ಸುದ್ದಿಗಳು

ಧರ್ಮಸ್ಥಳ ಪ್ರಕರಣ: ಮಟ್ಟಣ್ಣವರ್, ತಿಮರೋಡಿ, ಜಯಂತ್, ವಿಠಲಗೌಡಗೆ ಕಿರುಕುಳ ನೀಡದಂತೆ ಎಸ್‌ಐಟಿಗೆ ಹೈಕೋರ್ಟ್‌ ಸೂಚನೆ

ಧರ್ಮಸ್ಥಳ ಗ್ರಾಮದ 20 ಕಡೆ ಅಗೆದು ಪರಿಶೀಲನೆ ನಡೆಸಲಾಯಿತು. ಆನಂತರ ಆರೋಪ ಬಹುತೇಕ ಸುಳ್ಳು ಎಂದು ದೃಢಪಟ್ಟ ಹಿನ್ನೆಲೆಯಲ್ಲಿ  ದೂರುದಾರರನ್ನು ಆರೋಪಿಗಳನ್ನಾಗಿ ಮಾಡಿ ನೋಟಿಸ್ ನೀಡಲಾಗಿದೆ ಎಂದು ಸಮರ್ಥಿಸಿದ ಸರ್ಕಾರದ ವಕೀಲರು.

Bar & Bench

ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂಳಿರುವ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದ್ದ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಅಲ್ಲದೇ, ಪ್ರಕರಣದಲ್ಲಿ ದೂರುದಾರರಾಗಿರುವ ವಿಠಲಗೌಡ, ಗಿರೀಶ್ ಮಟ್ಟಣ್ಣವರ್, ಮಹೇಶ್ ತಿಮರೋಡಿ ಮತ್ತು ಟಿ ಜಯಂತ್ ಅವರುಗಳಿಗೆ ಕಿರುಕುಳ ನೀಡಬಾರದು ಎಂದು ಪೊಲೀಸರಿಗೆ ಸೂಚಿಸಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದು ಕೋರಿ ಅರ್ಜಿದಾರರಾದ ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ ಜಯಂತ್ ಮತ್ತು ವಿಠಲ್‌ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್ ಅವರ ಏಕಸದಸ್ಯ ಪೀಠ ನಡೆಸಿತು.

Justice Mohammad Nawaz

ವಾದ ಆಲಿಸಿದ ಪೀಠವು ಪ್ರಕರಣದ ತನಿಖೆಗೆ ನವೆಂಬರ್‌ 12ರವರೆಗೆ ತಡೆ ನೀಡಿತಲ್ಲದೆ ಅರ್ಜಿದಾರರಿಗೆ ಕಿರುಕುಳ ನೀಡದಂತೆ ಪೊಲೀಸರಿಗೆ ನಿರ್ದೇಶನ ನೀಡಿತು. ಜೊತೆಗೆ ಎಸ್‌ಐಟಿ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.

ವಿಚಾರಣೆಯ ಕೊನೆಯಲ್ಲಿ ಅರ್ಜಿದಾರರ ಪರ ವಕೀಲ ಎಸ್ ಬಾಲಕೃಷ್ಣನ್‌ ಅವರು ಅರ್ಜಿದಾರರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಬೇಕು ಎಂದು ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಮಧ್ಯಂತರ ಆದೇಶ ಮಾಡಿತು.

ಇದಕ್ಕೂ ಮುನ್ನ ವಾದಿಸಿದ ಬಾಲನ್ ಅವರು “ಅರ್ಜಿದಾರರಿಗೆ ಈಗಾಗಲೇ ಒಂಭತ್ತು ಬಾರಿ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲಾಗಿದೆ. ಆದರೆ, ಎಫ್‌ಐಆರ್‌ನಲ್ಲಿ ಅವರನ್ನು ಆರೋಪಿಗಳು ಎಂದು ಉಲ್ಲೇಖಿಸಿಲ್ಲ. ಖುದ್ದಾಗಿ ನೋಟಿಸ್ ಜಾರಿ ಮಾಡದೇ ವಾಟ್ಸಪ್, ಇಮೇಲ್‌ನಲ್ಲಿ ನೀಡಿದ್ದಾರೆ. ಜೊತೆಗೆ ಬಿಎನ್‌ಎಸ್‌ಎಸ್ ಸೆಕ್ಷನ್ 35(3) ಅಡಿಯಲ್ಲಿ ಸಮನ್ಸ್ ನೀಡಲಾಗಿದೆ. ಎಸ್‌ಐಟಿ ಸಮನ್ಸ್  ನೀಡಿರುವುದು ಕಾನೂನುಬಾಹಿರ. ಅರ್ಜಿದಾರರು ಆರೋಪಿಗಳೂ ಅಲ್ಲ, ಸಾಕ್ಷಿಗಳೂ ಅಲ್ಲ. ಹೀಗಾಗಿ ನೋಟಿಸ್ ರದ್ದುಗೊಳಿಸಬೇಕು” ಎಂದು ಕೋರಿದರು.

