ಸುದ್ದಿಗಳು

ಶಾಸಕರಿಗೆ ಅನುದಾನ ಹಂಚಿಕೆ ತಾರತಮ್ಯ: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಎರಡು ವಾರಗಳ ಗಡುವು, ₹2,000 ದಂಡ

ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ನ್ಯಾಯಾಲಯದ ಆದೇಶವಿದ್ದರೂ ಸರ್ಕಾರ ಆಕ್ಷೇಪಣೆ ಸಲ್ಲಿಸಲು ಪದೇ ಪದೇ ಕಾಲಾವಕಾಶ ಕೋರುತ್ತಿರುವುದನ್ನು ಗಮನಿಸಲಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದಿರುವ ನ್ಯಾಯಾಲಯ.

Bar & Bench

ಪ್ರಸಕ್ತ ಸಾಲಿನಲ್ಲಿ ಆರ್ಥಿಕ ವರ್ಷದಲ್ಲಿ ಜಾರಿಗೆ ತರಲಾಗಿರುವ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (ಸಿಎಂಐಡಿಪಿ)ಯಡಿ ಶಾಸಕರಿಗೆ ಅನುದಾನ‌ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಳಂಬ ಮಾಡಿರುವ ರಾಜ್ಯ ಸರ್ಕಾರಕ್ಕೆ ಮಂಗಳವಾರ ಎರಡು ಸಾವಿರ ರೂಪಾಯಿ ದಂಡ ವಿಧಿಸಿರುವ ಕರ್ನಾಟಕ ಹೈಕೋರ್ಟ್, ಆಕ್ಷೇಪಣೆ ಸಲ್ಲಿಸಲು ಕೊನೆಯ ಅವಕಾಶವಾಗಿ ಸರ್ಕಾರಕ್ಕೆ ಎರಡು ವಾರ ಸಮಯ ಕೊಟ್ಟಿದೆ.

2025-26ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಲಾದ ಸಿಎಂಐಡಿಪಿ ಯೋಜನೆಯಡಿ ಆಡಳಿತ ಪಕ್ಷದ ಶಾಸಕರಿಗೆ 50 ಕೋಟಿ ರೂಪಾಯಿ ಹಾಗೂ ವಿರೋಧ ಪಕ್ಷದ ಶಾಸಕರಿಗೆ 25 ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡುವ ಮೂಲಕ ತಾರತಮ್ಯ ಮಾಡಲಾಗಿದೆ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರದ ಶಾಸಕ ಜಗದೀಶ್ ಶಿವಯ್ಯ ಗುಡಗುಂಟಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಕೆ ಎಸ್ ಭರತ್ ಕುಮಾರ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರು ಪುನಃ ಕಾಲಾವಕಾಶ ಕೋರಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠವು ಬಹುತೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ನ್ಯಾಯಾಲಯದ ಆದೇಶವಿದ್ದರೂ ಸರ್ಕಾರ ಆಕ್ಷೇಪಣೆ ಸಲ್ಲಿಸಲು ಪದೇ ಪದೇ ಕಾಲಾವಕಾಶ ಕೋರುತ್ತಿರುವುದನ್ನು ಗಮನಿಸಲಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಈ ಅರ್ಜಿಯಲ್ಲಿಯೂ 2025 ಅಕ್ಟೋಬರ್‌ 29ಕ್ಕೆ ಆದೇಶ ಮಾಡಲಾಗಿದೆ. 2026ರ ಫೆಬ್ರವರಿ 17ರಂದು ಆಕ್ಷೇಪಣೆ ಸಲ್ಲಿಸಲು ಕೊನೆ ಅವಕಾಶ ನೀಡಲಾಗಿತ್ತು. ಇದಾದ ಬಳಿಕ ಐದಾರು ಬಾರಿ ಅರ್ಜಿ ವಿಚಾರಣೆಗೆ ಬಂದಿದೆ. ಸರ್ಕಾರ ಆಕ್ಷೇಪಣೆ ಸಲ್ಲಿಸಲು, ಕಾಲಾವಕಾಶ ನೀಡುವುದಕ್ಕೆ ಕಾರಣಗಳು ಕಾಣುತ್ತಿಲ್ಲ. ಅದಾಗ್ಯೂ ಕೊನೆಯ ಅವಕಾಶವಾಗಿ ಎರಡು ವಾರ ಸಮಯ ಕೊಡಲಾಗುವುದು. ಆದರೆ, ಈವರೆಗೆ ವಿಳಂಬ ಮಾಡಿರುವುದಕ್ಕೆ ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿದ್ದು, ಅದನ್ನು ಅಡ್ವೋಕೇಟ್ ಕ್ಲರ್ಕ್ ಅಸೋಸಿಯೇಷನ್‌ಗೆ ಪಾವತಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿತು.