Dhanush and Nayanthara with Madras High Court facebook, Instagram
ಸುದ್ದಿಗಳು

ಸಾಕ್ಷ್ಯಚಿತ್ರದಲ್ಲಿ ನಾನುಮ್ ರೌಡಿ ಧಾನ್ ಚಿತ್ರದ ತುಣುಕು ಬಳಕೆ: ನಯನತಾರ ವಿರುದ್ಧ ಧನುಷ್ ಮೊಕದ್ದಮೆ

ಧನುಷ್ ಸ್ಥಾಪಿಸಿರುವ ಚಿತ್ರ ನಿರ್ಮಾಣ ಮತ್ತು ವಿತರಣಾ ಸಂಸ್ಥೆ ವಂಡರ್‌ಬಾರ್‌ ಸಲ್ಲಿಸಿದ್ದ ಸಿವಿಲ್ ಮೊಕದ್ದಮೆಯನ್ನು ನ್ಯಾಯಮೂರ್ತಿ ಅಬ್ದುಲ್ ಖುದ್ದೋಸ್ ಅವರ ನೇತೃತ್ವದ ಪೀಠದೆದುರು ಬುಧವಾರ ಪ್ರಸ್ತಾಪಿಸಲಾಯಿತು.

Bar & Bench

ನಟಿ ನಯನತಾರ ಬದುಕನ್ನು ಆಧರಿಸಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಸಾಕ್ಷ್ಯಚಿತ್ರ 'ನಯನತಾರ: ಬಿಯಾಂಡ್‌ ದ ಫೇರಿಟೇಲ್‌ʼನಲ್ಲಿ ತಮ್ಮ ʼನಾನುಮ್‌ ರೌಡಿ ದಾನ್‌ʼ ಚಿತ್ರದ ದೃಶ್ಯ ಬಳಸಿರುವುದು ಹಕ್ಕ ಸ್ವಾಮ್ಯ ಉಲ್ಲಂಘನೆ ಎಂದು ಆರೋಪಿಸಿ ನಟ ಧನುಷ್‌ ಅವರು ತಾರಾ ದಂಪತಿಯಾದ ನಯನತಾರ ಹಾಗೂ ವಿಘ್ನೇಶ್‌ ಶಿವನ್‌ ವಿರುದ್ಧ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

'ನಾನುಮ್ ರೌಡಿ ಧಾನ್ʼ ಚಿತ್ರವನ್ನು ವಂಡರ್ ಬಾರ್ ಫಿಲ್ಮ್ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಧನುಷ್ ನಿರ್ಮಿಸಿದ್ದರು. ಚಿತ್ರದಲ್ಲಿ ನಯನತಾರಾ ನಾಯಕಿಯಾಗಿದ್ದಾರೆ. ನಯನತಾರ ಕುರಿತಾದ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರದಲ್ಲಿ ಚಲನಚಿತ್ರದ ತುಣುಕನ್ನು ಬಳಸಲಾಗಿದೆ ಎಂಬುದು ಧನುಷ್‌ ಅವರ ಆರೋಪ.

ವಂಡರ್‌ಬಾರ್‌ ಸಲ್ಲಿಸಿರುವ ಸಿವಿಲ್ ಮೊಕದ್ದಮೆಯನ್ನು ನ್ಯಾಯಮೂರ್ತಿ ಅಬ್ದುಲ್ ಖುದ್ದೋಸ್ ಅವರ ನೇತೃತ್ವದ ಪೀಠದೆದುರು ಬುಧವಾರ ಪ್ರಸ್ತಾಪಿಸಲಾಯಿತು.

ನೆಟ್‌ಫ್ಲಿಕ್ಸ್‌ನ ಮಾತೃ ಸಂಸ್ಥೆಯಾದ ಲಾಸ್ ಗಟೋಸ್ ಪ್ರೊಡಕ್ಷನ್ ಸರ್ವಿಸಸ್ ಇಂಡಿಯಾ ಲಿಮಿಟೆಡ್‌ ಅನ್ನು ಕೂಡ ಪ್ರಕರಣದಲ್ಲಿ ಪಕ್ಷಕಾರನನ್ನಾಗಿಸಲು ವಂಡರ್‌ಬಾರ್ ಪರ ಖುದ್ದು ವಾದ ಮಂಡಿಸಿದ  ಅಡ್ವೊಕೇಟ್ ಜನರಲ್ ಮತ್ತು ಹಿರಿಯ ವಕೀಲ ಪಿಎಸ್ ರಾಮನ್ ಹೈಕೋರ್ಟ್‌ ಅನುಮತಿ ಕೇಳಿದರು. ಇದಕ್ಕೆ ನಯನತಾರ ಮತ್ತು ನೆಟ್‌ಫ್ಲಿಕ್ಸ್‌ ಇಂಡಿಯಾ ಪರ ಹಾಜರಿದ್ದ ಹಿರಿಯ ವಕೀಲ ಸತೀಶ್‌ ಪರಾಸರನ್‌ ಮತ್ತು ವಕೀಲ ಆರ್‌ ಪಾರ್ಥಸಾರಥಿ ವಿರೋಧ ವ್ಯಕ್ತಪಡಿಸಿದರು.

ನಯನತಾರಾ, ಶಿವನ್ ಹಾಗೂ ನಾನುಮ್‌ ರೌಡಿ ಧಾನ್‌ ಚಿತ್ರಗಳು ಹಾಗೂ ಉಳಿದ ಪಕ್ಷಕಾರರು ಮದ್ರಾಸ್‌ ಹೈಕೋರ್ಟ್‌ ವ್ಯಾಪ್ತಿಗೇ ಬರುವುದರಿಂದ  ನ್ಯಾಯಮೂರ್ತಿ ಖುದ್ದೋಸ್ ಅವರು ಲಾಸ್ ಗಟೋಸ್‌ಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಿದರು.

ತನ್ನ ಹಾಗೂ ತನ್ನ ಪತಿಯೊಂದಿಗೆ ಧನುಷ್‌ಗೆ ವೈಯಕ್ತಿಕ ದ್ವೇಷವಿದೆ ಎಂದು ನವೆಂಬರ್ 16 ರಂದು ನಯನತಾರಾ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದರು. ಸಾಕ್ಷ್ಯಚಿತ್ರ ಬಿಡುಗಡೆಯಾದ ಬಳಿಕ ಧನುಷ್‌ ₹ 10 ಕೋಟಿ ಪರಿಹಾರ ಕೇಳಿ ತನಗೆ ಲೀಗಲ್‌ ನೋಟಿಸ್‌ ನೀಡಿರುವುದು ಆಘತಾ ತಂದಿದೆ ಎಂದು ಆಕೆ ಹೇಳಿಕೊಂಡಿದ್ದರು.