ಬಹುಕೋಟಿ ಬ್ಯಾಂಕ್ ಸಾಲ ಹಗರಣದಲ್ಲಿ ಬಂಧಿತರಾಗಿದ್ದ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್ಎಫ್ಎಲ್) ಮಾಜಿ ಪ್ರವರ್ತಕರಾದ ಕಪಿಲ್ ವಾಧ್ವಾನ್ ಮತ್ತವರ ಸಹೋದರ ಧೀರಜ್ ವಾಧ್ವಾನ್ ಅವರಿಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಗೊಳಿಸಿದೆ.
ಆರೋಪಿಗಳ ವಿರುದ್ಧದ ಆರೋಪಪಟ್ಟಿಯನ್ನು ಸಕಾಲದಲ್ಲಿ ಸಲ್ಲಿಸಲಾಗಿದ್ದು ವಿಚಾರಣಾ ನ್ಯಾಯಾಲಯ ಸೂಕ್ತ ಕಾಲದಲ್ಲಿ ಆರೋಪಗಳನ್ನು ಗಣನೆಗೆ ತೆಗೆದುಕೊಂಡಿದೆ. ಆದ್ದರಿಂದ, ವಾಧ್ವಾನ್ ಸಹೋದರರು ಶಾಸನಬದ್ಧ ಜಾಮೀನು ಹಕ್ಕನ್ನು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರಿದ್ದ ಪೀಠ ತಿಳಿಸಿದೆ.
ಹೀಗಾಗಿ ಇವರಿಗೆ ಡೀಫಾಲ್ಟ್ (ಶಾಸನಬದ್ಧ) ಜಾಮೀನು ನೀಡುವ ವಿಚಾರಣಾ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಬದಿಗೆ ಸರಿಸಿತು.
"ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳು ಬಹಳ ತಪ್ಪು ಮಾಡಿವೆ. ನಿಯಮಿತ ಜಾಮೀನಿಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಹೊಸದಾಗಿ ವಿಚಾರಣೆ ನಡೆಸಬೇಕು. ಅದಕ್ಕೆ ಅನುಗುಣವಾಗಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ" ಎಂದು ಅದು ಹೇಳಿದೆ.
ಸುಮಾರು 34,615 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಇಬ್ಬರೂ ಆರೋಪಿಗಳನ್ನು ಜುಲೈ 2022ರಲ್ಲಿ ಸಿಬಿಐ ಬಂಧಿಸಿತ್ತು.
ಅಕ್ಟೋಬರ್ 2022ರಲ್ಲಿ ಅವರು ಹಾಗೂ ಇತರ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತಾದರೂ ಕೆಲ ಅಂಶಗಳ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ವರದಿ ಉಲ್ಲೇಖಿಸಿತ್ತು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಹದಿನೇಳು ಬ್ಯಾಂಕುಗಳ ಒಕ್ಕೂಟಕ್ಕೆ ಮೋಸ ಮಾಡಲು ಕಪಿಲ್ ವಾಧ್ವಾನ್, ಧೀರಜ್ ವಾಧ್ವಾನ್ ಹಾಗೂ ಇತರ ಆರೋಪಿಗಳು ಕ್ರಿಮಿನಲ್ ಪಿತೂರಿ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಆರೋಪಿಗಳಿಗೆ ಜಾಮೀನು ನೀಡಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಮೇ 2023ರಲ್ಲಿ ದೆಹಲಿ ಹೈಕೋರ್ಟ್ ಎತ್ತಿಹಿಡಿದಿತ್ತು. ಈ ತೀರ್ಪುಗಳನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಕದತಟ್ಟಿತ್ತು.
ಇದೀಗ ಸಿಬಿಐ ಮೇಲ್ಮನವಿಯನ್ನು ಪುರಸ್ಕರಿಸಿರುವ ಸರ್ವೋಚ್ಚ ನ್ಯಾಯಾಲಯ ವಾಧ್ವಾನ್ ಸಹೋದರರಿಗೆ ನೀಡಿದ್ದ ಡೀಫಾಲ್ಟ್ ಜಾಮೀನು ಹಿಂಪಡೆಯುವಂತೆ ಆದೇಶಿಸಿದೆ. ಜೊತೆಗೆ ಅವರನ್ನು ತಕ್ಷಣ ವಶಕ್ಕೆ ಪಡೆಯುವಂತೆ ಪೀಠ ಸೂಚಿಸಿದೆ.