC 
ಸುದ್ದಿಗಳು

ಅರಸು ಟ್ರಕ್‌ ಟರ್ಮಿನಲ್‌ ಹಗರಣ: ಬಿಜೆಪಿ ಮುಖಂಡ ವೀರಯ್ಯ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ತುಂಡು ಗುತ್ತಿಗೆಗೆ ಅನುಮತಿ ಇಲ್ಲದೆ ಹೋದರೂ ₹2 ಕೋಟಿ ಮೌಲ್ಯದ ಕೆಲಸಗಳನ್ನು ಟೆಂಡರ್‌ ಕರೆಯದೇ ಗುತ್ತಿಗೆ ನೀಡಬಹುದು ಎನ್ನುವ ರೀತಿಯಲ್ಲಿ ನಿಯಮಿತದ ದಾಖಲೆಗಳನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

Bar & Bench

ಕರ್ನಾಟಕ ಸರ್ಕಾರದ ಉದ್ದಿಮೆಯಾದ ಡಿ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದಲ್ಲಿ (ಡಿಡಿಯುಟಿಟಿಎಲ್‌) ನಡೆದಿದೆ ಎನ್ನಲಾಗಿದ್ದ ₹47.50 ಕೋಟಿ ಅಕ್ರಮ ಆರೋಪ ಸಂಬಂಧ ನಿಗಮದ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಡಿ ಎಸ್‌ ವೀರಯ್ಯ ವಿರುದ್ಧ ಸಕ್ಷಮ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆ ಮತ್ತು ಆರೋಪ ಪಟ್ಟಿಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ಡಿ ಎಸ್‌ ವೀರಯ್ಯ ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ.

ಅರ್ಜಿದಾರರ ಪರ ವಕೀಲರು “ಡಿಡಿಯುಟಿಟಿಎಲ್‌ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಶಂಕರಪ್ಪ ಮತ್ತು ಮಾಜಿ ಅಧ್ಯಕ್ಷ ವೀರಯ್ಯ ಪಿತೂರಿ ನಡೆಸಿ ಕಂಪನಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಆರೋಪವಾಗಿದೆ. ಈ ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ನಡೆಸಿಲ್ಲ ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 17ಎ ಅಡಿ ಅನುಮತಿ ಪಡೆದಿಲ್ಲ. ಪ್ರಾಥಮಿಕ ತನಿಖೆ ನಡೆಸದೆಯೂ ಆರೋಪ ಪಟ್ಟಿಯಲ್ಲಿ ವೀರಯ್ಯ ಅವರನ್ನು ಆರೋಪಿಯನ್ನಾಗಿಸಲಾಗಿದೆ. 2023ರ ಸೆಪ್ಟೆಂಬರ್‌ನಲ್ಲಿ ಅನಾಮಿಕರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಇದಾದ ಬಳಿಕ 9 ತಿಂಗಳು ತನಿಖೆ ನಡೆಸಲಾಗಿದೆ. ಆನಂತರ ಪಿಸಿ ಕಾಯಿದೆ ಸೆಕ್ಷನ್‌ 17ಎ ಅಡಿ ಪೂರ್ವಾನುಮತಿ ಕೋರಿದ್ದು, ಮೊದಲ ಆರೋಪಿ ಶಂಕರಪ್ಪ ವಿರುದ್ಧ ಪೂರ್ವಾನುಮತಿ ದೊರೆತಿದೆ. ಆದರೆ, ವೀರಯ್ಯ ವಿಚಾರದಲ್ಲಿ ಯಾವುದೇ ಪ್ರಕ್ರಿಯೆ ಪಾಲಿಸಿಲ್ಲ” ಎಂದಿದ್ದರು.

ಪ್ರಕರಣದ ಹಿನ್ನೆಲೆ: ಡಿ ದೇವರಾಜ್‌ ಅರಸ್‌ ಟ್ರಕ್‌ ಟರ್ಮಿನಲ್ಸ್‌ ಲಿಮಿಟೆಡ್‌ ಕಂಪೆನಿ ವತಿಯಿಂದ ನಿರ್ಮಿಸುವ ಎಲ್ಲಾ ಟ್ರಕ್‌ ಟರ್ಮಿನಲ್‌ಗಳಲ್ಲಿ ಮತ್ತು ಟ್ರಕ್‌ ಟರ್ಮಿನಲ್‌ಗಳಿಗಾಗಿ ಪಡೆದಿರುವ ಜಮೀನಿನಲ್ಲಿ ಕೆಲವು ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿ ನಡೆಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯಿದೆಗೆ (ಕೆಪಿಟಿಟಿ) ವಿರುದ್ಧವಾಗಿ ಡಿ ಎಸ್‌ ವೀರಯ್ಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತುಂಡು ಗುತ್ತಿಗೆ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್‌ ದೂರು ದಾಖಲಿಸಿದ್ದರು.

ತಾನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜವಾಬ್ದಾರಿಯನ್ನು 19-11-2022ರಂದು ವಹಿಸಿಕೊಂಡಿದ್ದು, ಕಂಪನಿಯ ಆಡಳಿತದಲ್ಲಿ ಕಂಡು ಬಂದಿದ್ದ ನ್ಯೂನತೆ ಹಾಗೂ ಅಭಿವೃದ್ಧಿ ಕಾರ್ಯದ ವೆಚ್ಚದ ವಿವರ ಪರಿಶೀಲಿಸಲಾಗಿ ₹47.10 ಕೋಟಿ ಮೌಲ್ಯದ ಅಭಿವೃದ್ಧಿ ಕೆಲಸಗಳು ಅನುಮಾನಸ್ಪದವಾಗಿದ್ದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ 2022 ಮತ್ತು 2023ರಲ್ಲಿ ಮೂರು ಬಾರಿ ಸವಿವರ ವರದಿ ಸಲ್ಲಿಸಿದ್ದು ಜೊತೆಗೆ ಕ್ರಮಕೈಗೊಳ್ಳುವಂತೆ ಕೋರಿದ್ದೇನೆ ಎಂದು ಶಿವಪ್ರಕಾಶ್‌ ದೂರಿನಲ್ಲಿ ತಿಳಿಸಿದ್ದರು.

ಮಂಡಳಿಯ ಅಧಿಕಾರೇತರ ನಿರ್ದೇಶಕರು ತುಂಡು ಗುತ್ತಿಗೆ ಕುರಿತ ವಿಷಯ ಮತ್ತು ನಿರ್ಣಯಕ್ಕೆ ಒಪ್ಪಿಗೆ ನೀಡಿರಲಿಲ್ಲ ಎಂಬ ವಿಚಾರ ಬಹಿರಂಗವಾಗಿತ್ತು. 194ನೇ ನಿರ್ದೇಶಕ ಮಂಡಳಿ ಸಭೆಯ ನಡಾವಳಿಯಲ್ಲಿನ ಕಾರ್ಯಸೂಚಿ 28ಕ್ಕೆ ಸಂಬಂಧಿಸಿದ ನಿರ್ಣಯವನ್ನು ಕುತಂತ್ರಿಗಳು ಕೆಟಿಪಿಪಿ ಕಾಯಿದೆ ಉಲ್ಲಂಘಿಸಿ, ಕಂಪೆನಿ ಹಣ ದೋಚುವ ಸಲುವಾಗಿ ತಿರುಚಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ದಾಖಲೆಗಳನ್ನು ಪರಿಶೀಲಿಸಿದಾಗ ಕಂಪೆನಿ ಹಣ ದೋಚಿರುವುದು, ಅಪರಾಧಿಕ ನಂಬಿಕೆ ದ್ರೋಹ ಮಾಡಿರುವುದು, ಟೆಂಡರ್‌ ಕರೆಯದೇ ತುಂಡು ಗುತ್ತಿಗೆಗೆ ಅವಕಾಶ ಇಲ್ಲದಿದ್ದರೂ ಮಂಡಳಿಯ ಸಭೆಯ ನಡಾವಳಿ ತಿರುಚಿ, ಕೆಟಿಪಿಪಿ ಕಾಯಿದೆ ಉಲ್ಲಂಘಿಸಿ ಸುಮಾರು 775 ಕಡತಗಳನ್ನು ಸೃಷ್ಟಿಸಿ ಕಂಪೆನಿಗೆ ಸುಮಾರು ₹47.10 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ಶಿವಪ್ರಕಾಶ್‌ ಅವರು 2023ರ ಸೆಪ್ಟೆಂಬರ್‌ 23ರಂದು ನೀಡಿದ್ದ ದೂರಿನಲ್ಲಿ ವಿವರಿಸಿದ್ದರು.

ಈ ದೂರಿನ ಅನ್ವಯ ವಿಲ್ಸನ್‌ ಗಾರ್ಡನ್‌ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 120ಬಿ (ಕ್ರಿಮಿನಲ್‌ ಪಿತೂರಿ), 409 (ಸಾರ್ವಜನಿಕ ಅಧಿಕಾರಿಯಿಂದ ನಂಬಿಕೆ ದ್ರೋಹ), 420 (ವಂಚನೆ), 465 (ನಕಲಿ ದಾಖಲೆ ಸೃಷ್ಟಿ) ಮತ್ತು 468 (ವಂಚಿಸುವ ದೃಷ್ಟಿಯಿಂದ ನಕಲಿ ಕೃತ್ಯ) ಅಡಿ ಅನಾಮಿಕರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.