ಪ್ರಸಕ್ತ ಸಾಲಿನ ಪ್ರವೇಶಾತಿಗೆ ಸಾಮಾನ್ಯ ಕಾನೂನು ಪ್ರವೃತ್ತಿ ಪರೀಕ್ಷೆಗೆ (ಸಿಎಲ್‌ಎಟಿ) ಬದಲಾಗಿ ತನ್ನದೇ ಆದ ಪ್ರತ್ಯೇಕ ರಾಷ್ಟ್ರೀಯ ಕಾನೂನು ಪ್ರವೃತ್ತಿ ಪರೀಕ್ಷೆ (ಎನ್ಎಲ್‌ಎಟಿ) ನಡೆಸಿರುವ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್ಎಲ್‌ಎಸ್‌ಐಯು) ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಬುಧವಾರ ನಡೆಸಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.
ಎನ್‌ಎಲ್‌ಎಸ್‌ಐಯು ವಿಶ್ರಾಂತ ಉಪಕುಲಪತಿ ವೆಂಕಟ ರಾವ್ ಮತ್ತು ಅಭ್ಯರ್ಥಿಯ ಪೋಷಕರೊಬ್ಬರು ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸುಭಾಷ್ ರೆಡ್ಡಿ ಹಾಗೂ ಎಂ ಆರ್ ಷಾ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ಮುಂದೂಡಿತು. ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಪರವಾಗಿ ಹಿರಿಯ ವಕೀಲ ನಿದೇಶ್ ಗುಪ್ತಾ ವಾದಿಸಿದರು. ಎನ್‌ಎಲ್‌ಎಸ್‌ಐಯು ಪರವಾಗಿ ಅರವಿಂದ್ ದಾತಾರ್ ಹಾಗೂ ಸಜ್ಜನ್ ಪೂವಯ್ಯ ಹಾಜರಿದ್ದರು. ಅರ್ಜಿದಾರರನ್ನು ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಪ್ರತಿನಿಧಿಸಿದ್ದರು.
ಎನ್‌ಎಲ್‌ಎಸ್‌ಐಯು ಸೆಪ್ಟೆಂಬರ್ 3ರಂದು ಎನ್‌ಎಲ್‌ಎಟಿ ಸೆಪ್ಟೆಂಬರ್ 12ಕ್ಕೆ ನಿಗದಿಗೊಳಿಸಲಾಗಿದೆ ಎಂದು ಹೇಳಿತ್ತು. ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಂದು ಮರು ಪರೀಕ್ಷೆಯನ್ನೂ ಎನ್‌ಎಲ್‌ಎಸ್‌ಐಯು ನಡೆಸಿದೆ.
ಮರು ಪರೀಕ್ಷೆ ನಡೆಯುತ್ತಿರುವಾಗಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಇದರಿಂದ ಪರೀಕ್ಷೆಯ ಸಮಗ್ರತೆಗೆ ಯಾವುದೇ ಧಕ್ಕೆಯಿಲ್ಲ ಎಂದು ಹೇಳಿದ್ದ ಎನ್‌ಎಲ್‌ಎಸ್‌ಐಯು ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವವರನ್ನು ಪ್ರವೇಶಾತಿ ಹಂತದಿಂದ ದೂರ ಇಡಲಾಗುವುದು ಎಂದು ಪ್ರಕಟಣೆ ಹೊರಡಿಸಿತ್ತು.
ಪರೀಕ್ಷೆಗೆ ಇನ್ನೆರಡು ದಿನ ಬಾಕಿ ಎಂಬ ಹಂತದಲ್ಲಿ ಪರೀಕ್ಷೆ ಪ್ರಶ್ನಿಸಿ ಸಲ್ಲಿಸಿದ್ದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನಿಗದಿತ ದಿನಾಂಕದ ಪರೀಕ್ಷೆ ನಡೆಸಬಹುದು. ಆದರೆ, ಫಲಿತಾಂಶವು ನ್ಯಾಯಾಲಯದ ತೀರ್ಮಾನಕ್ಕೆ ಸಂಬಂಧಪಟ್ಟಿರುತ್ತದೆ. ಅಲ್ಲಿಯವರೆಗೆ ಫಲಿತಾಂಶ ಪ್ರಕಟಿಸಬಾರದು ಎಂದಿತ್ತು.
ಇಂದಿನ ವಿಚಾರಣೆಗೂ ಮುನ್ನ ಪ್ರತ್ಯುತ್ತರ ಮನವಿ ಸಲ್ಲಿಸಿರುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು ತನ್ನ ನಿಲುವನ್ನು ಬೆಂಬಲಿಸಿದೆ. ಇತ್ತ ಎನ್‌ಎಲ್‌ಎಸ್‌ಐಯೂ ಸಹ ಪ್ರತಿ ಅಫಿಡವಿಟ್ ಸಲ್ಲಿಸಿದ್ದು, ಎನ್‌ಎಲ್‌ಎಟಿ ನಡೆಸಿದ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಅರ್ಜಿದಾರರ ಮನವಿಯ ನಿರ್ವಹಣೆಯನ್ನು ಪ್ರಶ್ನಿಸಿದ್ದಾರೆ.
ಇಂದಿನ ವಿಚಾರಣೆಯ ಸಂದರ್ಭದಲ್ಲಿ ಎನ್‌ಎಲ್‌ಎಸ್ ಒಕ್ಕೂಟ ಪ್ರತಿನಿಧಿಸಿದ್ದ ಹಿರಿಯ ವಕೀಲ ನಿದೇಶ್ ಗುಪ್ತಾ ಅವರು ಎನ್‌ಎಲ್‌ಎಸ್‌ಐಯು ಲೋಪಗಳ ಬಗ್ಗೆ ಗಮನಸೆಳೆದರು. ಅವರ ವಾದದ ಪ್ರಮುಖ ಅಂಶಗಳು ಇಂತಿವೆ.
ಭಾರತೀಯ ರಾಷ್ಟ್ರೀಯ ಕಾನೂನು ಶಾಲೆ ಕಾಯಿದೆ-1986 ರ ಪ್ರಕಾರ ಶೈಕ್ಷಣಿಕ ಸಮಿತಿಯು ಕಾನೂನು ಶಾಲೆಯ ಶೈಕ್ಷಣಿಕ ಅಂಗ. ಸಾಮಾನ್ಯ ನಿಯಮಗಳಲ್ಲಿನ ಸುಧಾರಣೆ ಮಾಡುವ ಅಧಿಕಾರ ಸಮಿತಿಗೆ ಇದೆ. ಮಾನದಂಡ, ಪ್ರವೇಶಾತಿ ಮತ್ತು ಪರೀಕ್ಷೆಗಳ ಬಗ್ಗೆ ಸಮಿತಿ ನಿರ್ಧರಿಸಲಿದೆ.
ಶೈಕ್ಷಣಿಕ ಸಮಿತಿಯ ಪೂರ್ವಾನುಮತಿ ಪಡೆಯದೇ ಕಾರ್ಯಕಾರಿ ಸಮಿತಿಯು ಪ್ರವೇಶಾತಿ ಮತ್ತು ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಮಾಡಲಾಗದು.
ಶೈಕ್ಷಣಿಕ ಸಮಿತಿಯ ಪೂರ್ವಾನುಮತಿ ಅಗತ್ಯ. ಸಮಿತಿಯು ಉದ್ದೇಶಿತ ಸುಧಾರಣೆಯನ್ನು ತಿರಸ್ಕರಿಸಿದರೆ ಅದನ್ನು ಸಾಮಾನ್ಯ ಸಮಿತಿಯ ಮುಂದೆ ಪ್ರಸ್ತಾಪಿಸಲಾಗುವುದು. ಅಲ್ಲಿಯೂ ಪ್ರಸ್ತಾವ ತಿರಸ್ಕಾರವಾದರೆ ಉಪಕುಲಪತಿ ಏನನ್ನೂ ಮಾಡಲಾಗದು.
ನ್ಯಾ. ಅಶೋಕ್ ಭೂಷಣ್: ಇದು ಪರೀಕ್ಷೆಗಾಗಿ ಮಾಡಲಾಗಿರುವ ಸುಧಾರಣೆಯೇ?
