ರೀಲ್ಸ್ ಬಳಸಿ ಪ್ರಚಾರದಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ವಕೀಲರ ಪರಿಷತ್‌ನಿಂದ ಶಿಸ್ತುಕ್ರಮದ ಕೆಂಗಣ್ಣಿಗೆ ಗುರಿಯಾಗಿರುವ ವಕೀಲ ವಿ ರವಿಕುಮಾರ್ ಅವರಿಗೆ ಪರಿಶೀಲನಾ ಸಮಿತಿ ಮಾಡಿರುವ ಶಿಫಾರಸ್ಸಿನ ಪ್ರತಿ ನೀಡುವಂತೆ ಹಾಗೂ ಅಗತ್ಯಬಿದ್ದಲ್ಲಿ ಅದರ ವಿರುದ್ಧ ವಾದ ಮಂಡಿಸಲು ಸೂಕ್ತ ಕಾಲಾವಕಾಶ ನೀಡುವಂತೆ ಕೆಎಸ್‌ಬಿಸಿ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.
ಇದೇ ವೇಳೆ, ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಅಧ್ಯಕ್ಷರು, ಸದಸ್ಯರು ಅಥವಾ ಪರಿಶೀಲನೆ/ಮಧ್ಯಸ್ಥಿಕೆ ಸಮಿತಿ ಸದಸ್ಯರ ವಿರುದ್ಧ ಯಾವುದೇ ಅಪಪ್ರಚಾರದಲ್ಲಿ ತೊಡಗಿರುವ ಆರೋಪಕ್ಕೆ ಆಸ್ಪದವೀಯದಂತೆ ವಕೀಲ ವಿ ರವಿಕುಮಾರ್ ನೋಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಶಿಸ್ತುಕ್ರಮಕ್ಕೆ ಸಂಬಂಧಿಸಿದಂತೆ 2025ರ ಡಿಸೆಂಬರ್ 6ರಂದು ಕೈಗೊಂಡಿರುವ ನಿರ್ಣಯ ಅಥವಾ ಅಮಾನತು ಆದೇಶ ಒದಗಿಸಲು ಕೆಎಸ್‌ಬಿಸಿಗೆ ನಿರ್ದೇಶಿಸುವಂತೆ ಮೈಸೂರಿನ ಸೂರ್ಯ ಲಾ ಚೇಂಬರ್‌ನ ವಕೀಲ ವಿ ರವಿಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠವು ವಿಲೇವಾರಿ ಮಾಡಿದೆ.
“ರವಿಕುಮಾರ್‌ಗೆ 30.12.2025ರಂದು ಆಕ್ಷೇಪಿಸಲಾದ ನೋಟಿಸ್ ನೀಡಲಾಗಿದ್ದು, ಪರಿಶೀಲನಾ ಸಮಿತಿಯ ಶಿಫಾರಸ್ಸನ್ನು ಆಧರಿಸಿ ಕೆಎಸ್‌ಬಿಸಿಯ ಮುಂದೆ 10.1.2026ರಂದು ಹಾಜರಾಗುವಂತೆ ಅವರಿಗೆ ಸೂಚಿಸಲಾಗಿತ್ತು. ಕೆಎಸ್‌ಬಿಸಿ ಪ್ರತಿನಿಧಿಸಿದ್ದ ವಕೀಲ ಎಸ್ ಜಿ ಚೈತನ್ಯ ಅವರು ಪರಿಶೀಲನಾ ಸಮಿತಿಯ ಶಿಫಾರಸ್ಸುಗಳನ್ನು ರವಿಕುಮಾರ್ ಅವರಿಗೆ ನೀಡಿಲ್ಲದೇ ಇರಬಹುದು ಎಂದು ಹೇಳಿದ್ದಾರೆ. ಸಮಿತಿಯ ಶಿಫಾರಸ್ಸಿನ ಅನ್ವಯ ರವಿಕುಮಾರ್ ಅವರು ತಮ್ಮ ವಿರುದ್ಧದ ಯಾವುದೇ ಸಭೆಯಲ್ಲಿ ಭಾಗವಹಿಸಬೇಕಾದರೆ, ಅದು ಅರ್ಥಪೂರ್ಣವಾಗಬೇಕಾದರೆ ಸಮಿತಿಯ ಶಿಫಾರಸ್ಸುಗಳನ್ನು ಅವರಿಗೆ ಒದಗಿಸಬೇಕು. ಇಲ್ಲವಾದಲ್ಲಿ ಸಭೆಯಲ್ಲಿ ಭಾಗವಹಿಸಲು ನೀಡುವ ಅವಕಾಶ ಖಾಲಿ ಔಪಚಾರಿಕತೆಯಾಗಲಿದೆ” ಎಂದು ನ್ಯಾಯಾಲಯ ಹೇಳಿದೆ.
