ಸುದ್ದಿಗಳು

ಗಣನೀಯ ಆದಾಯ ತರದ ಕಾರಣಕ್ಕೆ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೊಲ್, ಡೀಸೆಲ್ ಸೇರಿಸಿಲ್ಲ: ಹೈಕೋರ್ಟ್‌ಗೆ ಕೇಂದ್ರದ ಮಾಹಿತಿ

"ವಿತ್ತೀಯ ನೀತಿ ಎಂಬುದು ಹಲವು ಅಂಶಗಳನ್ನು ಒಳಗೊಳ್ಳುವಂತಹದ್ದಾಗಿದ್ದು ಇದು ತೆರಿಗೆ ಹೊರೆ ಹೊರುವ ಅಥವಾ ಅದರಿಂದ ಅನಾನುಕೂಲ ಅನುಭವಿಸುವ ವ್ಯಕ್ತಿಗಳ ಕಷ್ಟದಿಂದ ನಿರ್ಬಂಧಿತವಾಗಿರುವುದಿಲ್ಲ" ಎಂದು ಕೇರಳ ಹೈಕೋರ್ಟ್‌ಗೆ ಕೇಂದ್ರ ತಿಳಿಸಿದೆ.

Bar & Bench

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸೇರಿಸದಿರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮತ್ತು ಸರಕು ಮತ್ತು ಸೇವಾ ತೆರಿಗೆ ಸಮಿತಿಯು ಕೇರಳ ಹೈಕೋರ್ಟ್‌ ಮುಂದೆ ಸಮರ್ಥಿಸಿಕೊಂಡಿವೆ. ಈ ಉತ್ಪನ್ನಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಗಮನಾರ್ಹ ಆದಾಯವನ್ನು ನೀಡುವುದರಿಂದ ಇದು ಪ್ರಜ್ಞಾಪೂರ್ವಕ ನಿರ್ಧಾರ ಎಂದು ಅಫಿಡವಿಟ್‌ ಸಲ್ಲಿಸಲಾಗಿದೆ.

ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡುವ ನಿರ್ಧಾರಕ್ಕೆ ʼನೈಜ ಕಾರಣʼ ನೀಡುವಂತೆ ಈ ಹಿಂದೆ ಕೇರಳ ಹೈಕೋರ್ಟ್ ನಿರ್ದೇಶಿಸಿತ್ತು. ಪರಿಣಾಮ ನ್ಯಾಯಾಲಯಕ್ಕೆ ಕೇಂದ್ರ ಮತ್ತು ಜಿಎಸ್‌ಟಿ ಮಂಡಳಿ ಪರವಾಗಿ ಈ ಪ್ರತಿಕ್ರಿಯೆ ಅಫಿಡವಿಟ್‌ ಸಲ್ಲಿಸಲಾಗಿದೆ.

ಕೋವಿಡ್‌ನಿಂದ ಉಂಟಾದ ಅಡೆತಡೆಗಳಿಂದ ಆರ್ಥಿಕತೆಯು ಚೇತರಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳು ಎಲ್ಲಾ ಕ್ಷೇತ್ರಗಳಲ್ಲಿ ಉತ್ತೇಜನ ಹೆಚ್ಚಿಸಿವೆ ಎಂದು ಸೂಚಿಸುವ ಮೂಲಕ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. “ಬಿಕ್ಕಟ್ಟಿನ ನಂತರದ ಆದಾಯ ಉತ್ಪಾದನೆಯು ಸವಾಲಿನ ಕೆಲಸವಾಗಿರುವುದರಿಂದ, "ಸಾರ್ವಜನಿಕ ಹಿತಾಸಕ್ತಿಯಲ್ಲಿ ಕೈಗೊಂಡ ಸಾಮಾಜಿಕ-ಆರ್ಥಿಕ ಉಪಕ್ರಮಗಳು ಪ್ರತಿಕೂಲ ಪರಿಣಾಮ ಬೀರದಂತೆ ಖಚಿತಪಡಿಸಿಕೊಳ್ಳಲು ತೆರಿಗೆ ಆದಾಯದ ಅಗತ್ಯವಿದೆ" ಎಂದು ಪೆಟ್ರೋಲ್‌ ಮತ್ತು ಡೀಸೆಲ್‌ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರದೆ ಇರುವ ನಿರ್ಧಾರದ ಹಿಂದಿನ ತರ್ಕವನ್ನು ಅಫಿಡವಿಟ್‌ನಲ್ಲಿ ಮಂಡಿಸಲಾಗಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಪ್ರತಿಕ್ರಿಯೆಯಾಗಿ ಕೇಂದ್ರೀಯ ಜಿಎಸ್‌ಟಿ ಮಂಡಳಿಯ ಹಿರಿಯ ಸ್ಥಾಯಿ ವಕೀಲ ಪಿ ಆರ್ ಶ್ರೀಜಿತ್ ಅವರು ಅಫಿಡವಿಟ್ ಸಲ್ಲಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಯಲ್ಲಿ ಸೇರಿಸುವುದು ಸೂಕ್ತವಲ್ಲ ಎಂದು ಜಿಎಸ್‌ಟಿ ಮಂಡಳಿ ತನ್ನ 45ನೇ ಸಭೆಯಲ್ಲಿ ಪರಿಣಿಸಿದ್ದನ್ನು ಪ್ರಶ್ನಿಸಿ ಅರ್ಜಿದಾರ ವಕೀಲ ಅರುಣ್ಬಿ ವರ್ಗೀಸ್ ತೀವ್ರವಾಗಿ ವಿರೋಧಿಸಿದ್ದರು.