Hemant Soren, ED, SC Hemant Soren (Facebook)
ಸುದ್ದಿಗಳು

ಮೇ 20ರಂದು ವಿಚಾರಣೆ ನಡೆಸುವ ಬದಲು ನನ್ನ ಅರ್ಜಿ ವಜಾಗೊಳಿಸಿ: ಸುಪ್ರೀಂ ಕೋರ್ಟ್‌ನಲ್ಲಿ ಹೇಮಂತ್ ಸೊರೇನ್‌ ವಾದ

ಜುಲೈ ಇಲ್ಲವೇ ಬೇಸಿಗೆ ರಜೆ ಬಳಿಕ ಪ್ರಕರಣ ಪಟ್ಟಿ ಮಾಡಲು ನ್ಯಾಯಾಲಯ ಒಲವು ವ್ಯಕ್ತಪಡಿಸಿತು. ಆದರೆ ಲೋಕಸಭೆ ಚುನಾವಣೆ ಕಾರಣಕ್ಕೆ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಿ ಎಂದು ಸೊರೇನ್ ಪರ ವಕೀಲರು ಕೋರಿದರು.

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ನೋಟಿಸ್ ಜಾರಿ ಮಾಡಿದೆ [ಹೇಮಂತ್ ಸೊರೆನ್ ಮತ್ತು ಜಾರಿ ನಿರ್ದೇಶನಾಲಯ ಇನ್ನಿತರರ ನಡುವಣ ಪ್ರಕರಣ].

ಮೇ 17ರಂದು ಪ್ರಕರಣದ ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ತಿಳಿಸಿತು. ಇದಕ್ಕೂ ಕೆಲ ಹೊತ್ತಿನ ಮೊದಲು ನ್ಯಾಯಾಲಯ ಜುಲೈ ಇಲ್ಲವೇ ಬೇಸಿಗೆ ರಜೆ ಬಳಿಕ ಪ್ರಕರಣ ಪಟ್ಟಿ ಮಾಡಲು ಒಲವು ವ್ಯಕ್ತಪಡಿಸಿತು. ಆದರೆ ಲೋಕಸಭೆ ಚುನಾವಣೆ ಕಾರಣಕ್ಕೆ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಿ ಎಂದು ಸೊರೇನ್‌ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಕೋರಿದರು.  

ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಲು ನ್ಯಾಯಾಲಯ ನಿರಾಕರಿಸಿದ ಹಿನ್ನೆಲೆಯಲ್ಲಿ ನಿರಾಶೆಯ ಧ್ವನಿಯಲ್ಲಿ ಸಿಬಲ್‌ ಅವರು ಸೊರೇನ್‌ ಅವರ ಅರ್ಜಿ ವಜಾಗೊಳಿಸುವಂತೆ ವಿನಂತಿಸಿದರು.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡಿದ್ದನ್ನು ಪ್ರಸ್ತಾಪಿಸಿದ ಅವರು ಹಾಗಿದ್ದರೆ ಆ ಅರ್ಜಿಯನ್ನು ವಜಾಗೊಳಿಸಿ. ಅಷ್ಟು ಹೊತ್ತಿಗೆ ಚುನಾವಣೆಯೇ ಮುಗಿದಿರುತ್ತದೆ. ಕೇಜ್ರಿವಾಲ್‌ ಆದೇಶ ಸೊರೇನ್‌ ಅವರಿಗೂ ಅನ್ವಯವಾಗುತ್ತದೆ” ಎಂದರು.  

ಒಂದು ವೇಳೆ ನ್ಯಾಯಾಲಯ ಜುಲೈಗೂ ಮುನ್ನ ಪ್ರಕರಣದ ವಿಚಾರಣೆ ನಡೆಸಲು ಬಯಸದಿದ್ದರೆ ಸೊರೇನ್‌ ಅವರಿಗೆ ಮಧ್ಯಂತರ ಜಾಮೀನು ನೀಡಬಹುದು ಎಂದು ಹೇಳಿದರು. ಆದರೆ ಇ ಡಿ ವಾದ ಆಲಿಸದೆ ಹಾಗೆ ಮಾಡಲಾಗದು ಎಂದು ನ್ಯಾಯಾಲಯ ನುಡಿಯಿತು. ಆಗ ಇ ಡಿ ಉದ್ದೇಶಪೂರ್ವಕವಾಗಿಯೇ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಸಿಬಲ್‌ ವಾದಿಸಿದರು.  

ಪ್ರಕರಣ ಪಟ್ಟಿ ಮಾಡುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮತ್ತು ಸಿಬಲ್‌ ಅವರ ನಡುವೆ ಬಿಸಿ ಚರ್ಚೆಗಳು ನಡೆದು ಒಂದು ಹಂತದಲ್ಲಿ ಸೊರೆನ್‌ ಅವರ ಅರ್ಜಿ ಹಿಂತೆಗೆದುಕೊಳ್ಳುವುದಾಗಿ ಸಿಬಲ್‌ ತಿಳಿಸಿದರು. ಆದರೆ ಪ್ರಕರಣ ಪಟ್ಟಿ ಮಾಡಲು ಕಡಿಮೆ ಸಮಯವನ್ನೇ ನೀಡುತ್ತಿದ್ದೇವೆ ಎಂದು ನ್ಯಾ. ಖನ್ನಾ ಪ್ರತಿಕ್ರಿಯಿಸಿದರು.

ಅಂತಿಮವಾಗಿ, ನ್ಯಾಯಾಲಯ ಮೇ 17 ರಂದು ಪ್ರಕರಣದ ವಿಚಾರಣೆ ನಡೆಸಲು ಸಮ್ಮತಿ ಸೂಚಿಸಿತು.