Dhruv Rathee 
ಸುದ್ದಿಗಳು

ತನ್ನ ವಿರುದ್ಧ ಮೊಕದ್ದಮೆ ಹೂಡಿರುವ ಬಿಜೆಪಿ ನಾಯಕ ಸತ್ಯ ಮರೆಮಾಚಿದ್ದಾರೆ: ದೆಹಲಿ ನ್ಯಾಯಾಲಯದಲ್ಲಿ ಧ್ರುವ್‌ ರಾಠಿ ಆರೋಪ

ತಮ್ಮ ವಿರುದ್ಧ ರಾಠಿ ಹೇಳಿಕೆ ಪ್ರಕಟಿಸದಂತೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ನಖುವಾ ಕೋರಿದ್ದ ಅರ್ಜಿಯನ್ನು ದೆಹಲಿಯ ಸಾಕೇತ್ ನ್ಯಾಯಾಲಯ ಆಗಸ್ಟ್ 27ರಂದು ಆಲಿಸಲಿದೆ.

Bar & Bench

ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಮುಂಬೈ ಬಿಜೆಪಿ ಘಟಕದ ವಕ್ತಾರ ಸುರೇಶ್‌ ಕರಮ್ಶಿ ನಖುವಾ ಅವರು ಸಾರ್ವಜನಿಕ ವ್ಯಕ್ತಿಗಳನ್ನು ದುರುಪಯೋಗಪಡಿಸಿಕೊಂಡ ಇತಿಹಾಸ ಹೊಂದಿದ್ದು ಅನುಕೂಲಕರ ಆದೇಶ ಪಡೆಯುವುದಕ್ಕಾಗಿ ನ್ಯಾಯಾಲಯದ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಎಂದು ಖ್ಯಾತ ಯೂಟ್ಯೂಬರ್‌ ಧ್ರುವ್‌ ರಾಠಿ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಪತ್ರಕರ್ತೆ ಬರ್ಖಾ ದತ್, ಅಂಕಣಕಾರ ಸುಹೇಲ್ ಸೇಠ್ ಮತ್ತಿತರರ ವಿರುದ್ಧ ನಖುವಾ ಅಸಭ್ಯ ಭಾಷೆ ಬಳಸಿರುವ ಕೆಲವು ಟ್ವೀಟ್‌ಗಳನ್ನು ವಕೀಲ ನಕುಲ್ ಗಾಂಧಿ ಅವರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ, ರಾಠಿ ಅವರು ಉಲ್ಲೇಖಿಸಿದ್ದಾರೆ.

ಇಂತಹ ಟ್ವೀಟ್‌ಗಳನ್ನು ಆಧರಿಸಿಯೇ ತಾನು ನಖುವಾ ವಿರುದ್ಧ ʼನಿಂದನಾತ್ಮಕ ಟ್ರೋಲ್‌ʼ ಎಂದು ಕರೆದೆ. ಆದರೆ ಅದನ್ನಷ್ಟೇ ಪ್ರಸ್ತಾಪಿಸಿದ ನಖುವಾ ಅವರು ಉದ್ದೇಶಪೂರ್ವಕವಾಗಿ ಸತ್ಯ ಮರೆ ಮಾಚಿದ್ದಾರೆ. ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ವೀಡಿಯೊ ದೋಷದಿಂದ ಕೂಡಿದೆ ಎಂದು ರಾಠಿ ವಿವರಿಸಿದ್ದಾರೆ. ವಾಸ್ತವಾಂಶಗಳನ್ನು ಮರೆಮಾಚಿ ನ್ಯಾಯಾಲಯದಿಂದ ಏಕಪಕ್ಷೀಯ ಆದೇಶ ಪಡೆಯುವ ಸನ್ನಾಹದಲ್ಲಿ ಅವರಿದ್ದಾರೆ ಎಂದು ತಿಳಿಸಲಾಗಿದೆ.

ತಮ್ಮನ್ನು ನಿಂದನಾತ್ಮಕವಾಗಿ ಟ್ರೋಲ್‌ ಮಾಡುವುದಕ್ಕೆ ತಡೆ ನೀಡುವಂತೆ ಕೋರಿ ನಖುವಾ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ರಾಠಿ ಈ ವಾದ ಮಂಡಿಸಿದ್ದಾರೆ.

ನಖುವಾ ಅವರ ಮನವಿಗೆ ನ್ಯಾಯಾಲಯ ಸ್ಪಂದಿಸಿದರೆ ಅದು ಸೂಪರ್ ತಡೆಯಾಜ್ಞೆ ಅಥವಾ ಸಂಪೂರ್ಣ ತಡೆಯಾಜ್ಞೆಗೆ ಸಮನಾಗಿ ಬಿಡುತ್ತದೆ ಎಂದು ರಾಠಿ ತಿಳಿಸಿದ್ದಾರೆ. 

ತಮ್ಮನ್ನು 'ಹಿಂಸಾತ್ಮಕ ಮತ್ತು ನಿಂದನಾತ್ಮಕ ಟ್ರೋಲ್‌ಗಳ' ಗುಂಪಿನ ಭಾಗ ಎಂದು ರಾಠಿ ಕರೆದಿದ್ದಾರೆ ಡಿಜಿಟಲ್‌ ವೇದಿಕೆಗಳಲ್ಲಿ ಅವರ ಹೇಳಿಕೆ ವ್ಯಾಪಕವಾಗಿ ಹಬ್ಬಿದ್ದು ಅವರ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ. ಈ ಆರೋಪಗಳಿಂದಾಗಿ ತಾನು ವ್ಯಾಪಕ ಖಂಡನೆ ಮತ್ತು ಅಪಹಾಸ್ಯಕ್ಕೆ ತುತ್ತಾಗಿದ್ದೇನೆ ಎಂದು ನಖುವಾ ಈ ಹಿಂದೆ ವಾದಿಸಿದ್ದರು.