ಧರ್ಮಸ್ಥಳದಲ್ಲಿ ಕೊಲೆಯಾದ ನೂರಾರು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ಅವರ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ವಿಧಿಸಿರುವ ನಿರ್ಬಂಧ ಪ್ರಶ್ನಿಸಿ ಡಿಜಿಟಲ್ ಮಾಧ್ಯಮ ಸಂಸ್ಥೆ ಕುಡ್ಲ ರ‍್ಯಾಂಪೇಜ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರಕ್ಕೆ ಮುಂದೂಡಿದೆ.
ದಕ್ಷಿಣ ಕನ್ನಡದ ಕುಡ್ಲ ರ‍್ಯಾಂಪೇಜ್ ಪ್ರಧಾನ ಸಂಪಾದಕ ಅಜಯ್ ಅವರು ಮಾಧ್ಯಮಗಳ ಮೇಲಿನ ನಿರ್ಬಂಧದ ಆದೇಶ ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಎ ವೇಲನ್ ಅವರು “ಎಫ್‌ಐಆರ್‌ನಲ್ಲಿನ ಅಂಶಗಳ ಬಗ್ಗೆ ಮಾತನಾಡದಂತೆ 390 ಮಾಧ್ಯಮಗಳನ್ನು ನಿರ್ಬಂಧಿಸಲಾಗಿದೆ. 9,000 ಯುಆರ್‌ಎಲ್‌ಗಳನ್ನು ಡಿಲೀಟ್ ಮಾಡಬೇಕು ಎಂದು ವಿಚಾರಣಾಧೀನ ನ್ಯಾಯಾಲಯ ಮೂರು ಗಂಟೆಗಳಲ್ಲಿ ಆದೇಶ ಮಾಡಿದೆ. ಇಲ್ಲಿ ಅರ್ಜಿದಾರರ ಮೂಲಭೂತ ಹಕ್ಕಿಗೆ ಹಾನಿಯಾಗಿದೆ. ಈ ನ್ಯಾಯಾಲಯಕ್ಕೆ ವ್ಯಾಪ್ತಿ ಇದೆ ಎಂಬುದಕ್ಕೆ ಸುಪ್ರೀಂ ಕೋರ್ಟ್ ತೀರ್ಪಿದ್ದು, ಅದನ್ನು ಸಾಬೀತುಪಡಿಸಲಾಗುವುದು" ಎಂದರು.
ಈ ನಡುವೆ ಪೀಠವು “ಏಕಪಕ್ಷಕೀಯ ಪ್ರತಿಬಂಧಕಾದೇಶವನ್ನು ಪರಿಗಣಿಸಿರುವುದರಿಂದ ಇದು ಎಂಎಫ್‌ಎ ನ್ಯಾಯಾಲಯದ ಮುಂದೆ ಹೋಗಬೇಕು. ವಿಚಾರಣಾಧೀನ ನ್ಯಾಯಾಲಯ ಪರಿಗಣಿಸದಿದ್ದರೆ ನೀವು ಇಲ್ಲಿ ಬರಬಹುದಿತ್ತು. ಮಾಧ್ಯಮಗಳನ್ನು ನಿರ್ಬಂಧಿಸಿರುವ ಆದೇಶ ಪ್ರಶ್ನಿಸಲಾಗಿದೆ ಎಂಬುದು ತಿಳಿದಿದೆ. ಆದರೆ, ಈ ನ್ಯಾಯಾಲಯಕ್ಕೆ ವ್ಯಾಪ್ತಿ ಇಲ್ಲ. ನಿಮ್ಮ ವಾದ ಆಲಿಸಲಾಗುವುದು. ಆದರೆ, ಮೊದಲಿಗೆ ಈ ನ್ಯಾಯಾಲಯಕ್ಕೆ ವ್ಯಾಪ್ತಿ ಇದೆ ಎಂಬ ವಿಚಾರದಲ್ಲಿ ಸಂತುಷ್ಟಗೊಳಿಸಬೇಕು” ಎಂದಿತು.
ಮುಂದುವರಿದು, “ನಿರ್ಲಜ್ಜವಾಗಿ ಎಲ್ಲರನ್ನು ನಿರ್ಬಂಧಿಸುವ ಇದೆಂಥಾ ಆದೇಶ” ಎಂದು ಹರ್ಷೇಂದ್ರ ಕುಮಾರ್ ಪರ ವಕೀಲರನ್ನು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ವಕೀಲ ಉದಯ್ ಹೊಳ್ಳ ಅವರು “ಈಗಾಗಲೇ ಮಾಡಿರುವ ಆದೇಶಗಳನ್ನು ಮುಚ್ಚಿಡಲಾಗಿದೆ. ಅರ್ಜಿದಾರ ಗಿರೀಶ್ ಮಟ್ಟಣ್ಣನವರ್ ಅವರು ಮಾತನಾಡಿರುವುದನ್ನು ನೋಡಿ. ಟಿವಿ ಸಂಭಾಷಣೆಯಲ್ಲಿ ಮಾತನಾಡಿರುವುದು ಇದು. ಇದನ್ನು ಜೋರಾಗಿ ಓದಲು ನಮಗೆ ಇಷ್ಟವಿಲ್ಲ. ಏನೆಲ್ಲಾ ಹೇಳಿದ್ದಾರೆ ನೋಡಿ” ಎಂದರು.
