Bombay High Court
Bombay High Court 
ಸುದ್ದಿಗಳು

ಹುಲಿಗಳು ಸಮೀಪವೇ ಸುಳಿದಾಡುತ್ತಿರುವಾಗಲೂ ನ್ಯಾಯಾಂಗ ಅಧಿಕಾರಿಗಳು ಪ್ರಕರಣ ಆಲಿಸುತ್ತಾರೆ: ಬಾಂಬೆ ಹೈಕೋರ್ಟ್

Bar & Bench

ದೂರದ ಪ್ರದೇಶಗಳಲ್ಲಿ ಕೆಲಸ ಮಾಡುವ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು ಎದುರಿಸುತ್ತಿರುವ ತೊಂದರೆಗಳನ್ನು ಬಾಂಬೆ ಹೈಕೋರ್ಟ್‌ ಶುಕ್ರವಾರ ಸಂಕ್ಷಿಪ್ತವಾಗಿ ಉಲ್ಲೇಖಿಸಿತು.

ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಕುರಿತಾದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯವು "ಹುಲಿಗಳು ಓಡಾಡುವ ಜಾಗಗಳ ಸಮೀಪವೇ ಕೆಲ ನ್ಯಾಯಾಂಗ ಅಧಿಕಾರಿಗಳು ನ್ಯಾಯಾಲಯ ಕಲಾಪಗಳನ್ನು ನಡೆಸಬೇಕಾಗುತ್ತದೆ" ಎಂದು ಪೀಠ ಅಭಿಪ್ರಾಯಪಟ್ಟಿತು.

ಇದೇ ವೇಳೆ ರಾಜ್ಯದ ದೂರದ ಪ್ರದೇಶಗಳಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ 3 ತಿಂಗಳೊಳಗೆ ಸೂಕ್ತ ಮೊಬೈಲ್ ಫೋನ್‌ ಒದಗಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ಶುಕ್ರವಾರ ನಿರ್ದೇಶನ ನೀಡಿತು. ದೇಶದ ಅಂಗನವಾಡಿ ಕೇಂದ್ರಗಳ ಕಾರ್ಯಚಟುವಟಿಕೆಗಳನ್ನು ಗಮನಿಸುವ  ಕೇಂದ್ರ ಸರ್ಕಾರದ ʼಪೋಷಣ್‌ʼ ಟ್ರ್ಯಾಕರ್ ಆ್ಯಪ್‌ನಲ್ಲಿ ಮಾಹಿತಿಯನ್ನು ನಮೂದಿಸಲು ಇದರಿಂದ ಸಹಾಯವಾಗಲಿದೆ.

ಆದಾಗ್ಯೂ, ಮಹಾರಾಷ್ಟ್ರದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ, ಅದರಲ್ಲಿಯೂ (ದಟ್ಟಕಾಡು ಹಾಸುಹೊಕ್ಕಾಗಿರುವ) ಗಡ್ಚಿರೋಲಿಯಂತಹ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್‌ ತಲುಪಿಸುವುದು ಕಷ್ಟವಾಗುತ್ತದೆ ಎಂದು ಹಿರಿಯ ವಕೀಲೆ ಗಾಯತ್ರಿ ಸಿಂಗ್ ಆತಂಕ ವ್ಯಕ್ತಪಡಿಸಿದರು.

ಅಂತಹ ಪ್ರದೇಶಗಳನ್ನು ತಲುಪುವುದು ಕಷ್ಟ ಎಂದು ಒಪ್ಪಿಕೊಂಡ ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ಗೌರಿ ಗೋಡ್ಸೆ ಅವರಿದ್ದ ವಿಭಾಗೀಯ ಪೀಠ “ರಾಜ್ಯ ಸರ್ಕಾರ ಫೋನ್‌ಗಳನ್ನು ಶೀಘ್ರ ವಿತರಿಸುವಂತೆ ನೋಡಿಕೊಳ್ಳಬೇಕು” ಎಂದು ತಾಕೀತು ಮಾಡಿತು. ಈ ಹಂತದಲ್ಲಿ ಅದು "ನಮ್ಮ ಕೆಲವು ನ್ಯಾಯಾಂಗ ಅಧಿಕಾರಿಗಳು ಕೂಡ ಹುಲಿಗಳು ಇರುವೆಡೆ ನ್ಯಾಯಾಲಯ ಕಲಾಪಗಳನ್ನು ನಡೆಸುತ್ತಾರೆ" ಎಂದು ತಿಳಿಸಿತು.

ಆ್ಯಪ್‌ಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಕ್ರಮ ಕೈಗೊಂಡಿದ್ದ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಅಂಗನವಾಡಿ ಕಾರ್ಯಕರ್ತೆಯರು ನ್ಯಾಯಾಲಯದ ಮೆಟ್ಟಿಲೇರಿದ್ದರು. ತಮಗೆ ಹಳೆಯ ಮತ್ತು ಕಾರ್ಯನಿರ್ವಹಿಸದ ಮೊಬೈಲ್‌ ಫೋನ್‌ಗಳನ್ನು ನೀಡಿರುವುದರಿಂದ ಮಾಹಿತಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದರು.