ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮಹಿಳೆಯರು ಮತ್ತು ಮಕ್ಕಳ ಮೃತದೇಹಗಳನ್ನು ಹೂತಿರುವುದಾಗಿ ಹೇಳಿಕೆ ನೀಡಿದ್ದ ವ್ಯಕ್ತಿಯು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆ ದಾಖಲಿಸಿದ್ದಾರೆ.
ಕಪ್ಪು ಬಟ್ಟೆಯಿಂದ ಪೂರ್ತಿ ಮುಖ ಮುಚ್ಚಿಕೊಂಡಿದ್ದ ವ್ಯಕ್ತಿಯು ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ ಸಂದೇಶ್ ಅವರ ಕೊಠಡಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 183ರ ಅಡಿ ಹೇಳಿಕೆ ದಾಖಲಿಸಿದರು. ಹೇಳಿಕೆ ದಾಖಲಿಸುವಾಗ ನ್ಯಾಯಾಧೀಶರ ಕೊಠಡಿಯಲ್ಲಿ ದೂರುದಾರನ ಜೊತೆಗೆ ಇರಲು ನಿರ್ದಿಷ್ಟ ಮನವಿಯ ಹೊರತಾಗಿಯೂ ಆತನ ವಕೀಲರಿಗೆ ಅವಕಾಶ ನಿರಾಕರಿಸಲಾಗಿತ್ತು ಎನ್ನಲಾಗಿದೆ.
ಧರ್ಮಸ್ಥಳದಲ್ಲಿ ತಾನು ಸ್ವಚ್ಛತಾ ಕಾರ್ಮಿಕನಾಗಿ 1995-2014ರವರೆಗೆ ಕೆಲಸ ಮಾಡುವಾಗ ಹಲವು ಮೃತದೇಹಗಳನ್ನು ತಾನು ಹೂತಿರುವುದಾಗಿ ದೂರುದಾರ ಕೆಲ ದಿನಗಳ ಹಿಂದೆ ಆರೋಪಿಸಿದ್ದರು. ಈ ಪೈಕಿ ಹಲವರು ಹೆಣ್ಣು ಮಕ್ಕಳು ಮತ್ತು ಮಹಿಳೆಯರಾಗಿದ್ದು, ಅವರ ದೇಹದ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಕುರುಹುಗಳಿತ್ತು ಎಂದಿದ್ದರು.
ಆರೋಪ ಮಾಡಿರುವ ವ್ಯಕ್ತಿಯ ಹೇಳಿಕೆ ದಾಖಲಿಸುವಾಗ ಆತನ ಜೊತೆಗೆ ಇರಲು ವಕೀಲರಾದ ಓಜಸ್ವಿ ಗೌಡ, ಪವನ್ ಶ್ಯಾಮ್, ಧೀರಜ್ ಎಸ್ ಜೆ ಮತ್ತು ವಿಶ್ವಾಸ್ ಎನ್ ಬಿ ಅವರಿಗೆ ಅನುಮತಿ ನಿರಾಕರಿಸಲಾಗಿತ್ತು ಎನ್ನಲಾಗಿದೆ. ಹೇಳಿಕೆ ದಾಖಲಿಸಿದ ದೂರುದಾರ ಕೆಲವು ದೇಹಗಳ ಮೂಳೆಗಳನ್ನು ಪೊಲೀಸರಿಗೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಮನವಿ ನೀಡಿದ ಒಂದು ವಾರದ ಬಳಿಕ ಇಂದು ʼಸಾಕ್ಷಿ ರಕ್ಷಣಾ ಯೋಜನೆ 2018ʼರ ಅಡಿ ದೂರುದಾರನಿಗೆ ಪೊಲೀಸರು ರಕ್ಷಣೆ ಒದಗಿಸಿದ್ದಾರೆ. ಈ ಮಧ್ಯೆ, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಶುಕ್ರವಾರ ಬೆಳ್ತಂಗಡಿ ತಲುಪಿದ್ದು, ಮೂಳೆಗಳ ಪರಿಶೀಲನಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ವಕೀಲರ ಜೊತೆಗೂಡಿ ಧರ್ಮಸ್ಥಳದಲ್ಲಿ ಈ ಹಿಂದೆ ಸ್ವಚ್ಛತಾ ಕಾರ್ಮಿಕನಾಗಿದ್ದ ವ್ಯಕ್ತಿಯು ಜುಲೈ 3ರಂದು ದೂರು ದಾಖಲಿಸಿದ್ದರು. ತನಗೆ ರಕ್ಷಣೆ ನೀಡಿದರೆ ಶವಗಳನ್ನು ಹೂತಿರುವ ಸ್ಥಳ ತೋರಿಸುವುದಾಗಿಯೂ ಆತ ಹೇಳಿದ್ದರು. ದೂರಿನಲ್ಲಿ ಆತ ತಾನು ಹೂತಿದ್ದ ಒಂದು ದೇಹವನ್ನು ಹೊರತೆಗೆದಿರುವುದಾಗಿಯೂ ಹೇಳಿದ್ದಾರೆ. ಜುಲೈ 4ರಂದು ಧರ್ಮಸ್ಥಳ ಪೊಲೀಸರು ಬಿಎನ್‌ಎಸ್ 211 ಅಡಿ ಪ್ರಕರಣ ದಾಖಲಿಸಿದ್ದಾರೆ.