ಈ ನಡುವೆ, ಹರ್ಷೇಂದ್ರ ಪರ ವಕೀಲ ಎಸ್ ರಾಜಶೇಖರ್ ಅವರು “ಕೆಲವು ಪ್ರತಿವಾದಿಗಳು ಪ್ರತಿಬಂಧಕಾದೇಶ ತೆರವು ಕೋರಿ ಅರ್ಜಿ ಸಲ್ಲಿಸಿದ್ದು, ಅವುಗಳ ವಿಚಾರಣೆಯನ್ನು ವಿಚಾರಣಾಧೀನ ನ್ಯಾಯಾಲಯವು ಸೋಮವಾರ ನಡೆಸಲಿದೆ” ಎಂದರು.
ಆಗ ಪೀಠವು “ಇತರರಂತೆ ನೀವು ಅಲ್ಲಿ ಅರ್ಜಿ ಸಲ್ಲಿಸಬಹುದಲ್ಲವೇ” ಎಂದು ವೇಲನ್ ಅವರನ್ನು ಕುರಿತು ಹೇಳಿತು.
ಇದಕ್ಕೆ ವೇಲನ್ ಅವರು “ಈ ನ್ಯಾಯಾಲಯಕ್ಕೆ ವಿಚಾರಣಾ ವ್ಯಾಪ್ತಿ ಇದೆ ಎಂಬುದನ್ನು ಮನನ ಮಾಡಿಕೊಡಲಾಗುವುದು” ಎಂದರು.
ಇದನ್ನು ಆಲಿಸಿದ ಪೀಠವು ಅರ್ಜಿಯ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಾಲಯ ಹಾಗೂ ಸಂಸ್ಥೆಗಳ ಕಾರ್ಯದರ್ಶಿಯಾಗಿರುವ ಹರ್ಷೇಂದ್ರ ಕುಮಾರ್ ಅವರು 4,140 ಯೂಟ್ಯೂಬ್ ವಿಡಿಯೋಗಳು, 932 ಫೇಸ್‌ಬುಕ್ ಪೋಸ್ಟ್‌ಗಳು, 3,584 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, 108 ಸುದ್ದಿ ಲೇಖನಗಳು, 37 ರೆಡ್ಡಿಟ್ ಪೋಸ್ಟ್‌ಗಳು ಮತ್ತು 41 ಟ್ವೀಟ್‌ಗಳು ಸೇರಿದಂತೆ 8,842 ಲಿಂಕ್‌ಗಳ ಪಟ್ಟಿಯನ್ನು ನಿರ್ಬಂಧಿಸುವಂತೆ ಕೋರಿ ನ್ಯಾಯಾಲಯದಲ್ಲಿ ಮೂಲ ದಾವೆ ಹೂಡಿದ್ದಾರೆ.
ಧರ್ಮಸ್ಥಳ ಠಾಣೆಯಲ್ಲಿ ಸ್ವಚ್ಛತಾ ಕಾರ್ಮಿಕ ನೀಡಿರುವ ದೂರಿನ ಅನ್ವಯ ದಾಖಲಾಗಿರುವ ಎಫ್‌ಐಆರ್‌ನಲ್ಲಿ ತಮ್ಮ ವಿರುದ್ಧ ಆರೋಪಗಳು ಇಲ್ಲದಿದ್ದರೂ ತಮ್ಮ ಕುಟುಂಬ, ದೇವಾಲಯ ಹಾಗೂ ಸಂಸ್ಥೆಗಳ ವಿರುದ್ಧ ಆನ್‌ಲೈನ್‌ನಲ್ಲಿ ಮತ್ತು ಮಾಧ್ಯಮಗಳಲ್ಲಿ ಸುಳ್ಳು ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಹರ್ಷೇಂದ್ರ ಕುಮಾರ್ ಆಕ್ಷೇಪಿಸಿದ್ದರು.
ವಾದ ಆಲಿಸಿದ್ದ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ವಿಜಯ ಕುಮಾರ್ ರೈ ಅವರು ಮುಂದಿನ ವಿಚಾರಣೆಯವರೆಗೆ ಡಿಜಿಟಲ್, ಸಾಮಾಜಿಕ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿಕರ ವಸ್ತುವಿಷಯ ಪ್ರಕಟಿಸದಂತೆ ಇಲ್ಲವೇ ಹಂಚದಂತೆ ಪ್ರತಿವಾದಿಗಳು ಮತ್ತು ಅಪರಿಚಿತ ವ್ಯಕ್ತಿಗಳಿಗೆ ನಿರ್ಬಂಧಿಸಿ ಜು ಲೈ 18ರಂದು ಏಕಪಕ್ಷಕೀಯ ಪ್ರತಿಬಂಧಕಾದೇಶ ಮಾಡಿದೆ. ಇದನ್ನು ಬದಿಗೆ ಸರಿಸುವಂತೆ ಅರ್ಜಿದಾರರು ಕೋರಿದ್ದಾರೆ.