ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಲ ದೂರುದಾರನಾಗಿದ್ದ ಸಿ ಎನ್ ಚಿನ್ನಯ್ಯನೇ ಆರೋಪಿಯಾಗಿರುವುದರಿಂದ ಆತನ ಬಳಿ ಇದ್ದ ಮಾಹಿತಿಗೆ ಹೊರತಾದ ಹೆಚ್ಚಿನ ಮಾಹಿತಿಯನ್ನು ದಾಖಲೆಯಲ್ಲಿ ಸಲ್ಲಿಸಲು ಧರ್ಮಸ್ಥಳದ ಗ್ರಾಮದ ಪಂಗಳ ಮನೆಯ ಪುರಂದರ ಗೌಡ ಮತ್ತು ತುಕಾರಾಂ ಗೌಡಗೆ ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.
ತಾವು ತೋರಿಸುವ ಸ್ಥಳಗಳಲ್ಲಿ ಅಗೆಯುವಂತೆ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ನಿರ್ದೇಶಿಸುವಂತೆ ಕೋರಿ ಪುರಂದರ ಗೌಡ ಮತ್ತು ತುಕಾರಾಂ ಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಚಿನ್ನಯ್ಯನ ಬಳಿ ಇದ್ದ ಮಾಹಿತಿಗಿಂತ ಹೆಚ್ಚಿನ ಮಾಹಿತಿ ಇದ್ದರೆ ಮೆಮೊದ ಜೊತೆ ಪಾಂಡುರಂಗ ಗೌಡ ಮತ್ತು ತುಕಾರಾಂ ಗೌಡ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿದೆ. ಇದೇ ವೇಳೆ ಆರೋಪಿಯಾಗಿರುವ ಚಿನ್ನಯ್ಯನ ಹೇಳಿಕೆ ದಾಖಲಿಸಿಕೊಳ್ಳಲು ವಿಳಂಬಿಸುತ್ತಿರುವ ಮ್ಯಾಜಿಸ್ಟ್ರೇಟ್ ನಡೆಗೆ ಹೈಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದ್ದು, ಅದನ್ನು ಆದೇಶದಲ್ಲಿ ದಾಖಲಿಸಿದೆ.
ಇದಕ್ಕೂ ಮುನ್ನ, ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ಹಿರಿಯ ವಕೀಲ ದೀಪಕ್ ಖೋಸ್ಲಾ ಅವರು “ನಾವು ಗುರುತಿಸಿರುವ ಸ್ಥಳಗಳಲ್ಲಿ ಎಸ್‌ಐಟಿ ಪರಿಶೀಲನೆ ನಡೆಸಿದರೆ ಡಜನ್‌ಗಟ್ಟಲೇ ಅಸ್ಥಿಗಳು ದೊರೆಯಲಿವೆ” ಎಂದರು.
“ಆಗ ಪೀಠವು ಕಳೆದ ವಿಚಾರಣೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಿಗೆ ಮಾಹಿತಿ ಪಡೆದು ತಿಳಿಸಲು ನಿರ್ದೇಶಿಸಲಾಗಿತ್ತು. ಅವರು ಏನು ಹೇಳುತ್ತಾರೆ” ಎಂದು ನೋಡೋಣ ಎಂದಿತು.
ಆಗ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಎಸ್‌ಐಟಿಗೆ ಎರಡು ಮನವಿಗಳನ್ನು ನೀಡಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಮೂಲ ದೂರುದಾರ ಚಿನ್ನಯ್ಯ ನೀಡಿದ ಹೇಳಿಕೆ ಆ ಎರಡೂ ದೂರುಗಳ ಆಧಾರವಾಗಿದೆ. ಚಿನ್ನಯ್ಯ ಅವರು ಹಾಲಿ ಅರ್ಜಿದಾರರಿಗೆ ಪ್ರಕರಣದ ಬಗ್ಗೆ ನೀಡಿದ್ದ ಮಾಹಿತಿಯನ್ನು ಇದು ಒಳಗೊಂಡಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಚಿನ್ನಯ್ಯ ಹೇಳಿದ್ದರು. ಧರ್ಮಸ್ಥಳದ ಆಡಳಿತ ಸೂಚನೆಯ ಮೇರೆಗೆ ದಫನ್ ಮಾಡಿದ್ದು, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆಯರು ಮತ್ತು ಶಾಲಾ ಮಕ್ಕಳ ದೇಹಗಳನ್ನು ದಫನ್ ಮಾಡಿದ್ದಾಗಿ ಚಿನ್ನಯ್ಯ ಹೇಳಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಿಎನ್‌ಎಸ್ 183 ಅಡಿ ಚಿನ್ನಯ್ಯನ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು” ಎಂದು ವಿವರಿಸಿದರು.