ನಿದೇಶ್ ಗುಪ್ತಾ: ಎನ್‌ಎಲ್‌ಎಸ್‌ಐಯು ಸೇರಿದಂತೆ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಒಕ್ಕೂಟದ ಭಾಗವಾಗಿವೆ. ಒಕ್ಕೂಟವು ಸೊಸೈಟಿ ಎಂದು ನೋಂದಾವಣಿಯಾಗಿದ್ದು, ತನ್ನದೇ ಆದ ಬೈ-ಲಾ ಹೊಂದಿದೆ. ಸಿಎಲ್‌ಎಟಿ ನಡೆಸುವ ಕುರಿತು ಆಡಳಿತ ನಿರ್ವಹಣೆ, ನಿಯಂತ್ರಣ ಮತ್ತು ನಿಗಾ ವಹಿಸುವುದು ಹಾಗೂ ಪ್ರವೇಶ ಪ್ರಕ್ರಿಯೆ ಜಾರಿಗೊಳಿಸುವುದು.
ಒಕ್ಕೂಟದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ ನಡೆಸುವುದು. ಇದು ಒಕ್ಕೂಟ ಮತ್ತು ಸೊಸೈಟಿಯ ಒಪ್ಪಂದ.
ಪ್ರವೇಶಾತಿಗೆ ಸಂಬಂಧಿಸಿದಂತೆ ಅರ್ಹತೆ ಮತ್ತು ಸಿಎಲ್‌ಎಟಿ ಮೂಲಕ ಪ್ರವೇಶ ಪಡೆಯುವುದನ್ನು ಬಿಟ್ಟು ಸದಸ್ಯ ಸಂಸ್ಥೆಗಳಿಗೆ ಯಾವುದೇ ಮಾರ್ಗವಿಲ್ಲ. ಒಪ್ಪಂದ ಮತ್ತು ಬೈ-ಲಾದಲ್ಲಿ ಸಿಎಲ್‌ಎಟಿ ನಿಗದಿಗೊಳಿಸಲಾಗಿದೆ. ಮೀಸಲಾತಿ ಹಾಗೂ ಇತರೆ ವಿಚಾರಗಳಿಗೆ ಮಾತ್ರ ಸ್ವಾಯತ್ತತೆ ನೀಡಲಾಗಿದೆ.
ಒಕ್ಕೂಟದ ಭಾಗವಾಗಿರಲು ಇಚ್ಛೆಯಿಲ್ಲ ಎಂದಾದರೆ ನೀವು ಹೊರಹೋಗಬಹುದು. ಎಲ್ಲಿಯವರೆಗೆ ಒಕ್ಕೂಟದ ಭಾಗವಾಗಿರುತ್ತೀರೋ ಅಲ್ಲಿಯವರೆಗೆ ಬೈಲಾ ಅನುಸರಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ಇತರೆ ಪರೀಕ್ಷೆಗಳಂತೆ ಸಿಎಲ್‌ಎಟಿಯನ್ನೂ ಮುಂದೂಡಲಾಗಿತ್ತು.
ಸೆಪ್ಟೆಂಬರ್ 7ರಂದು ಸಿಎಲ್‌ಎಟಿ ನಡೆಸಲಾಗುವುದು ಎಂಬ ಆಗಸ್ಟ್ 10ರ ನಿರ್ಧಾರಕ್ಕೆ ಒಕ್ಕೂಟದ ಖಜಾಂಚಿ-ಕಾರ್ಯದರ್ಶಿಯಾಗಿದ್ದ ಸುಧೀರ್ ಕೃಷ್ಣಮೂರ್ತಿ ಸಹಿ ಮಾಡಿದ್ದಾರೆ.
ಎನ್‌ಎಲ್ಎಟಿ ಮೂಲಕ ಎನ್‌ಎಲ್‌ಎಸ್‌ಐಯು ಪ್ರವೇಶಾತಿ ನಡೆಸಲಾಗುವುದು ಎಂದು ನೋಟಿಸ್ ಬಿಡುಗಡೆ ಮಾಡಲಾಗಿತ್ತು. ಆಗಸ್ಟ್ 28ರಂದು ಎನ್‌ಎಲ್‌ಎಸ್‌ಐಯು ಎನ್‌ಎಲ್‌ಎಟಿ ನಡೆಸುವ ಬಗ್ಗೆ ಒಕ್ಕೂಟಕ್ಕೆ ಮಾಹಿತಿ ನೀಡಲಿಲ್ಲ.
ಎನ್‌ಎಲ್‌ಎಸ್‌ಐಯುನ ಕಾರ್ಯಕಾರಿ ಸಮಿತಿಯು ಆಗಸ್ಟ್ 12 ಮತ್ತು 18ರಂದು ಸಭೆ ನಡೆಸಿದೆ. ಸೆಪ್ಟೆಂಬರ್ ಒಳಗೆ ಎನ್‌ಎಲ್‌ಎಟಿ ಪೂರ್ಣಗೊಳಿಸುವುದಾಗಿ ಹೇಳಿದೆ. ಸೆಪ್ಟೆಂಬರ್ 28ಕ್ಕೆ ಸಿಎಲ್‌ಎಟಿ ನಿಗದಿಗೊಳಿಸಲಾಗಿದೆ. ಎನ್‌ಎಲ್‌ಎಸ್ಐಯು ಸಿಎಲ್‌ಎಟಿ ಅಂಕಗಳನ್ನು ಪ್ರಸಕ್ತ ವರ್ಷದ ಪ್ರವೇಶಾತಿಗೆ ಪರಿಗಣಿಸುವುದಿಲ್ಲ ಎಂದು ಹೇಳುತ್ತಿದೆ.
ನ್ಯಾ. ಭೂಷಣ್: ಎನ್‌ಎಲ್‌ಎಟಿ-2020 ಬದಿಗೆ ಸರಿಸುವುದು ಪ್ರಸ್ತುತವೇ?
ನಿದೇಶ್ ಗುಪ್ತಾ: ಎನ್‌ಎಲ್‌ಎಸ್‌ಐಯು ಮಾಡಿರುವುದು ನ್ಯಾಯಾಸಮ್ಮತವಲ್ಲ ಮತ್ತು ಅವರು ಕ್ರಿಮಿನಲ್ ಪ್ರಕರಣಗಳು ಮತ್ತು ಸೈಬರ್ ದೂರುಗಳನ್ನು ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರದೇ ಆದ ಅಧಿಸೂಚನೆ ಇದೆ.
ಕಾರ್ಯಕಾರಿ ಸಮಿತಿಯ ಸಭೆಯ ಬಗ್ಗೆ ಒಕ್ಕೂಟಕ್ಕೆ ಮಾಹಿತಿ ನೀಡಿಲ್ಲ. ಪರೀಕ್ಷೆಯನ್ನು ಮನೆಯಲ್ಲಿ ಕುಳಿತು ಬರೆಯಲಾಗದು ಎಂದು ದೆಹಲಿ ಹೈಕೋರ್ಟ್ ಗೆ ಆಗಸ್ಟ್ 25ರಂದು ಅಫಿಡವಿಟ್ ಸಲ್ಲಿಸಿದ್ದ ಎನ್‌ಎಲ್‌ಎಸ್‌ಐಯು ಈ ವಿಚಾರವನ್ನು ಕಾರ್ಯಕಾರಿ ಸಮಿತಿ ಗಮನಕ್ಕೆ ತಂದಿದೆಯೇ?
ಸೆಪ್ಟೆಂಬರ್ 28ಕ್ಕೆ ನಿಗದಿಯಾಗಿರುವ ಸಿಎಲ್‌ಎಟಿಗೆ ಆಗಸ್ಟ್ 28ರಂದು ಸಹಿ ಮಾಡಿರುವುದರ ಕುರಿತು ಎನ್‌ಎಲ್‌ಎಸ್‌ಐಯು ಕಾರ್ಯಕಾರಿ ಸಮಿತಿಗೆ ಮಾಹಿತಿ ನೀಡಿದೆಯೇ?
ಎನ್‌ಎಲ್‌ಎಸ್ಐಯು ಇದು ದೋಷಪೂರಿತ ನಡತೆ ಎಂದರೂ ಲಾಗ್ ಇನ್ ಗೂ ಮುನ್ನವೇ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಸಿಕ್ಕಿತ್ತು. ವಿದ್ಯಾರ್ಥಿಗಳ ಬಳಿ ಫೋನ್ ಇತ್ತು ಮತ್ತು ಇತರರ ಜೊತೆ ಅವರು ಸಂಪರ್ಕ ಸಾಧಿಸಿದ್ದಾರೆ ಎಂದು ಅವರೇ ಹೇಳುತ್ತಿದ್ದಾರೆ. ಮೆಸೇಜಿಂಗ್ ಅಪ್ಲಿಕೇಶನ್ ಗಳಲ್ಲಿ ವಿದ್ಯಾರ್ಥಿಗಳು ಹೇಗೆ ಪ್ರಶ್ನಿ ಪತ್ರಿಕೆ ಹಂಚಿಕೊಳ್ಳುತ್ತಿದ್ದರು ಎಂಬುದರ ಕುರಿತು “ಬಾರ್ ಅಂಡ್ ಬೆಂಚ್” ವರದಿ ಪ್ರಕಟಿಸಿದೆ.
ಎನ್‌ಎಲ್‌ಎಸ್‌ಐಯು ಪರ ಹಿರಿಯ ವಕೀಲ ಅರವಿಂದ್ ದಾತಾರ್ ವಾದ ಮಂಡನೆ: ಸಂಪೂರ್ಣ ಪ್ರಕ್ರಿಯೆಯನ್ನು ಕೆಳದರ್ಜೆಗೆ ಇಳಿಸುವ ವ್ಯವಸ್ಥಿತ ಆಂದೋಲನ ನಡೆಸಲಾಗುತ್ತಿದೆ. ಜಂಟಿ ಪ್ರವೇಶ ಪರೀಕ್ಷೆಗೆ ನಮ್ಮ ಸಮ್ಮತಿ ಇತ್ತು. ಪ್ರತ್ಯುತ್ತರ ಮನವಿ ಸಲ್ಲಿಸಲು ನಾವು ದೀರ್ಘ ಕಾಲ ಕೆಲಸ ಮಾಡಿದ್ದೇವೆ.
ಅರ್ಜಿದಾರರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್: ಸಾಮಾನ್ಯ ಪ್ರವೇಶ ಪರೀಕ್ಷೆಗಳಾದ ಜೆಇಇ, ನೀಟ್, ಸಿಎಲ್‌ಎಟಿ ಮಾಸಾಂತ್ಯದಲ್ಲಿ ನಡೆಸಲಾಗುತ್ತದೆ. ಆದರೆ, ಎನ್‌ಎಲ್‌ಎಟಿಯನ್ನು ತಿಂಗಳ ಆರಂಭದಲ್ಲೇ ನಡೆಸಬೇಕು. ಇದನ್ನು ಸಮರ್ಥಿಸಲಾಗದು.
ಹಿರಿಯ ವಕೀಲ ಅರವಿಂದ್ ದಾತಾರ್: ಸಿಎಲ್‌ಎಟಿಯಿಂದ ಹೊರಹೋಗಲು ಎನ್‌ಎಲ್‌ಎಸ್ ಗೆ ಸಾಧ್ಯವೇ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. ಎನ್‌ಎಲ್‌ಎಸ್ ತನ್ನದೇ ಆದ ಗೌವರ್ನರ್ ಮತ್ತು ಕಾರ್ಯಕಾರಿ ಸಮಿತಿಗಳನ್ನು ಒಳಗೊಂಡಿದೆ.
ಗುರುವಾರ 11.30ಕ್ಕೆ ಎನ್‌ಎಲ್‌ಎಸ್‌ಐಯು ಪರ ಅರವಿಂದ್ ದಾತಾರ್ ಮತ್ತು ಸಜ್ಜನ್ ಪೂವಯ್ಯ ವಾದ ಮಂಡಿಸಲಿದ್ದಾರೆ.