yಧರ್ಮಸ್ಥಳದ ಗ್ರಾಮದಲ್ಲಿ ನಾವು ಗುರುತಿಸಿರುವ ಸ್ಥಳಗಳಲ್ಲಿ ಕೂಡಲೇ ಅಗೆಯಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶನ ನೀಡಬೇಕು ಎಂದು ಕೋರಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಲು ಕರ್ನಾಟಕ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಧರ್ಮಸ್ಥಳ ಗ್ರಾಮದ ಪಾಂಗಾಳ ಮನೆಯ ನಿವಾಸಿ ಪಾಂಡುರಂಗ ಗೌಡ ಮತ್ತು ತುಕಾರಾಂ ಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ದೀಪಕ್ ಖೋಸ್ಲಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ “ಅರ್ಜಿದಾರರು ಎಸ್‌ಐಟಿಗೆ ಕಳೆದ ತಿಂಗಳ 29ರಂದು ಅರ್ಜಿ ಸಲ್ಲಿಸಿದ್ದು, ಧರ್ಮಸ್ಥಳದಲ್ಲಿ ನೂರಾರು ಅನಾಮಧೇಯ ಶವಗಳನ್ನು ಅಕ್ರಮವಾಗಿ ದಫನ್ ಮಾಡಿರುವ ಬಗ್ಗೆ ಸ್ಥಳಗಳನ್ನು ಗುರುತಿಸಿದ್ದಾರೆ. ಈ ಸ್ಥಳಗಳಲ್ಲಿ ಕೂಡಲೇ ಭೂಮಿ ಅಗೆತ ಶುರುಮಾಡಲು ಎಸ್‌ಐಟಿಗೆ ನಿರ್ದೇಶನ ನೀಡಬೇಕು” ಎಂದು ಮನವಿ ಮಾಡಿದರು.
ಖೋಸ್ಲಾ ಅವರ ವಾದಕ್ಕೆ ಪ್ರತಿಯಾಗಿ ಪ್ರಾಸಿಕ್ಯೂಷನ್ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು ಅರ್ಜಿದಾರರ ಪರ ವಕಾಲತ್ತನ್ನೇ ಸಲ್ಲಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಇದನ್ನು ಪರಿಶೀಲಿಸಿದ ಪೀಠವು “ಕಚೇರಿಯ ಆಕ್ಷೇಪಣೆಗಳನ್ನು ಪೂರೈಸಿ, ಪ್ರಾಸಿಕ್ಯೂಷನ್‌ಗೆ ಅರ್ಜಿಯ ಪ್ರತಿಯನ್ನು ನೀಡಿ ಎಂದು ಅರ್ಜಿದಾರರಿಗೆ ಆದೇಶಿಸಿತು. ಅಂತೆಯೇ, ಪ್ರಾಸಿಕ್ಯೂಷನ್ ಅರ್ಜಿದಾರರ ಮನವಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಒದಗಿಸಬೇಕು” ಎಂದು ಜಗದೀಶ್ ಅವರಿಗೆ ನಿರ್ದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 18ಕ್ಕೆ ಮುಂದೂಡಿತು.
ಎಸ್‌ಐಟಿಗೆ ಆಗಸ್ಟ್ 29ರಂದು ನೀಡಿರುವ ಮನವಿಯನ್ನು ಪರಿಶೀಲಿಸಿ ಈ ಕೂಡಲೇ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು. ಅರ್ಜಿದಾರರು ತೋರಿಸುವ ಸ್ಥಳಗಳಲ್ಲಿ ಭೂಮಿ ಅಗೆಯಲು ಅನುವಾಗುವಂತೆ ಅರ್ಜಿದಾರರಿಗೆ ಜೊತೆಯಾಗಿ ನ್ಯಾಯಾಂಗ ರಿಜಿಸ್ಟ್ರಾರ್ ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಕೋರ್ಟ್ ಕಮಿಷನರ್ ನೇಮಕ ಮಾಡಬೇಕು. ಈ ಕುರಿತು ವಾಸ್ತವಿಕ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.