ಮುಂದುವರಿದು, “ಚಿನ್ನಯ್ಯನ ಹೇಳಿಕೆ ಆಧರಿಸಿ, ಆತನೇ ಗುರುತಿಸಿದ್ದ 13 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು. ಅಗತ್ಯ ಅನುಮತಿ ಪಡೆದು ಕಾರ್ಯಕಾರಿ ಮ್ಯಾಜಿಸ್ಟ್ರೇಟ್ ಉಪಸ್ಥಿತಿಯಲ್ಲಿ ಶವ ಉತ್ಖನನ ನಡೆಸಲಾಗಿತ್ತು. 13 ಸ್ಥಳಗಳ ಪೈಕಿ ಒಂದು ಸ್ಥಳದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಇದು ಪುರುಷನ ದೇಹ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹೇಳಿತ್ತು. ಎರಡನೇ ದೇಹ ಪತ್ತೆಯಾಗಿದ್ದು, ಅದು ಸಹ ಮಹಿಳೆಯ ಶವವಾಗಿರಲಿಲ್ಲ. ದೂರು ನೀಡುವ ಸಂದರ್ಭದಲ್ಲಿ ಚಿನ್ನಯ್ಯ ಒಪ್ಪಿಸಿದ್ದ ತಲೆಬರುಡೆಯು ಮಹಿಳೆಯದ್ದು ಎಂದು ಆತ ಬಿಎನ್‌ಎಸ್ ಸೆಕ್ಷನ್ 164 ಹೇಳಿಕೆ ಮತ್ತು ದೂರಿನಲ್ಲಿ ಹೇಳಿದ್ದನು. ಆತ ನೀಡಿದ್ದ ತಲೆಬುರುಡೆಯು ಮಹಿಳೆಯದ್ದಲ್ಲ, ಪುರುಷನದ್ದು ಎಂದು ಎಫ್‌ಎಸ್‌ಎಲ್ ವರದಿ ಹೇಳಿದೆ. ಇದು 30 ವರ್ಷದ ವ್ಯಕ್ತಿಯದ್ದಿರಬಹುದು ಎಂದೂ ಹೇಳಿದೆ. ಇದುವರೆಗೆ ನಡೆದಿರುವ ತನಿಖೆಯ ಪ್ರಕಾರ ಚಿನ್ನಯ್ಯ ನ್ಯಾಯಾಲಯದಲ್ಲಿ ಸೂಕ್ತ ಮಾಹಿತಿ ನೀಡಿಲ್ಲ. ಇದರಿಂದ ಎಸ್‌ಐಟಿಗೆ ಚಿನ್ನಯ್ಯ ಸುಳ್ಳು ಹೇಳುತ್ತಿದ್ದಾನೆ ಎಂದು ಅರ್ಥವಾಗಿತ್ತು” ಎಂದರು.
