ಪಿಎಂ ಮೋದಿ ಪದವಿ ವಿವಾದ 
ಸುದ್ದಿಗಳು

ಗುಜರಾತ್ ವಿವಿಯನ್ನು ದೂಷಿಸಿಲ್ಲ; ಪ್ರಧಾನಿ ಮೋದಿಗೆ ನಕಲಿ ಪದವಿ ನೀಡಲಾಗಿದೆ ಎಂದಿಲ್ಲ: ಕೇಜ್ರಿವಾಲ್

ಕ್ರಮವಾಗಿ ಕೇಜ್ರಿವಾಲ್ ಮತ್ತು ಗುಜರಾತ್ ವಿವಿ ಪ್ರತಿನಿಧಿಸುತ್ತಿರುವ ಹಿರಿಯ ವಕೀಲರಾದ ರೆಬೆಕಾ ಜಾನ್ ಮತ್ತು ನಿರುಪಮ್ ನಾನಾವತಿ ಅವರ ವಾದವನ್ನು ಆಲಿಸಿದ ನ್ಯಾ. ಹಸ್ಮುಖ್ ಸುತಾರ್‌ ಆದೇಶ ಕಾಯ್ದಿರಿಸಿದರು.

Bar & Bench

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ವಿಚಾರವಾಗಿ ಗುಜರಾತ್‌ ವಿವಿ ತಮ್ಮ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ನೀಡಲಾಗಿದ್ದ ಸಮನ್ಸ್‌ ಆದೇಶ ಎತ್ತಿ ಹಿಡಿದಿದ್ದ ಸೆಷನ್ಸ್‌ ನ್ಯಾಯಾಲಯದ ನಿರ್ಧಾರ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಕ್ಷದ ಸಂಸದ ಸಂಜಯ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದ ಆದೇಶವನ್ನು ಗುಜರಾತ್‌ ಹೈಕೋರ್ಟ್‌ ಶುಕ್ರವಾರ ಕಾಯ್ದಿರಿಸಿದೆ [ಸಂಜಯ್‌ ಸಿಂಗ್‌ ಮತ್ತು ಗುಜರಾತ್‌ ವಿಶ್ವವಿದ್ಯಾಲಯ ನಡುವಣ ಪ್ರಕರಣ].

ಕ್ರಮವಾಗಿ ಕೇಜ್ರಿವಾಲ್ ಮತ್ತು ಗುಜರಾತ್ ವಿವಿ ಪ್ರತಿನಿಧಿಸುತ್ತಿರುವ ಹಿರಿಯ ವಕೀಲರಾದ ರೆಬೆಕಾ ಜಾನ್ ಮತ್ತು ನಿರುಪಮ್ ನಾನಾವತಿ ಅವರ ವಾದವನ್ನು ಆಲಿಸಿದ ನ್ಯಾ. ಹಸ್ಮುಖ್ ಸುತಾರ್ ಅವರು ಆದೇಶ ಕಾಯ್ದಿರಿಸಿದರು.

ಪ್ರಧಾನಿ ಮೋದಿ ಅವರ ಪದವಿ ಬಹಿರಂಗಪಡಿಸದ ಕಾರಣ ಇಬ್ಬರು ರಾಜಕಾರಣಿಗಳು ತನ್ನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಗುಜರಾತ್ ವಿಶ್ವವಿದ್ಯಾಲಯ ಕೇಜ್ರಿವಾಲ್ ಮತ್ತು ಸಿಂಗ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು.

ಕೇಜ್ರಿವಾಲ್ ಮತ್ತು ಸಿಂಗ್ ಇಬ್ಬರ ಪರವಾಗಿ ಹಾಜರಾದ ರೆಬೆಕಾ ಅವರು, ಮಾನಹಾನಿಕರ ಎನ್ನಲಾಗಿರುವ ಹೇಳಿಕೆಯನ್ನು ಬೇರೊಬ್ಬರ ವಿರುದ್ಧ ನೀಡಿರುವುದರಿಂದ ವಿಶ್ವವಿದ್ಯಾಲಯ ಆರೋಪಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.

"ಹೇಳಿಕೆಗಳು ವಿಶ್ವವಿದ್ಯಾಲಯದ ವಿರುದ್ಧವಲ್ಲ ಮತ್ತು ಮಾನಹಾನಿಕರವೂ ಅಲ್ಲ. ಅದು ಬೇರೊಬ್ಬರ ವಿರುದ್ಧ ಇದೆ. ವಿಶ್ವವಿದ್ಯಾಲಯ ನಕಲಿ ಅಥವಾ ಖೊಟ್ಟಿ ಪದವಿ ನೀಡಿದೆ ಎಂದು ತಾನು ಹೇಳಿಕೆ ನೀಡಿಲ್ಲ. ಗುರಿಯಾಗಿಸಿಕೊಂಡಿದ್ದ ಪ್ರೇಕ್ಷಕರು ಇನ್ನಾರೋ ಆಗಿದ್ದಾರೆ. ಇದು ಕಾನೂನು ಪ್ರಕ್ರಿಯೆಯಾಗಿರುವುದರಿಂದ ತಾನು ಸರಿ- ತಪ್ಪು ನೈತಿಕ- ಅನೈತಿಕ ವಿಚಾರಕ್ಕೆ ಹೋಗುವುದಿಲ್ಲ" ಎಂದು ಜಾನ್ ವಾದಿಸಿದರು. 

