ಬಹುಭಾಷಾ ನಟಿಯ ಮೇಲೆ 2017ರಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ಕೇರಳ ಹೈಕೋರ್ಟ್ ಶುಕ್ರವಾರ ಅಪರಾಧ ತನಿಖಾ ದಳಕ್ಕೆ ಹೆಚ್ಚಿನ ಕಾಲಾವಕಾಶ ನೀಡಿದೆ. ಈ ಪ್ರಕರಣದಲ್ಲಿ ಮಲೆಯಾಳಂ ನಟ ದಿಲೀಪ್ ಪ್ರಮುಖ ಆರೋಪಿಯಾಗಿದ್ದಾರೆ.
ಪ್ರಾಸಿಕ್ಯೂಷನ್ ಮನವಿಯನ್ನು ಪುರಸ್ಕರಿಸಲಾಗಿದ್ದು, ತನಿಖೆ ಪೂರ್ಣಗೊಳಿಸಲು ಜುಲೈ 15ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ನ್ಯಾಯಮೂರ್ತಿ ಕೌಸರ್ ಎಡಪ್ಪಾಗಥ್ ಅವರ ನೇತೃತ್ವದ ಏಕಸದಸ್ಯ ಪೀಠ ಆದೇಶದಲ್ಲಿ ಹೇಳಿದೆ.
ತನಿಖೆಗೆ ಕಾಲಾವಕಾಶ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್, ದಿಲೀಪ್ ಮತ್ತು ಸಂತ್ರಸ್ತ ನಟಿಯ ವಾದವನ್ನು ಬುಧವಾರ ಆಲಿಸಿದ್ದ ನ್ಯಾಯಾಲಯವು ತೀರ್ಪು ಕಾಯ್ದಿರಿಸಿತ್ತು.
ದಿಲೀಪ್ ಅನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಬಿ ರಮಣ್ ಪಿಳ್ಳೈ ಅವರು ವಾದಿಸಿ, ಸಂತ್ರಸ್ತೆಯ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಅಕ್ರಮವಾಗಿ ಪಡೆದುಕೊಳ್ಳಲಾಗಿದೆ ಎನ್ನುವ ಪ್ರಾಸಿಕ್ಯೂಷನ್ ವಾದವು ತನಿಖೆಯನ್ನು ವಿಳಂಬಿಸುವ ಮತ್ತೊಂದು ಪ್ರಯತ್ನವಾಗಿದ್ದು ನ್ಯಾಯಾಂಗಕ್ಕೆ ಕಳಂಕ ಹಚ್ಚುವ ಯತ್ನ ಎಂದರು. "ವಿಡಿಯೋವನ್ನು ಮಾಧ್ಯಮದಲ್ಲಿ ಪಸರಿಸಲಾಗಿದೆ. ಆ ಮೂಲಕ ನ್ಯಾಯಾಂಗಕ್ಕೆ ಕಳಂಕ ಹೆಚ್ಚುವ ಕೆಲಸವನ್ನು ಅವರು (ಪ್ರಾಸಿಕ್ಯೂಷನ್) ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
ಈ ಬಗೆಯ (ವಿಡಿಯೋ ಸೋರಿಕೆ) ಅರೋಪದ ತನಿಖೆ ನಡೆಸಲು ರಾಜ್ಯ ಪೊಲೀಸರು ಸಮರ್ಥರಲ್ಲ ಬದಲಿಗೆ ಅದನ್ನು ಹೈಕೋರ್ಟ್ ವಿಚಕ್ಷಣಾ ದಳ ನಡೆಸಬೇಕು ಎಂದು ಆಗ್ರಹಿಸಿದರು.
ಇದನ್ನು ತೀವ್ರವಾಗಿ ವಿರೋಧಿಸಿದ ಪ್ರಾಸಿಕ್ಯೂಷನ್ ಮಹಾ ನಿರ್ದೇಶಕ ಟಿ ಎ ಶಾಜಿ ಅವರು ತಮ್ಮ ಬದಿಯಿಂದ ನ್ಯಾಯಾಂಗಕ್ಕೆ ಕಳಂಕ ಹಚ್ಚುವ ಯತ್ನವಾಗಿದೆ ಎನ್ನುವ ಆರೋಪವನ್ನು ಅಲ್ಲಗಳೆದರು.