Renukaswamy 
ಸುದ್ದಿಗಳು

ಮಾಫಿ ಸಾಕ್ಷಿಯಾಗುವ ಅರ್ಜಿಯನ್ನು ಪ್ರದೋಷ್‌ ಸ್ವಯಂಪ್ರೇರಿತವಾಗಿ ಸಲ್ಲಿಸಿದ್ದಾನೆಯೇ? ಸಹಿ ಬಯಸಿದ ಸತ್ರ ನ್ಯಾಯಾಲಯ

ಅರ್ಜಿಯಲ್ಲಿರುವ ಅಂಶಗಳನ್ನು ಪ್ರದೋಷ್‌ ತಿಳಿದಿದ್ದಾನೆಯೇ ಮತ್ತು ಆತನ ಸ್ವಯಂ ಪ್ರೇರಿತವಾಗಿ ಈ ಅರ್ಜಿ ಸಲ್ಲಿಸಿದ್ದಾನೆಯೇ ಎಂಬುದನ್ನು ನ್ಯಾಯಾಲಯ ಖಚಿತಪಡಿಸಿಕೊಳ್ಳಬೇಕಿದೆ.

Bar & Bench

ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕ್ಷಮಾಪಣೆ ನೀಡಲು ಮತ್ತು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಕೋರಿ 14ನೇ ಆರೋಪಿ ಪ್ರದೋಷ್‌ ರಾವ್ ಸ್ವಯಂಪ್ರೇರಿತವಾಗಿ ಅರ್ಜಿ ಸಲ್ಲಿಸಿದ್ದಾನೆಯೇ ಎಂಬುವುದನ್ನು ಖಾತರಿ ಪಡಿಸಿಕೊಳ್ಳಲು ಬಯಸಿರುವ ಬೆಂಗಳೂರಿನ 59ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಅರ್ಜಿಯನ್ನು ಜೈಲಿನಲ್ಲಿರುವ ಪ್ರದೋಷ್‌ಗೆ ತಲುಪಿಸುವಂತೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ಸೋಮವಾರ ಮುಂದುವರಿಸಿದ ನ್ಯಾಯಾಧೀಶೆ ಸುಜಾತಾ ಎಂ. ಸಾಂಬ್ರಾಣಿ ಅವರು ಈ ಆದೇಶ ಮಾಡಿದ್ದಾರೆ.

Sujata Madiwalappa Sambrani

ಪ್ರದೋಷ್‌ ಅರ್ಜಿ ಗಂಭೀರತೆಯಿಂದ ಕೂಡಿದೆ. ಈ ವಿಚಾರದಲ್ಲಿ ತೀವ್ರ ಎಚ್ಚರಿಕೆ ವಹಿಸಬೇಕಿದೆ. ಇದರಿಂದ ಅರ್ಜಿಯಲ್ಲಿರುವ ಅಂಶಗಳನ್ನು ಪ್ರದೋಷ್‌ ತಿಳಿದ್ದಾನೆಯೇ ಮತ್ತು ಆತನ ಸ್ವಯಂ ಪ್ರೇರಿತವಾಗಿ ಈ ಅರ್ಜಿ ಸಲ್ಲಿಸಿದ್ದಾನೆಯೇ ಎಂಬುದನ್ನು ನ್ಯಾಯಾಲಯ ಖಚಿತಪಡಿಸಿಕೊಳ್ಳಬೇಕಿದೆ. ಅದಕ್ಕಾಗಿ ಅರ್ಜಿಯನ್ನು ಜೈಲಿನಲ್ಲಿರುವ ಪ್ರದೋಷ್‌ಗೆ ಕಳುಹಿಸುವುದು ಸೂಕ್ತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ನಿಟ್ಟಿನಲ್ಲಿ ಅರ್ಜಿಯನ್ನು ಜೈಲು ಅಧಿಕಾರಿಗಳು ಪ್ರದೋಷ್‌ಗೆ ಸೋಮವಾರವೇ ಒದಗಿಸಬೇಕು. ಆ ಅರ್ಜಿಯಲ್ಲಿರುವ ಅಂಶಗಳನ್ನು ಪ್ರದೋಷ್‌ ಓದಿ ತಿಳಿಯಬೇಕು. ಅರ್ಜಿಯಲ್ಲಿರುವ ಅರ್ಜಿಗಳು ತಿಳಿದಿದೆ ಮತ್ತು ಸ್ವಯಂಪ್ರೇರಿತವಾಗಿಯೇ ಸಲ್ಲಿಸಲಾಗಿದೆ ಎಂದಾದರೆ, ಪ್ರದೋಷ್‌ ಅರ್ಜಿಗೆ ಸಹಿ ಹಾಕಿ ಜೈಲು ಅಧಿಕಾರಿಗಳು, ಈ-ಮೇಲ್‌ ಮೂಲಕ ಕಳುಹಿಸಿಕೊಡಬೇಕು ಎಂದು ಕೋರ್ಟ್‌ ನಿರ್ದೇಶಿಸಿದೆ.

ಪ್ರಕರಣದ ಪ್ರಾಸಿಕ್ಯೂಷನ್‌ ಸಾಕ್ಷಿಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ತಮಗೆ ಅನುಮತಿ ನೀಡಬೇಕು ಎಂದು ಕೋರಿ ನಟ ದರ್ಶನ್‌ (ಎರಡನೇ ಆರೋಪಿ), ಆರ್ ನಾಗರಾಜು (11ನೇ ಆರೋಪಿ), ಜಗದೀಶ್‌ (6ನೇ ಆರೋಪಿ) ಮತ್ತು ಅನುಕುಮಾರ್‌ (7ನೇ ಆರೋಪಿ) ಸಲ್ಲಿಸಿದ್ದ ಅರ್ಜಿಗಳನ್ನು ಇದೇ ವೇಳೆ ನ್ಯಾಯಾಲಯ ತಿರಸ್ಕರಿಸಿದೆ.

ಹಾಗೆಯೇ, ಜೈಲಿನಲ್ಲಿರುವ ಆರೋಪಿಗಳಿಗೆ ತಮ್ಮ ವಕೀಲರೊಂದಿಗೆ ಸಂಪರ್ಕಿಸಲು ಹಾಗೂ ಸಮಾಲೋಚಿಸಲು ಸೂಕ್ತ ಅನಿರ್ಬಂಧಿತ ಅವಕಾಶ ಕಲ್ಪಿಸಬೇಕು. ಅದಕ್ಕಾಗಿ ಸಮಾಲೋಚನೆ ಅವಧಿ ಅಥವಾ ಸಂಖ್ಯೆ ವಿಚಾರವಾಗಿ ಯಾವುದೇ ನಿರ್ಬಂಧ ಹೇರಬಾರದು. ಆ ಮೂಲಕ ವಕೀಲರಿಗೆ ಅಗತ್ಯ ಸಲಹೆ, ಮಾಹಿತಿ ನೀಡಲು ಸಹಕಾರ ನೀಡಬೇಕು ಎಂದು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.

ವಿಡಿಯೋ ಕಾನ್ಫರೆನ್ಸ್ ವಿಚಾರಣಾ ಪ್ರಕ್ರಿಯೆ ಪೂರ್ವ ಮತ್ತು ನಂತರ ತಮ್ಮ ವಕೀಲರೊಂದಿಗೆ ಅಗತ್ಯವಿದ್ದಲ್ಲಿ ಏಕಾಂತವಾಗಿ ಸಮಾಲೋಚಿಸಲು ಜೈಲಿನಲ್ಲಿರುವ ಆರೋಪಿಗಳಿಗೆ ಅವಕಾಶ ಕಲ್ಪಿಸಬೇಕು. ವಿಡಿಯೋ ಕಾನ್ಫರೆನ್ಸ್ ಆರಂಭವಾದ ನಂತರ ಆರೋಪಿಗಳು ವಿಚಾರಣಾ ಪ್ರಕ್ರಿಯೆ ಸಮರ್ಪಕವಾಗಿ ನೋಡಲು ಮತ್ತು ಕೇಳಲು ಅವಕಾಶವಿರಬೇಕು. ಆಡಿಯೋ ಅಥವಾ ವಿಡಿಯೋ ಪ್ರಸರಣದಲ್ಲಿ ಯಾವುದಾದರೂ ಅಡತಡೆ ಉಂಟಾದರೆ, ಆರೋಪಿಗಳು ಕೂಡಲೇ ಆ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ನಿರ್ದೇಶಿಸಿದೆ.

