ಸುದ್ದಿಗಳು

ತನಿಖಾಧಿಕಾರಿ ಕೊಲೆ ಸಂಚು ಪ್ರಕರಣ: ನಟ ದಿಲೀಪ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಕೇರಳ ಹೈಕೋರ್ಟ್

Bar & Bench

ಬಹುಭಾಷಾ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಪೊಲೀಸ್‌ ಅಧಿಕಾರಿಗಳ ಕೊಲೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್‌ಗೆ ಕೇರಳ ಹೈಕೋರ್ಟ್‌ ಸೋಮವಾರ ನಿರೀಕ್ಷಣಾ ಜಾಮೀನು ನೀಡಿದೆ.

“ತನಿಖೆಗೆ ಅಸಹಕಾರ ನೀಡಬಹುದು ಎಂಬ ಕುರಿತಾದ ನಿಮ್ಮ (ಪ್ರಾಸಿಕ್ಯೂಷನ್) ಆತಂಕವನ್ನು ಷರತ್ತುಗಳನ್ನು ವಿಧಿಸುವ ಮೂಲಕ ಪರಿಹರಿಸಬಹುದು ಎಂದು ನಾನು ಈಗಾಗಲೇ ಹೇಳಿದ್ದೇನೆ. ಷರತ್ತುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ನೀವು (ಪ್ರಾಸಿಕ್ಯೂಷನ್) ಯಾವುದೇ ಸಮಯದಲ್ಲಿ ಭಾವಿಸಿದರೆ, ಆರೋಪಿಯನ್ನು ಬಂಧಿಸಲು ಅರ್ಜಿ ಸಲ್ಲಿಸಬಹುದು” ಎಂದು ನ್ಯಾ. ಪಿ ಗೋಪಿನಾಥ್‌ ಅವರಿದ್ದ ಏಕಸದಸ್ಯ ಪೀಠ ಆದೇಶ ನೀಡುವ ವೇಳೆ ತಿಳಿಸಿತು.

ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಎರ್ನಾಕುಲಂ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದಲ್ಲಿ (ಸಿಬಿಐ ವಿಶೇಷ ಸಂಖ್ಯೆ III) ದಿಲೀಪ್‌ ಮತ್ತು ಅವರ ಸಹಚರರು ಈಗಾಗಲೇ ವಿಚಾರಣೆ ಎದುರಿಸುತ್ತಿದ್ದಾರೆ.

ಪ್ರಕರಣದ 8ನೇ ಆರೋಪಿ ದಿಲೀಪ್ ಮತ್ತು 1ನೇ ಆರೋಪಿ ಪಲ್ಸರ್ ಸುನಿ ನಡುವಿನ ನಿಕಟ ಸಂಬಂಧವನ್ನು ಹೇಳುವ ಕೆಲವು ಆಡಿಯೋ ಕ್ಲಿಪ್‌ಗಳನ್ನು ಚಿತ್ರ ನಿರ್ದೇಶಕ ಬಾಲಚಂದ್ರ ಕುಮಾರ್ ಸಂದರ್ಶನ ನೀಡಿ ಬಿಡುಗಡೆ ಮಾಡಿದ್ದರು. ಅದರ ವಿಚಾರಣೆ ಮುಕ್ತಾಯದ ಹಂತದಲ್ಲಿದೆ. ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳನ್ನು ಕೊಲ್ಲಲು ಸಂಚು ರೂಪಿಸಿರುವುದನ್ನು ಆಡಿಯೊ ಮತ್ತು ಬಾಲಚಂದ್ರ ಅವರ ಹೇಳಿಕೆಗಳು ಬಹಿರಂಗಪಡಿಸಿವೆ.