ಈ ನೆಲೆಯಲ್ಲಿ “ಪರಿಶೀಲನಾ ಸಮಿತಿ ಮಾಡಿರುವ ಶಿಫಾರಸ್ಸಿನ ಪ್ರತಿ ಮತ್ತು ಅಗತ್ಯಬಿದ್ದಲ್ಲಿ ಅದರ ವಿರುದ್ಧ ತನ್ನ ವಾದ ಮಂಡಿಸಲು ಪ್ರಸ್ತಾಪಿತ ಸಭೆಯಲ್ಲಿ ಭಾಗವಹಿಸಲು ರವಿಕುಮಾರ್‌ಗೆ ಸೂಕ್ತ ಕಾಲಾವಕಾಶ ನೀಡಬೇಕು. ನ್ಯಾಯಾಲಯದ ಈ ಆದೇಶದ ಪ್ರಮಾಣೀಕೃತ ಪ್ರತಿ ದೊರೆತ ಒಂದು ವಾರದೊಳಗೆ ಅರ್ಜಿದಾರ ರವಿಕುಮಾರ್ ಅವರು ಕೆಎಸ್‌ಬಿಸಿಯ ನಿರ್ಣಯದ ಪ್ರತಿಯನ್ನು ಪಡೆಯಲು ಸಂಪರ್ಕಿಸುವ ಸ್ವಾತಂತ್ರ್ಯ ಹೊಂದಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.
“10.01.2026ರಂದು ನಿಗದಿಪಡಿಸಿದ್ದ ಸಭೆಯನ್ನು ಮುಂದೂಡಲಾಗಿದೆ. ಪರಿಶೀಲನಾ ಸಮಿತಿಯ ಶಿಫಾರಸ್ಸಿನ ಅನ್ವಯ ಸಭೆ ಆಯೋಜಿಸಿದ್ದ ಕೆಎಸ್‌ಬಿಸಿಯು ಹೊಸದಾಗಿ ಸಭೆ ಆಯೋಜಿಸಲು ಸ್ವಾತಂತ್ರ್ಯ ಹೊಂದಿದ್ದು, ಅದು ಮೇಲಿನ ಷರತ್ತಿಗೆ ಒಳಪಟ್ಟಿರುತ್ತದೆ” ಎಂದು ನ್ಯಾಯಾಲಯ ಆದೇಶಿಸಿದೆ.
ರವಿಕುಮಾರ್ ಪ್ರತಿನಿಧಿಸಿದ್ದ ವಕೀಲೆ ಸಂಧ್ಯಾ ಪ್ರಭು ಅವರು “ಜನವರಿ 10ನೇ ತಾರೀಕು ಬೆಳಿಗ್ಗೆ 11.30ಕ್ಕೆ ಕೆಎಸ್‌ಬಿಸಿ ಕಚೇರಿ ವ್ಯಾಪ್ತಿಯಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸಲು ರವಿಕುಮಾರ್‌ಗೆ ಸೂಚಿಸಲಾಗಿದ್ದು, ಸಭೆಯಲ್ಲಿ ಭಾಗವಹಿಸದಿದ್ದರೆ ಪರಿಶೀಲನಾ ಸಮಿತಿಯ ಶಿಫಾರಸ್ಸುಗಳಿಗೆ ಏಕಪಕ್ಷೀಯವಾಗಿ ಒಪ್ಪಿಗೆ ದೊರೆಯಲಿದೆ ಎಂದು ಹೇಳಲಾಗಿದೆ. ಆದರೆ, ಆರ್‌ಟಿಐ ಅಡಿ ಸಲ್ಲಿಸಿದ್ದ ಅರ್ಜಿಗೆ ಸಮಿತಿಯ ಶಿಫಾರಸ್ಸಿನ ಪ್ರತಿ ನೀಡಲಾಗಿಲ್ಲ” ಎಂದಿದ್ದರು.
ಮಧ್ಯಪ್ರವೇಶಕಾರರಾಗಿ ವಿಚಾರಣೆಯಲ್ಲಿ ಭಾಗಿಯಾಗಿದ್ದ ಹಿರಿಯ ವಕೀಲ ಎಸ್ ಬಸವರಾಜು ಅವರು “ಜಾಹೀರಾತಿಗೆ ಸಮನಾದ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮತ್ತು ವಿಡಿಯೊ ಕ್ಲಿಪ್ ಹಾಕುತ್ತಿದ್ದನ್ನು ಪರಿಶೀಲಿಸಲು ಕೆಎಸ್‌ಬಿಸಿಯು ಪರಿಶೀಲನಾ ಸಮಿತಿಯ ಅಧ್ಯಕ್ಷನನ್ನಾಗಿ ನನ್ನನ್ನು ನೇಮಿಸಿತ್ತು. ಹಲವು ವಕೀಲರು ಜಾಲತಾಣದಲ್ಲಿ ಹಾಕಿದ್ದ ರೀಲ್ಸ್ ಮತ್ತು ವಿಡಿಯೊಗಳನ್ನು ಹಿಂಪಡೆದಿದ್ದು, ಅರ್ಜಿದಾರರು ರೀಲ್ಸ್ ತೆಗೆದಿರಲಿಲ್ಲ. ಈ ಸಂಬಂಧ ಪರಿಶೀಲನಾ ಸಮಿತಿಯು ತನ್ನ ಶಿಫಾರಸ್ಸುಗಳನ್ನು ಕೆಎಸ್‌ಬಿಸಿಗೆ ಸಲ್ಲಿಸಿತ್ತು. ಹಲವು ಅವಕಾಶ ನೀಡಿದರೂ ರವಿಕುಮಾರ್ ಅವರು ಸಮಿತಿಯ ಮುಂದೆ ಹಾಜರಾಗಿರಲಿಲ್ಲ” ಎಂದಿದ್ದರು.
“ವಿಡಿಯೋ ಮತ್ತು ರೀಲ್ಸ್ ಮಾಡದಂತೆ ನಿರ್ಬಂಧಿಸುವ ನಿಟ್ಟಿನಲ್ಲಿ ಕೆಎಸ್‌ಬಿಸಿ ಪರಿಶೀಲನಾ ಸಮಿತಿ ಅಧ್ಯಕ್ಷನಾಗಿ ಕಠಿಣ ಕ್ರಮಕೈಗೊಂಡಿದ್ದಕ್ಕೆ ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ವ್ಯಾಪಕ ಅಪಪ್ರಚಾರ ಮಾಡಲಾಗುತ್ತಿದೆ” ಎಂದು ಬಸವರಾಜು ಆಕ್ಷೇಪಿಸಿದ್ದರು.
ಈ ಆರೋಪವನ್ನು ವಕೀಲೆ ಸಂಧ್ಯಾ ಪ್ರಭು ಅವರು ನಿರಾಕರಿಸಿದ್ದು, “ರವಿಕುಮಾರ್ ಅವರು ಸಮಿತಿಯ ಮುಂದೆ ಹಾಜರಾಗಿದ್ದರೂ ಶಿಫಾರಸ್ಸು ಮಾಡಲಾಗಿದೆ” ಎಂದು ವಾದಿಸಿದ್ದರು.