A1
ಸುದ್ದಿಗಳು

ಧರ್ಮ ಸಂಸದ್ ಭಾಷಣಕಾರ ಒಬ್ಬನೇ ಆಗಿದ್ದರೆ ನಿಯಂತ್ರಣ ಕ್ರಮಕ್ಕೆ ಮುಂದಾಗಿ: ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ತಾಕೀತು

ಕಾರ್ಯಕ್ರಮಕ್ಕೆ ಆಹ್ವನಿತನಾದ ಭಾಷಣಕಾರ ಈ ಹಿಂದೆ ಅಂತಹುದೇ ದ್ವೇಷ ಭಾಷಣ ಮಾಡಿದ್ದರೆ ಸರ್ಕಾರ ನಿಯಂತ್ರಣ ಕ್ರಮಕ್ಕೆ ಬದ್ಧವಾಗಿರಬೇಕು ಎಂದಿತು ನ್ಯಾ. ಎ ಎಂ ಖಾನ್ವಿಲ್ಕರ್ ನೇತೃತ್ವದ ಪೀಠ.

Bar & Bench

ಧರ್ಮ ಸಂಸದ್‌ಗಳನ್ನು ತಡೆಯಲು ಸಾಧ್ಯವಿಲ್ಲ. ಅಂತಹ ಕಾರ್ಯಕ್ರಮಗಳಲ್ಲಿ ದ್ವೇಷ ಭಾಷಣ ಮಾಡಬಹುದು ಎಂದು ನಿರೀಕ್ಷಿಸಲಾಗದು ಎಂಬ ಉತ್ತರಾಖಂಡ ಸರ್ಕಾರದ ನಿಲುವಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.

ಧರ್ಮಸಂಸದ್‌ನಲ್ಲಿ ಎಂತಹ ಭಾಷಣ ಮಾಡಲಾಗುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಉತ್ತರಾಖಂಡ ಸರ್ಕಾರದ ಪರ ವಕೀಲರ ವಾದಕ್ಕೆ ಆಕ್ಷೇಪಿಸಿದ ಎಂದಿತು ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ಪೀಠ “ಆದರೆ ಈ ಹಿಂದೆ ದ್ವೇಷ ಭಾಷಣ ಮಾಡಿದ ವ್ಯಕ್ತಿಯೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ನೀವದನ್ನು ತಡೆಯಬೇಕು…” ಎಂದಿತು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಕೂಡ ನ್ಯಾಯಾಲಯಕ್ಕೆ ಕರೆಸಬೇಕಾದೀತು ಎಂದು ಕೂಡ ಒಂದು ಹಂತದಲ್ಲಿ ಎಚ್ಚರಿಸಿದ ಪೀಠ, ಏಪ್ರಿಲ್ 27ರ ಬುಧವಾರದಂದು ರೂರ್ಕಿಯಲ್ಲಿ ನಡೆಯಲಿರುವ ಧರ್ಮ ಸಂಸದ್ ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾದ ನಿಯಂತ್ರಣ ಕ್ರಮಗಳ ಕುರಿತು ಅಫಿಡವಿಟ್‌ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತು.

ಹರಿದ್ವಾರ ಮತ್ತು ದೆಹಲಿ ಧರ್ಮ ಸಂಸದ್‌ಗಳಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿದ ದ್ವೇಷ ಭಾಷಣದ ಕುರಿತು ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿದಾರರು ತರುವಾಯ ಇತರ ನಗರಗಳಲ್ಲಿ ಕೂಡ ಇಂಥದ್ದೇ ಕಾರ್ಯಕ್ರಮ ನಡೆಯುತ್ತಿರುವುದನ್ನು ಉಲ್ಲೇಖಿಸಿ ಬೇರೆ ಅರ್ಜಿಗಳನ್ನು ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ವಾದ ಮಂಡಿಸಿದರು.