“ಈಗ ಪಿತೂರಿ ಭಾಗವನ್ನು ಪತ್ತೆ ಮಾಡಬೇಕಿದೆ. ಪಿತೂರಿ ಯಾವ ಕಾರಣಕ್ಕಾಗಿ ಎಂಬುದನ್ನು ಅರಿಯಬೇಕಿದೆ. ಚಿನ್ನಯ್ಯನು ಶವಗಳನ್ನು ಹೂತಿದ್ದ ರಹಸ್ಯ ಸ್ಥಳಗಳ ಬಗ್ಗೆ ತಿಳಿಸಿದ್ದನು. ಹಾಲಿ ಅರ್ಜಿದಾರರ ಮನವಿಯು ಚಿನ್ನಯ್ಯನ ಜೊತೆಗಿನ ಸಂಭಾಷಣೆಯ ಭಾಗವಾಗಿದೆ. 2014ರಲ್ಲಿ ಜೀವಭಯದಿಂದ ಧರ್ಮಸ್ಥಳ ತೊರೆದಿದ್ದಾಗಿ ಚಿನ್ನಯ್ಯ ಹೇಳಿದ್ದ. ಆದರೆ, ದಾಖಲೆಗಳನ್ನು ಪರಿಶೀಲಿಸಿದಾಗ ಆತ ಎರಡು ವರ್ಷಗಳ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದಾನೆ. ತಲೆಬುರುಡೆಯನ್ನು ಇನ್ನಿತರ ಇಬ್ಬರು ತನಗೆ ನೀಡಿದ್ದಾರೆ ಎಂದು ಚಿನ್ನಯ್ಯ ಹೇಳಿದ್ದಾನೆ. ಅವರ ಸೂಚನೆಯ ಮೇರೆಗೆ ಈ ಹೇಳಿಕೆ ನೀಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ” ಎಂದರು.
ಈ ಹಂತದಲ್ಲಿ ಪೀಠವು “ಅರ್ಜಿದಾರರ ಕೋರಿಕೆ ಏನು” ಎಂದಿತು.
ಇದಕ್ಕೆ ಜಗದೀಶ್ ಅವರು “ನಾವು ಶವ ಹೂತಿರುವ ಸ್ಥಳಗಳನ್ನು ತೋರಿಸುತ್ತೇವೆ ಎಂದು ಎಸ್‌ಐಟಿಗೆ ಅರ್ಜಿದಾರರು ಮನವಿ ನೀಡಿದ್ದಾರೆ. ಮ್ಯಾಜಿಸ್ಟ್ರೇಟ್ ಮುಂದೆ ಚಿನ್ನಯ್ಯನು ತಾನು ಪೊಲೀಸರಿಗೆ ಒಪ್ಪಿಸಿರುವ ತಲೆಬರುಡೆಯನ್ನು ತಾನು ಪತ್ತೆ ಮಾಡಿಲ್ಲ. ಬೇರೆ ಯಾರೋ ತನಗೆ ಕೊಟ್ಟರು. ನ್ಯಾಯಾಲಯದ ಮುಂದೆ ತಾನು ನೀಡಿರುವ ಹೇಳಿಕೆ ಸುಳ್ಳು ಎಂದು ಹೇಳಿದ್ದಾನೆ. ಬೇರೆಯವ ಸೂಚನೆಯಂತೆ ಹೇಳಿಕೆ ನೀಡಿದ್ದೇನೆ. ಆದರೆ, ಧರ್ಮಸ್ಥಳದಲ್ಲಿ ತಾನು ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ. ತಾನು ಹೂತಿರುವ ಶವಗಳನ್ನು ಪೊಲೀಸರು, ವೈದ್ಯರು ಪರಿಶೀಲಿಸಿದ್ದರು ಎಂದು ಹೇಳಿದ್ದಾನೆ. ಹೀಗಾಗಿ, ಆ ತನಿಖೆಯನ್ನು ಮುಕ್ತಾಯಗೊಳಿಸಲಾಗಿದೆ” ಎಂದು ವಿವರಿಸಿದರು.
“ಇದರ ಭಾಗವಾಗಿ 23.8.2025ರಂದು ಚಿನ್ನಯ್ಯನನ್ನು ಬಂಧಿಸಲಾಗಿದ್ದು, ಆತ ನೀಡಿದ ಮಾಹಿತಿ ಆಧರಿಸಿ ಹಲವು ಸ್ಥಳಗಳಲ್ಲಿ ಶೋಧ ಮತ್ತು ಪರಿಶೀಲನೆ ನಡೆಸಲಾಗಿದೆ. ತಲೆಬುರುಡೆ ವರ್ಗಾಯಿಸಿದ ಸ್ಥಳ, ಆತ ತಂಗಿದ್ದ ಸ್ಥಳ.. ಮಹಜರ್ ನಡೆಸಲಾಗಿದೆ. ಈ ತನಿಖೆ ಪೂರ್ಣಗೊಂಡ ಬಳಿಕ ಆತ ತನ್ನ ಹೇಳಿಕೆಯನ್ನು ಹೊಸದಾಗಿ ದಾಖಲಿಸಿಕೊಳ್ಳುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಚಿನ್ನಯ್ಯನ ಹೇಳಿಕೆ ದಾಖಲಿಸಲು ಸಮಯ ನಿಗದಿಪಡಿಸಲಾಗಿತ್ತು. ದುರದೃಷ್ಟಕರವೆಂದರೆ ಮ್ಯಾಜಿಸ್ಟ್ರೇಟ್ ಹೇಳಿಕೆ ದಾಖಲಿಸಿಕೊಂಡಿಲ್ಲ. 15 ದಿನವಾದರೂ ಅವರು ಹೇಳಿಕೆ ದಾಖಲಿಸಿಲ್ಲ” ಎಂದರು.
ಆಗ ಪೀಠವು ಖೋಸ್ಲಾ ಅವರನ್ನು ಕುರಿತು ʼಚಿನ್ನಯ್ಯನ ಬಳಿ ಇದ್ದ ಮಾಹಿತಿಗಿಂತ ಈ ಅರ್ಜಿದಾರರ ಬಳಿ ಸ್ವತಂತ್ರ ಮಾಹಿತಿ ಏನಿದೆ?” ಎಂದರು.
ಅದಕ್ಕೆ ಖೋಸ್ಲಾ ಅವರು “ಚಿನ್ನಯ್ಯನ ಜೊತೆ ಸಂವಾದ ನಡೆಸಿ ಅರ್ಜಿದಾರರು ಆತನ ಜೊತೆ ಶವ ಹೂತಿರುವ ಸ್ಥಳಗಳಿಗೆ ಹೋಗಿದ್ದರು. ವೈಯಕ್ತಿಕವಾಗಿ ಶವಗಳನ್ನು ಕಂಡಿದ್ದಾರೆ. ಸದ್ಯ ಚಿನ್ನಯ್ಯನ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಮೂಲ ದೂರಿನಿಂದ ಹಿಂದೆ ಸರಿಯುತ್ತಿರುವುದಕ್ಕಾಗಿ ಚಿನ್ನಯ್ಯನ ವಿರುದ್ದ ಪ್ರಕರಣ ದಾಖಲಿಸಲಾಗಿದೆಯೇ ಎಂಬುದನ್ನು ಎಸ್‌ಐಟಿ ಸ್ಪಷ್ಟಪಡಿಸಬೇಕು. ಹಿಂದೆ ಸರಿಯುತ್ತಿರುವುದಕ್ಕಾಗಿ ದೂರು ದಾಖಲಿಸಿದ್ದರೆ ತನಿಖೆಯಲ್ಲಿ ಗೊಂದಲ ಸೃಷ್ಟಿ ಏಕೆ?” ಎಂದರು.
ಅದಕ್ಕೆ ಪೀಠವು ಕೋಸ್ಲಾ ಅವರನ್ನು ಕುರಿತು “ಸದ್ಯ ನೀವು ಅರ್ಜಿದಾರರ ಪರ ವಕೀಲರು, ಚಿನ್ನಯ್ಯನನ್ನು ಪ್ರತಿನಿಧಿಸುವಾಗ ಈ ಪ್ರಶ್ನೆ ಕೇಳಬಹುದು” ಎಂದರು.
ಮುಂದುವರಿದು, “ಚಿನ್ನಯ್ಯನ ಬಳಿ ಇರುವ ಮಾಹಿತಿಗಿಂತ ನಿಮ್ಮ ಬಳಿ ಸ್ವತಂತ್ರ ಮಾಹಿತಿ ಇದ್ದರೆ ಅದನ್ನು ಪರಿಗಣಿಸಬಹುದಿತ್ತು. ನಿಮ್ಮ ಕೋರಿಕೆಗೆ ಅನುಮತಿಸಿದರೆ ನಾಳೆ ಬೇರೆ ಯಾರೋ ನಾವೂ ಶವಗಳನ್ನು ಹೂತಿರುವುದನ್ನು ನೋಡಿದ್ದೇವೆ ಎಂದು ಮುಂದೆ ಬರಬಹುದು. ಇದಕ್ಕೆ ಕೊನೆ ಮೊದಲೇ ಇರುವುದಿಲ್ಲ” ಎಂದಿತು.
ಆಗ ಖೋಸ್ಲಾ ಅವರು “ಚಿನ್ನಯ್ಯ 13 ಸ್ಥಳ ಗುರುತಿಸಿದ್ದ, ನಾವು ಅದಕ್ಕೂ ಹೆಚ್ಚಿನ ಸ್ಥಳ ಗುರುತಿಸುತ್ತೇವೆ. ಭಯದಿಂದ ನಾವು ಅದನ್ನು ಮಾಡಿಲ್ಲ. ಅದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಫೋಟೊಗಳಿವೆ. ನ್ಯಾಯಾಲಯ ಬಯಸಿದರೆ ನಾವು ಅದನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ಚಿನ್ನಯ್ಯನ ಬಳಿದ್ದ ಮಾಹಿತಿಗಿಂತ ಸ್ವತಂತ್ರವಾದ ಮಾಹಿತಿ ಅರ್ಜಿದಾರರ ಬಳಿ ಇದ್ದು, ಅದನ್ನು ದಾಖಲೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದರು.
ಈ ಹಂತದಲ್ಲಿ ಅರ್ಜಿದಾರರ ಪರ ವಕಾಲತ್ತು ವಹಿಸಿರುವ ವಕೀಲೆ ರಾಣಿ ಅವರು ಕೆಲವು ಚಿತ್ರಗಳನ್ನು ನ್ಯಾಯಾಲಯಕ್ಕೆ ತೋರಿಸಲು ಮುಂದಾದರು. ಇವುಗಳನ್ನು ದಾಖಲೆಯಲ್ಲಿ ಸಲ್ಲಿಸಲಾವುದು ಎಂದರು.
ಆಗ ಜಗದೀಶ್ ಅವರು “ಅರ್ಜಿದಾರರು ಸಲ್ಲಿಸಲು ಬಯಸಿರುವ ಚಿತ್ರಗಳನ್ನು ನೋಡಿದ್ದೇನೆ. ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಧರ್ಮಸ್ಥಳಕ್ಕೆ ಬಂದು ನಾಪತ್ತೆಯಾಗಿದ್ದು, ಆನಂತರ ಕೊಲೆಯಾಗಿದ್ದರು ಎಂಬುದಕ್ಕೆ ಅವು ಸಂಬಂಧಿಸಿದ್ದಾಗಿವೆ. ಮಹಿಳೆಯೊಬ್ಬರು ಎಸ್‌ಐಟಿ ಮುಂದೆ ನನ್ನ ಪುತ್ರಿ ಎಂದಿದ್ದರು. ಆನಂತರ ತನಿಖೆ ನಡೆಸಿದಾಗ ಆ ಹುಡುಗಿ ಆ ಮಹಿಳೆಯ ಪುತ್ರಿಯಾಗಿರಲಿಲ್ಲ. ಆಕೆಯು ಬೆಂಗಳೂರಿನವಳಾಗಿದ್ದು, ಆಕೆಯ ಮನೆಯವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ, ಮಹಿಳೆಯ ವಕೀಲರು ವಿವಿಧ ಸ್ಥಳಗಳಲ್ಲಿ ಶವಗಳು ಪತ್ತೆಯಾಗಿವೆ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದರು” ಎಂದು ಪೀಠಕ್ಕೆ ವಿವರಿಸಿದರು.