City civil court Complex, Bengaluru  
ಸುದ್ದಿಗಳು

ಧರ್ಮಸ್ಥಳ ಪ್ರಕರಣ: ಮಾಧ್ಯಮಗಳ ಪ್ರತಿಬಂಧಕಾದೇಶ ವಿಸ್ತರಣೆಯ ಮನವಿ ತಿರಸ್ಕರಿಸಿದ ನ್ಯಾಯಾಲಯ

ಬೆಂಗಳೂರಿನ ವಿಚಾರಣಾಧೀನ ನ್ಯಾಯಾಲಯವು ಯೂಟ್ಯೂಬ್‌ ಚಾನಲ್‌ಗಳು ಸೇರಿ 338 ವ್ಯಕ್ತಿ/ಮಾಧ್ಯಮಗಳ ವಿರುದ್ಧ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿತ್ತು.

Bar & Bench

ಧರ್ಮಸ್ಥಳದಲ್ಲಿ ಕೊಲೆಯಾದ ಶವಗಳನ್ನು ಹೂತಿರುವ ಪ್ರಕರಣದ ಪ್ರಸಾರ/ಪ್ರಕಟಣೆಗೆ ಸಂಬಂಧಿಸಿದ ಏಕಪಕ್ಷೀಯ ಪ್ರತಿಬಂಧಕಾದೇಶ ವಿಸ್ತರಣೆ ಕೋರಿ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಬುಧವಾರ ವಜಾಗೊಳಿಸಿದೆ.

ಬೆಂಗಳೂರಿನ 16ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಎಂ ಅನಿತಾ ಅವರು ದೇವಸ್ಥಾನ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ, ಈ ಹಿಂದಿನ ಏಕಪಕ್ಷೀಯ ಪ್ರತಿಬಂಧಕಾದೇಶವು ತೆರವುಗೊಂಡಂತಾಗಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಧರ್ಮಸ್ಥಳದ ವಿವಿಧ ಕಡೆ ಕೊಲೆ, ಅತ್ಯಾಚಾರಕ್ಕೆ ಒಳಗಾದ ಹಲವು ಮೃತದೇಹಗಳನ್ನು ದಫನ್‌ ಮಾಡಿದ್ದಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ಸ್ವಚ್ಛತಾ ಕಾರ್ಮಿಕ ಹೇಳಿಕೆ ನೀಡಿದ ಬೆನ್ನಿಗೇ ಮಾಧ್ಯಮಗಳು ವ್ಯಾಪಕ ಪ್ರಚಾರ ಆರಂಭಿಸಿದ್ದವು. ಇದರ ಹಿಂದೆಯೇ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಸಹೋದರ ಹರ್ಷೇಂದ್ರ ಕುಮಾರ್‌ ಹೆಗಡೆ ಅವರು ದೇವಸ್ಥಾನ ಮತ್ತು ತಮ್ಮ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸದಂತೆ 338 ಮಾಧ್ಯಮ ಸಂಸ್ಥೆಗಳ ವಿರುದ್ಧ ಏಕಪಕ್ಷೀಯ ಪ್ರತಿಬಂಧಕಾದೇಶ ಪಡೆದುಕೊಂಡಿದ್ದರು.

ಇದನ್ನು ಪ್ರಶ್ನಿಸಿ ಕುಡ್ಲ ರ‍್ಯಾಂಪೇಜ್‌ ಡಿಜಿಟಲ್‌ ಮಾಧ್ಯಮ ಹೈಕೋರ್ಟ್‌ ಮೆಟ್ಟಿಲೇರಿತ್ತು. ಇದರ ಅರ್ಜಿಯನ್ನು ಹೈಕೋರ್ಟ್‌ ಪುರಸ್ಕರಿಸಿತ್ತು.

ಈ ಮಧ್ಯೆ, ನ್ಯಾಯಾಲಯ ಜುಲೈ 18 ರಂದು ಹೊರಡಿಸಿದ್ದ ಪ್ರತಿಬಂಧಕಾದೇಶವನ್ನು ಜುಲೈ 24ರಂದು ಪತ್ರಕರ್ತ ನವೀನ್ ಸೂರಿಂಜೆ, ಸಾಮಾಜಿಕ ಹೋರಾಟಗಾರರಾದ ಮುನೀರ್ ಕಾಟಿಪಳ್ಳ ಹಾಗೂ ಬೈರಪ್ಪ ಹರೀಶ್ ಕುಮಾರ್ ಪ್ರಶ್ನಿಸಿದ್ದರು.

ನ್ಯಾಯಾಧೀಶರು ಮೊಕದ್ದಮೆ ಸಲ್ಲಿಸಿದ್ದ ಹರ್ಷೇಂದ್ರ ಕುಮಾರ್‌ ಅವರ ಕುಟುಂಬದಿಂದ ನಿರ್ವಹಿಸಲಾಗುತ್ತಿರುವ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ 25 ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದರು. ಹೀಗಾಗಿ ಬೇರೆ ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸುವಂತೆ ತಮ್ಮ ವಕೀಲರಿಗೆ ಮನವಿ ಮಾಡಿದ್ದರು. ವಕೀಲರು ಈ ಸಂಬಂಧ ನ್ಯಾಯಾಲಯಕ್ಕೆ ಮೆಮೊ ಮತ್ತು ಪತ್ರ ಸಲ್ಲಿಸಿದ್ದರು.

ಇದಕ್ಕೆ ಸ್ಪಂದಿಸಿದ್ದ ನ್ಯಾಯಾಧೀಶರು, ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಮುಂದುವರೆಯುವಂತಾಗಲು ನ್ಯಾಯ ಒದಗಿಸಿದರಷ್ಟೇ ಸಾಲದು, ಅದು ಕಾಣುವಂತಿರಬೇಕು ಎಂದಿದ್ದರು. ನಾನು ಈ ಮೊಕದ್ದಮೆಯಲ್ಲಿ ಪಕ್ಷಕಾರನಲ್ಲದಿದ್ದರೂ ಅಥವಾ ಯಾವುದೇ ವೈಯಕ್ತಿಕ ಆಸಕ್ತಿ ಹೊಂದಿಲ್ಲದಿದ್ದರೂ ಬೆಂಗಳೂರು ನಗರ ಸಿವಿಲ್‌ ನ್ಯಾಯಾಲಯ ಕಾಯಿದೆ 1979 ರ ಸೆಕ್ಷನ್ 13(2)(b) ಪ್ರಕಾರ OS No.5185/2025 ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಲು ಪ್ರಧಾನ ನಗರ ಸಿವಿಲ್‌ ಸೆಷನ್ಸ್ ನ್ಯಾಯಾಧೀಶರಿಗೆ ವಿನಂತಿ ಸಲ್ಲಿಸುವುದು ಸೂಕ್ತ ಎಂದು ಪ್ರಕರಣ ಆಲಿಸುವುದರಿಂದ ಹಿಂದೆ ಸರಿದಿದದ್ದರು.

ಪ್ರಸ್ತುತ ಪ್ರಕರಣವನ್ನು ಆಲಿಸಿರುವ ನ್ಯಾಯಾಧೀಶೆ ಅನಿತಾ ಅವರು ಪ್ರತಿಬಂಧಕಾದೇಶ ವಿಸ್ತರಣೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.