ಅಲ್ಲದೆ, “ರಾಜಕೀಯ, ಧಾರ್ಮಿಕ, ಸಂಘಟನಾತ್ಮಕ ವೈರತ್ವದಿಂದ ನೋಟಿಸ್‌ಗಳನ್ನು ನೀಡಲಾಗಿದೆ. ಇದೀಗ 10ನೇ ನೋಟಿಸ್ ನೀಡಿ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಕೂರಿಸುತ್ತಾರೆ. ಈಗಾಗಲೇ 150 ಗಂಟೆಗೂ ಅಧಿಕ ಕಾಲ ದೂರುದಾರರನ್ನು ವಿಚಾರಣೆ  ನಡೆಸಲಾಗಿದೆ. ಆರಂಭದಲ್ಲಿ ಬಿಎನ್‌ಎಸ್‌ ಸೆಕ್ಷನ್‌ 211(ಎ) ಅಡಿ ಎಫ್‌ಐಆರ್‌ ದಾಖಲಿಸಿ ನಂತರ ಬೇರೆ ಸೆಕ್ಷನ್ ಸೇರಿಸಿದ್ದಾರೆ. ಅದೂ ಎರಡೂವರೆ ತಿಂಗಳ ನಂತರ ಹೊಸ ಸೆಕ್ಷನ್ ಗಳನ್ನು ಸೇರ್ಪಡೆ ಮಾಡಲಾಗಿದೆ” ಎಂದರು.

ವಿಡಿಯೋ ಕಾನರೆನ್ಸ್ ಮೂಲಕ ಅರ್ಜಿದಾರರ ಪರ ವಾದಿಸಿದ ವಕೀಲ ದೀಪಕ್ ಖೋಸ್ಲಾ ಅವರು “ಅರ್ಜಿದಾರರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದೇ ಕಾನೂನುಬಾಹಿರ. ಮ್ಯಾಜಿಸ್ಟ್ರೇಟ್ ಆದೇಶವಿಲ್ಲದೇ ಎಫ್‌ಐಆರ್‌ ದಾಖಲಿಸಬಾರದಿತ್ತು” ಎಂದರು.

ಆಗ ನ್ಯಾಯಾಲಯವು “ಇಷ್ಟೊಂದು ಪೊಲೀಸ್ ನೋಟಿಸ್ ಏಕೆ ಕೊಟ್ಟಿದ್ದೇರಾ? ಪ್ರತಿದಿನ ಒಂದೊಂದು ನೋಟಿಸ್ ನೀಡಿರುವುದು ಏಕೆ” ಎಂದು ಸರ್ಕಾರವನ್ನು ಪ್ರಶ್ನಿಸಿತು.

ಎಸ್‌ಐಟಿ ಪರ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಅರ್ಜಿದಾರರ ಪ್ರಚೋದನೆ ಹಿನ್ನೆಲೆಯಲ್ಲಿ ಚಿನ್ನಯ್ಯ ದೂರು ನೀಡಿದ್ದಾನೆ. ನಂತರ ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆಯಲ್ಲಿ ಅರ್ಜಿದಾರರ ಮೇಲೆ ಆರೋಪ ಮಾಡಿದ್ದಾನೆ. ಧರ್ಮಸ್ಥಳ ಗ್ರಾಮದ 20 ಕಡೆ ಅಗೆದು ಪರಿಶೀಲನೆ ನಡೆಸಲಾಯಿತು. ಆನಂತರ ಆರೋಪ ಬಹುತೇಕ ಸುಳ್ಳು ಎಂದು ದೃಢಪಟ್ಟ ಹಿನ್ನೆಲೆಯಲ್ಲಿ  ದೂರುದಾರರನ್ನು ಆರೋಪಿಗಳನ್ನಾಗಿ ಮಾಡಿ ನೋಟಿಸ್ ನೀಡಲಾಗಿದೆ” ಎಂದರು.

ಆಗ ನ್ಯಾಯಾಲಯವು “ಪ್ರತ್ಯೇಕ ಎಫ್‌ಐಆರ್‌ ದಾಖಲಿಸಬಹುದಿತ್ತಲ್ಲವೇ” ಎಂದು ಪ್ರಶ್ನಿಸಿತು. ಅದಕ್ಕೆ ಜಗದೀಶ್ “ದಾಖಲಿಸಿರುವ ಎಫ್‌ಐಆರ್‌ನಲ್ಲೇ ತನಿಖೆ ಮುಂದುವರಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪಿದೆ. ಸೆಕ್ಷನ್ 35(3) ಅಡಿ ನೋಟಿಸ್ ಜಾರಿಗೊಳಿಸಿದ ಬಳಿಕ ಅರ್ಜಿದಾರರು ಬಂದಿಲ್ಲ. ಇದೀಗ ಹೊಸದಾಗಿ 35(3) ಅಡಿಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ. ಅರ್ಜಿದಾರರು ನ್ಯಾಯಾಲಯ, ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಪ್ರಚೋದನೆ ಮೇರೆಗೆ ಚಿನ್ನಯ್ಯ ದೂರು ನೀಡಿದ್ದು, ಇದೀಗ ಅವರು ತನಿಖೆಗೆ ಸಹಕರಿಸುತ್ತಿಲ್ಲ. ಆ ಮೂಲಕ ರಾಜ್ಯದ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಡೀ ವ್ಯವಸ್ಥೆಯ ಮೇಲೆ ಸವಾರಿ ಮಾಡಲು ಹೊರಟಿರುವ ಇಂತಹವರ ವಿರುದ್ಧ ತನಿಖೆ ಮುಂದುವರಿಸಲು ಅನುವು ಮಾಡಿಕೊಡಬೇಕು” ಎಂದು ನ್ಯಾಯಾಲಯವನ್ನು ಕೋರಿದರು.