ವಿಶ್ವವಿದ್ಯಾಲಯ ನಕಲಿ ಪದವಿ ನೀಡಿದೆ ಎಂದು ಆರೋಪಿಗಳು ಎಲ್ಲಿಯೂ ಹೇಳಿಲ್ಲ ವಿಶ್ವವಿದ್ಯಾಲಯವನ್ನು ದೂಷಿಸುವ ಯಾವುದೇ ಉದ್ದೇಶವಿರಲಿಲ್ಲ ಎಂದು ಜಾನ್ ಒತ್ತಿಹೇಳಿದರು.

ವಿಶ್ವವಿದ್ಯಾಲಯ ನೀಡಿದ ದೂರನ್ನು ಸುಮ್ಮನೆ ಓದಿದರೂ ಸಾಕು ಐಪಿಸಿ, ಸೆಕ್ಷನ್ 499 (ಮಾನಹಾನಿ) ಮತ್ತು 500 (ಮಾನನಷ್ಟಕ್ಕೆ ಶಿಕ್ಷೆ) ಅಡಿ ಸಮರ್ಥಿಸಬಹುದಾದಂತಹ ಯಾವುದೇ ಆರೋಪ ಕಂಡುಬರುವುದಿಲ್ಲ ಎಂದರು.

ರೆಬೆಕಾ ಅವರ ವಾದಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ವಿಶ್ವವಿದ್ಯಾಲಯ ಪರ ವಕೀಲ ನಾನಾವತಿ, ಈ ಪ್ರಕರಣದಲ್ಲಿ ಮನವಿಯನ್ನು ಈಗಾಗಲೇ ದಾಖಲಿಸಲಾಗಿದ್ದು ಸಿಂಗ್ ಮತ್ತು ಕೇಜ್ರಿವಾಲ್ ಇಬ್ಬರೂ ಈಗಾಗಲೇ ತಾವು ತಪ್ಪಿತಸ್ಥರಲ್ಲ ಎಂದು ಹೇಳಿದ್ದಾರೆ. ಹಾಗಾಗಿ, ಈಗಿನ ಮೇಲ್ಮನವಿ ನಿಷ್ಪ್ರಯೋಜಕ ಎಂದು ಹೇಳಿದರು.

"ಅವರು ಅಪರಾಧಿ ಎಂದು ನಾನು ಈಗಲೇ ಹೇಳುವುದಿಲ್ಲ. ಅವರು ವಿಚಾರಣೆ ಎದುರಿಸಲಿ ಎಂದು ಹೇಳುತ್ತಿರುವೆ. ಅಪರಾಧ ಎಸಗಲಾಗಿದೆಯೇ ಎಂದು ವಿಚಾರಣಾ ನ್ಯಾಯಾಲಯ ನಿರ್ಧರಿಸಲಿ. ಆದರೆ ಇದರ ನಡುವೆ ಕಾನೂನು ಪ್ರಕ್ರಿಯೆ ತಡೆಯಲು ಬಯಸುವಿರಾದರೆ, ನಿಮ್ಮ ಪರವಾಗಿ ಗುರುತರ ಸಾಕ್ಷ್ಯಗಳು ಇರಬೇಕಾಗುತ್ತದೆ" ಎಂದು ನಾನಾವತಿ ವಿವರಿಸಿದರು.

ಇದಲ್ಲದೆ, ಸೆಕ್ಷನ್ 499 ರಲ್ಲಿ "ಇತರರ ಕಣ್ಣಿನಲ್ಲಿ ಖ್ಯಾತಿಗೆ ಕುಂದು ತರುವುದು" ಎಂಬ ಪದ ವಿಶ್ವವಿದ್ಯಾಲಯದ ಖ್ಯಾತಿಯನ್ನು ಕಡಿಮೆ ಮಾಡಲಾಗಿದೆ ಎಂದು ಭಾವಿಸುವವರು ಯಾರೋ ಅನ್ಯರಿರಬೇಕು ಎಂದರ್ಥವಲ್ಲ ಎಂದು ನಾನಾವತಿ ವಾದಿಸಿದರು.

ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಸುತಾರ್, ಅಂತಹ ಪರಿಸ್ಥಿತಿಯಲ್ಲಿ, ಅನ್ಯರ ಅಂದಾಜಿನಲ್ಲಿ ಖ್ಯಾತಿಗೆ ಕಳಂಕ ತಂದಿರಬೇಕು ಎನ್ನುವುದು ಸಾಮಾನ್ಯ ಜನರನ್ನು ಉದ್ದೇಶಿಸುತ್ತದೆ ಎಂದು ಗಮನ ಸೆಳೆದರು. ಬಳಿಕ ನ್ಯಾಯಮೂರ್ತಿಗಳು ವಾದ ಆಲಿಸುವಿಕೆ ಪ್ರಕ್ರಿಯೆ ಅಂತ್ಯಗೊಳಿಸಿದರು. ಫೆಬ್ರವರಿ 16ರಂದು ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.