ಕೇರಳದ ಚಿರಯಿನ್‌ಕೀಳುವಿನಲ್ಲಿರುವ ಶ್ರೀ ಸರಕಾರ ದೇವಿ ದೇವಸ್ಥಾನದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸದಸ್ಯರು ಅಕ್ರಮವಾಗಿ ಸಾಮೂಹಿಕ ಕಸರತ್ತು ಮತ್ತು ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ [ಜಿ ವ್ಯಾಸನ್ ಮತ್ತು ಇತರರು ವರ್ಸಸ್ ಕೇರಳ ರಾಜ್ಯ ಮತ್ತು ಇತರರು].
ಆರ್‌ಎಸ್‌ಎಸ್ ಸದಸ್ಯರ ಕಾರ್ಯಚಟುವಟಿಕೆಯು ಯಾತ್ರಾರ್ಥಿಗಳು ಮತ್ತು ಭಕ್ತರು ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರಿಗೆ ಸಂಕಟ ಮತ್ತು ಸಮಸ್ಯೆ ಉಂಟು ಮಾಡಿದೆ ಎಂದು ಇಬ್ಬರು ಭಕ್ತರು ಮತ್ತು ದೇವಸ್ಥಾನದ ವ್ಯಾಪ್ತಿಯಲ್ಲಿ ನೆಲೆಸಿರುವ ನಿವಾಸಿಗಳು ಅರ್ಜಿ ಸಲ್ಲಿಸಿದ್ದಾರೆ.
ದೇವಸ್ಥಾನದ ವ್ಯಾಪ್ತಿಯನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಕೂಡದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ದೇವಸ್ಥಾನದ ಆಡಳಿತ ಮಂಡಳಿಯು ಸುತ್ತೋಲೆ ಹೊರಡಿಸಿರುವ ನಡುವೆಯೂ ಆರ್‌ಎಸ್‌ಎಸ್ ಸದಸ್ಯರು ಸಂಜೆ 5ರಿಂದ ರಾತ್ರಿ 12ರವರೆಗೆ ಡ್ರಿಲ್ ಮತ್ತು ತರಬೇತಿ ನಡೆಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಆರ್‌ಎಸ್‌ಎಸ್ ಸದಸ್ಯರು ಹೊಗೆಸೊಪ್ಪಿನ ಉತ್ಪನ್ನಗಳಾದ ಹನ್ಸ್ ಮತ್ತು ಪಾನ್ ಮಸಾಲಾಗಳನ್ನು ದೇವಸ್ಥಾನದ ವ್ಯಾಪ್ತಿಯಲ್ಲಿ ಬಳಸುತ್ತಿದ್ದು, ಇದರಿಂದ ದೇವಸ್ಥಾನದ ಪಾವಿತ್ರ್ಯತೆ ಮತ್ತು ಸ್ವಚ್ಛತೆಗೆ ಅಡ್ಡಿಯಾಗುತ್ತಿದೆ ಎಂದು ಆಕ್ಷೇಪಿಸಲಾಗಿದೆ. ಸಾಮೂಹಿಕ ಕಸರತ್ತು, ಶಸ್ತ್ರಾಸ್ತ್ರ ತರಬೇತಿಯ ಭಾಗವಾಗಿ ಆರ್‌ಎಸ್‌ಎಸ್ ಸದಸ್ಯರು ಕೂಗುವ ಘೋಷಣೆಗಳಿಂದಾಗಿ ದೇವಸ್ಥಾನದ ಶಾಂತಿಯುತ ಮತ್ತು ಪ್ರಶಾಂತ ವಾತಾವರಣಕ್ಕೆ ಅಡ್ಡಿ ಉಂಟಾಗಿದೆ. ಈ ಸಂಬಂಧ ಆಡಳಿತಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಹೀಗಾಗಿ, ಆ ದೇವಸ್ಥಾನದಲ್ಲಿ ಶಾಂತಿ ವಾತಾವರಣ ನೆಲೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ತಿರುವಾಂಕೂರು ದೇವಸ್ವಂ ಮಂಡಳಿ ಸೇರಿದಂತೆ ಸಂಬಂಧಿತ ಆಡಳಿತ ಮಂಡಳಿಗಳಿಗೆ ನಿರ್ದೇಶಿಸಲು ಕೋರಲಾಗಿದೆ.