Karnataka High Court
Karnataka High Court 
ಸುದ್ದಿಗಳು

ಸಕ್ಕರೆ ಕಾಯಿಲೆ ನಿರ್ವಹಿಸಬಹುದು; ಇದನ್ನು ಉಲ್ಲೇಖಿಸಿ ಪತ್ನಿಗೆ ಜೀವನಾಂಶ ಪಾವತಿಯಿಂದ ತಪ್ಪಿಸಿಕೊಳ್ಳಲಾಗದು: ಹೈಕೋರ್ಟ್‌

Bar & Bench

ಪರಿತ್ಯಕ್ತ ಪತ್ನಿಗೆ ಜೀವನಾಂಶ ಪಾವತಿಯಿಂದ ತಪ್ಪಿಸಿಕೊಳ್ಳಲು ತನಗೆ ಸಕ್ಕರೆ ಕಾಯಿಲೆ ಇದೆ ಎಂಬ ಆಧಾರವನ್ನು ಪತಿ ನೀಡಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ [ಅನಂತ್‌ ಕುಮಾರ್‌ ಕೆ ಜಿ ವರ್ಸಸ್‌ ಯೋಗಿತಾ ಅನಂತ್‌ ಕುಮಾರ್‌].

ವಿಶ್ವದಾದ್ಯಂತ ಇಂಥ ಕಾಯಿಲೆಗಳಿಂದ ಸಾಕಷ್ಟು ಜನರು ಯಾತನೆ ಅನುಭವಿಸುತ್ತಿದ್ದು, ವೈದ್ಯಕೀಯ ವಿಜ್ಞಾನದಲ್ಲಿ ಬೆಳವಣಿಗೆ ಹಿನ್ನೆಲೆಯಲ್ಲಿ ಇವುಗಳನ್ನು ಸುಲಭವಾಗಿ ನಿರ್ವಹಿಸಬಹುದು ಎಂದು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಹೇಳಿದೆ. ಅಲ್ಲದೇ, ತನ್ನ ಪರಿತ್ಯಕ್ತ ಪತ್ನಿಗೆ ಮಾಸಿಕ ₹10,000 ಜೀವನಾಂಶ ಪಾವತಿಸುವಂತೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಪತಿಯ ಅರ್ಜಿಯನ್ನು ನ್ಯಾಯಾಲಯವು ವಜಾ ಮಾಡಿದೆ.

“ಅರ್ಜಿದಾರರು ತಾನು ಸಕ್ಕರೆ ಕಾಯಿಲೆ ಮತ್ತು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿರುವುದು ಮಾನ್ಯವಾಗುವುದಿಲ್ಲ. ಜಗತ್ತಿನಾದ್ಯಂತ ಇಂಥ ಕಾಯಿಲೆಯಿಂದ ಸಾಕಷ್ಟು ಜನರು ಯಾತನೆ ಅನುಭವಿಸುತ್ತಿದ್ದಾರೆ. ವೈದ್ಯಕೀಯ ವಿಜ್ಞಾನದಲ್ಲಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವುಗಳನ್ನು ನಿರ್ವಹಿಸಬಹುದಾಗಿದೆ. ಸರಿಯಾದ ವೈದ್ಯಕೀಯ ಆರೈಕೆಯೊಂದಿಗೆ ಅವುಗಳನ್ನು ನಿರ್ವಹಿಸಲಾಗುವುದಿಲ್ಲ ಎಂಬುದು ಅರ್ಜಿದಾರರ ವಾದವಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಮಾಸಿಕವಾಗಿ ಜೀವನಾಂಶವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಪತಿಯು ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದರು. ಪತ್ನಿಯು ಕೆಲಸ ಮಾಡುತ್ತಿದ್ದು, ಮಗುವಿನ ಕಸ್ಟಡಿಯನ್ನು ಪಡೆದಿರುವುದರಿಂದ ಆಕೆಗೆ ಜೀವನಾಂಶದ ಅಗತ್ಯವಿಲ್ಲ ಎಂದು ವಾದಿಸಿದ್ದರು. ಅಲ್ಲದೇ, ಜೀವನಾಂಶವು ದುಬಾರಿಯಾಗಿದ್ದು, ತಾನು ಸಕ್ಕರೆ ಕಾಯಿಲೆಯಿಂದ ಯಾತನೆ ಅನುಭವಿಸುತ್ತಿರುವುದಾಗಿ ವಾದಿಸಿದ್ದರು.

ಮದುವೆ ಮತ್ತು ಮಗುವಿನ ಬಗ್ಗೆ ಪತಿ-ಪತ್ನಿಯರಿಗೆ ಯಾವುದೇ ಆಕ್ಷೇಪಗಳಿಲ್ಲ. ಪತ್ನಿಗೆ ಬದುಕಿಗೆ ಬೇರೆ ಉದ್ಯೋಗ ಇದೆ ಎಂಬುದನ್ನು ತೋರಿಸಲಾಗಿಲ್ಲ. ಕಾನೂನು, ಧರ್ಮ ಮತ್ತು ನ್ಯಾಯದ ಪ್ರಕಾರ ಸಮರ್ಥ ವ್ಯಕ್ತಿಯು ತನ್ನ ಕುಟುಂಬ ನೋಡಿಕೊಳ್ಳಬೇಕು ಎಂದು ಹೇಳುತ್ತದೆ ಎಂದು ನ್ಯಾಯಾಲಯವು ಪುನರುಚ್ಚರಿಸಿದೆ. ಸಿಆರ್‌ಪಿಸಿ ಸೆಕ್ಷನ್‌ 125, ಹಿಂದೂ ವಿವಾಹ ಕಾಯಿದೆ ಸೆಕ್ಷನ್‌ 24 ಮತ್ತು ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆಯಲ್ಲೂ ಇದನ್ನೇ ಹೇಳಲಾಗಿದೆ.

ಇದುವರೆಗೆ ಯಾವುದೇ ಜೀವನಾಂಶ ಪಾವತಿಸಿಲ್ಲ ಏಕೆ ಎಂಬುದಕ್ಕೆ ವ್ಯಕ್ತಿಯು ಸೂಕ್ತವಾದ ವಿವರಣೆಯನ್ನು ನೀಡಿಲ್ಲ. ಜೀವನ ವೆಚ್ಚ ಹೆಚ್ಚಾಗಿದ್ದು, ತಾನು ಮತ್ತು ಮಗುವನ್ನು ಪತ್ನಿ ನೋಡಿಕೊಳ್ಳಬೇಕಿದೆ ಎಂದಿರುವ ನ್ಯಾಯಾಲಯವು ₹10,000 ಜೀವನಾಂಶ ಹೆಚ್ಚಾಯಿತು ಎಂಬ ವಾದವನ್ನು ತಿರಸ್ಕರಿಸಿದೆ.

ಅರ್ಜಿದಾರರನ್ನು ವಕೀಲ ಎಂ ನಾಗರಾಜ್‌ ಪ್ರತಿನಿಧಿಸಿದ್ದರು.