Justice K Natarajan and Karnataka HC
Justice K Natarajan and Karnataka HC 
ಸುದ್ದಿಗಳು

ಆದಾಯ ಮೀರಿ ಆಸ್ತಿ ಗಳಿಕೆ: ಪಿಐ ಆರೋಪ ಮುಕ್ತ; 4 ವರ್ಷ ಜೈಲು, ₹30 ಲಕ್ಷ ದಂಡದ ಆದೇಶ ರದ್ದುಗೊಳಿಸಿದ ಹೈಕೋರ್ಟ್‌

Bar & Bench

ಆದಾಯ ಮೀರಿ ಆಸ್ತಿಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಆರೋಪ ಪಟ್ಟಿಯನ್ನು ಈಚೆಗೆ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯವು ಪಿಐ ರಾಮಕೃಷ್ಣ ಅವರಿಗೆ ವಿಧಿಸಿದ್ದ 4 ವರ್ಷ ಜೈಲು ಶಿಕ್ಷೆ ಮತ್ತು ₹30 ಲಕ್ಷ ದಂಡದ ಆದೇಶ ರದ್ದಾಗಿದೆ.

ತನ್ನ ವಿರುದ್ಧದ ಆರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಪೊಲೀಸ್ ಇನ್‌ಸ್ಪೆಕ್ಟರ್ ಬಿ ರಾಮಕೃಷ್ಣ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ವಿಚಾರಣಾಧೀನ ನ್ಯಾಯಾಲಯವು ಸೂಕ್ತ ಸಾಕ್ಷ್ಯಾಧಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕಣ್ಮುಚ್ಚಿ ಆರೋಪಪಟ್ಟಿ ಅಂಗೀಕರಿಸಿದೆ. ತನಿಖಾಧಿಕಾರಿಯು ಅರ್ಜಿದಾರರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ” ಎಂದು ಪೀಠ ತಿಳಿಸಿದೆ.

“ವಿಚಾರಣಾಧೀನ ನ್ಯಾಯಾಲಯವು ಆರೋಪಿ ವಿರುದ್ಧ ಒಪ್ಪಬಹುದಾದಂತಹ ದಾಖಲೆ ಪರಿಗಣಿಸಿಲ್ಲ. ತನಿಖಾಧಿಕಾರಿ ಸಲ್ಲಿಸಿರುವ ಆರೋಪ ಪಟ್ಟಿ ಪರಿಗಣಿಸಿ ಆದೇಶ ಮಾಡಲಾಗಿದೆ. ಪೊಲೀಸ್ ಇನ್‌ಸ್ಪೆಕ್ಟರ್ ಅವರ ಪತ್ನಿ ವ್ಯವಹಾರ ನಡೆಸುತ್ತಿದ್ದು, ಪ್ರತ್ಯೇಕವಾಗಿ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಈ ವ್ಯವಹಾರದಿಂದ ಬಂದ ಆದಾಯವನ್ನು ಅರ್ಜಿದಾರರ ಅಕ್ರಮ ಸಂಪಾದನೆ ಎಂಬುದಾಗಿ ಪರಿಗಣಿಸಲಾಗಿದೆ. ಅಷ್ಟೇ ಅಲ್ಲದೆ, ಇನ್ಸ್‌ಪೆಕ್ಟರ್ ಅವರ ಹೂಡಿಕೆ ಮತ್ತು ವೆಚ್ಚಗಳನ್ನು ತನಿಖಾಧಿಕಾರಿಯು ತಪ್ಪಾಗಿ ಲೆಕ್ಕಾಚಾರ ಮಾಡಿದ್ದಾರೆ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಮಧ್ಯೆ, “ಆರೋಪಿಯನ್ನು ಇಲಾಖಾ ತನಿಖೆಯಲ್ಲಿ ನಿರಪರಾಧಿ ಎಂಬುದಾಗಿ ತಿಳಿಸಲಾಗಿದೆ. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಅರ್ಜಿದಾರ ಇನ್‌ಸ್ಪೆಕ್ಟರ್ ಆದಾಯ ₹31.35 ಲಕ್ಷ ಇತ್ತು. ಆದರೆ, ತನಿಖಾಧಿಕಾರಿಯು ಕೇವಲ 20.81 ಲಕ್ಷ ರೂಪಾಯಿ ಎಂಬುದಾಗಿ ಪರಿಗಣಿಸಿದ್ದು, ₹10.5 ಲಕ್ಷವನ್ನು ಹೆಚ್ಚುವರಿ ಆದಾಯ ಎಂಬುದಾಗಿ ಪರಿಗಣಿಸಲಾಗಿದೆ” ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: 1996ರಿಂದ 2008ರವರೆಗಿನ ಅವಧಿಯಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಬಳಿಕ ತನಿಖೆ ನಡೆಸಿ 2009-10ರಲ್ಲಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯವು 2019ರಲ್ಲಿ ಅರ್ಜಿದಾರರನ್ನು ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ದೋಷಿ ಎಂದು ಪರಿಗಣಿಸಿತ್ತು. ಅಲ್ಲದೇ, ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ₹30 ಲಕ್ಷ ದಂಡ ವಿಧಿಸಿತ್ತು.

ಅರ್ಜಿದಾರರನ್ನು ವಕೀಲ ಪರಮೇಶ್ವರ್‌ ಎನ್.‌ ಹೆಗ್ಡೆ ