Justice DY Chandrachud
Justice DY Chandrachud  
ಸುದ್ದಿಗಳು

ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಭೌತಿಕ ಪ್ರತಿ ಸಲ್ಲಿಸುವಿಕೆ ವಿರುದ್ಧವಾಗಿದೆ: ನ್ಯಾ. ಡಿ ವೈ ಚಂದ್ರಚೂಡ್

Bar & Bench

ಇ- ಫೈಲಿಂಗ್‌ ಮೂಲಕ ಸಾಧಿಸಲು ಹೊರಟಿರುವ ನ್ಯಾಯಾಲಯದ ದಾಖಲೆಗಳ ಡಿಜಿಟಲೀಕರಣದ ಪ್ರಾಮುಖ್ಯತೆಯನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಶುಕ್ರವಾರ ಒತ್ತಿ ಹೇಳಿದರು.

ವಕೀಲರು ಭೌತಿಕ ಪ್ರತಿಗಳನ್ನು (ಹಾರ್ಡ್ ಕಾಪಿ) ಬಳಸಿ ಪ್ರಕರಣ ದಾಖಲಿಸಿದರೆ ನಂತರ ಅದನ್ನು ನ್ಯಾಯಾಲಯದ ಸಿಬ್ಬಂದಿ ಡಿಜಿಟಲೀಕರಣಗೊಳಿಸಬೇಕಿರುವುದರಿಂದ ಡಿಜಿಟಲೀಕರಣಕದ ಆಶಯವೇ ನಷ್ಟವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಇ-ಸಮಿತಿಯ ಅಧ್ಯಕ್ಷರೂ ಆಗಿರುವ ನ್ಯಾ. ಚಂದ್ರಚೂಡ್ ಅವರು ಹೇಳಿದರು.

"ಇದು ಇಂಗಾಲದ ಹೆಜ್ಜೆಗುರುತನ್ನು (ಹೊರಸೂಸುವಿಕೆ) ಕಡಿಮೆ ಮಾಡುವ ನಮ್ಮ ಗುರಿಗೆ ವಿರುದ್ಧವಾಗಿದೆ" ಎಂದು ಅವರು ಹೇಳಿದರು.

ನ್ಯಾಯಮೂರ್ತಿಗಳು ಒಡಿಶಾ ಹೈಕೋರ್ಟ್‌ನ “ರೆಕಾರ್ಡ್ ರೂಮ್ ಡಿಜಿಟಲೈಸೇಶನ್ ಸೆಂಟರ್”ಗೆ ಒಂದು ವರ್ಷವಾದ ಸಂದರ್ಭದ ಸಮಾರಂಭವನ್ನು ವೀಕ್ಷಿಸಿ ಮಾತನಾಡಿದರು. ಸುಪ್ರೀಂ ಕೋರ್ಟ್ ಇ-ಸಮಿತಿಯ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಒಡಿಶಾ ಹೈಕೋರ್ಟ್ ನಿಜಕ್ಕೂ ಮುಂಚೂಣಿಯಲ್ಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.

“ನನಗೆ ಈ ಒಂದು ವರ್ಷದ ಆಚರಣೆಯು ನ್ಯಾಯಾಲಯಗಳಲ್ಲಿ ಡಿಜಿಟಲೀಕರಣವನ್ನು ಸಾಂಸ್ಥಿಕಗೊಳಿಸುವ ನಿಟ್ಟಿನಲ್ಲಿನ ನಿರಂತರ ಪ್ರಯತ್ನ, ಕಠಿಣ ಪರಿಶ್ರಮದ ಕಾಲವಾಗಿ ತೋರುತ್ತದೆ” ಎಂದು ಅವರು ಹೇಳಿದರು.

ಸುಸ್ಥಿರವಾಗಿ ಮತ್ತು ನಿರಂತರವಾಗಿ ಯೋಜನೆಯನ್ನು ಜಾರಿ ಮುಂದುವರೆಸುವುದು ನೀತಿ ರೂಪಿಸುವುದಕ್ಕಿಂತಲೂ ಮುಖ್ಯ ಎಂದು ಅವರು ತಿಳಿಸಿದರು. ನ್ಯಾಯಾಲಯಗಳ ಡಿಜಿಟಲೀಕರಣ ಸದಾ ನಿರಂತರ ಪ್ರಕ್ರಿಯೆ ಎಂದ ಅವರು ಭೌತಿಕ ಕಾಗದಗಳು, ದಾಖಲೆಗಳು ಅಥವಾ ಅರ್ಜಿಗಳಿಲ್ಲದ ಸಂಪೂರ್ಣ ಹಸಿರು ಪೀಠ ಸ್ಥಾಪಿಸಲು ನಿರ್ಧರಿಸಿದಾಗ ಕೆಲ ವಕೀಲರು ಮೂಗು ಮುರಿದಿದ್ದನ್ನು ಅವರು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು. ಈ ನಿಟ್ಟಿನಲ್ಲಿ ನಮಗೆ ಗೊತ್ತಿಲ್ಲದೇ ಇರುವುದನ್ನು ಕಲಿಯಲು, ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.