ಇನ್ನೂ ವಿಡಿಯೋ ಕಾನ್ಫರೆನ್ಸ್‌ ವ್ಯವಸ್ಥೆ ಸೂಕ್ತ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಸಮರ್ಥ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸುವಂತೆ ಸಿಟಿ ಸಿವಿಲ್‌ ಕೋರ್ಟ್‌ ರಿಜಿಸ್ಟ್ರಿಗೆ ನ್ಯಾಯಾಲಯ ಸೂಚಿಸಿದೆ.

ಇದಕ್ಕೂ ಮುನ್ನ, ಪ್ರಕರಣದ ವಿಚಾರಣೆ ವೇಳೆ ಪ್ರದೋಷ್‌ ಪರ ವಕೀಲರು, ಮಾಫಿ ಸಾಕ್ಷಿಯಾಗಿ ಕೋರಿ ಪ್ರದೋಷ್‌ ಅರ್ಜಿ ಸಲ್ಲಿಸಿದ್ಧಾರೆ. ಅದನ್ನು ವಿಚಾರಣೆಗೆ ಪರಿಗಣಿಸುವ ಮುನ್ನ ಸ್ವಯಂಪ್ರೇರಿತವಾಗಿ ಅರ್ಜಿ ಸಲ್ಲಿಸಲಾಗಿದೆಯೇ ಎಂಬ ಬಗ್ಗೆ ಪ್ರದೋಷ್‌ ಅನ್ನು ನ್ಯಾಯಾಲಯ ಪ್ರಶ್ನೆ ಮಾಡಬಹುದು ಎಂದರು.

ಈ ಮನವಿ ಮೇರೆಗೆ ಮಾಫಿ ಸಾಕ್ಷಿಯನ್ನಾಗಿಸಲು ಕೋರಿ ಅರ್ಜಿ ಸಲ್ಲಿಸಿರುವ ಮತ್ತು ಅರ್ಜಿಯಲ್ಲಿರುವ ಅಂಶಗಳ ಬಗ್ಗೆ ಮಾಹಿತಿ ಇದೆಯೇ ಎಂದು ಜೈಲಿನಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದ ಪ್ರದೋಷ್‌ಗೆ ನ್ಯಾಯಾಲಯ ಕೇಳಿತು. ಪ್ರದೋಷ್‌ ಉತ್ತರಿಸಿ, ತಮ್ಮ ವಕೀಲರು ಅರ್ಜಿ ಸಲ್ಲಿಸಿರುವ ಮತ್ತು ಅದರಲ್ಲಿರುವ ವಿಚಾರಗಳ ಬಗ್ಗೆ ನನಗೆ ತಿಳಿದಿದೆ ಎಂದು ಉತ್ತರಿಸಿದರು.

ನಂತರ ಪ್ರದೋಷ್‌ ಅರ್ಜಿ ಮತ್ತು ಪ್ರಕರಣದ 12ನೇ ಆರೋಪಿಯ ಎಂ.ಲಕ್ಷ್ಮಣ್‌ ಜಾಮೀನು ಅರ್ಜಿ ಕುರಿತು ಮಂಗಳವಾರ (ಆ.18) ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. ಮಂಗಳವಾರ ದರ್ಶನ್‌ ಪವಿತ್ರಾ ಗೌಡ, ಪ್ರದೋಷ್‌ ಸೇರಿದಂತೆ ಜೈಲಿನಲ್ಲಿರುವ ಒಟ್ಟು ಏಳು ಆರೋಪಿಗಳನ್ನು ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರುಪಡಿಸುವಂತೆ ಜೈಲಾಧಿಕಾರಿಗಳಿಗೆ ಸೂಚಿಸಿದೆ.

ಪ್ರಕರಣದ ಮೊದಲನೆ ಆರೋಪಿ ಪವಿತ್ರಾ ಗೌಡ ಪರ ವಕೀಲರು, ತಮ್ಮ ಕಕ್ಷಿದಾರರಿಗೆ ಅನಾರೋಗ್ಯ ಕಾಡುತ್ತಿದೆ. ಅವರಿಗೆ ಜೈಲಿನಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಕಲ್ಪಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿದರು. ಅದಕ್ಕೆ ನ್ಯಾಯಾಲಯ, ಪವಿತ್ರಾಗೆ ಜೈಲು ಕೈಪಿಡಿಯ ಅನುಸಾರ ಎಲ್ಲಾ ಅಗತ್ಯ ವೈದ್ಯಕೀಯ ಚಿಕಿತ್ಸೆ/ನೆರವು ಕಲ್ಪಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಿದೆ.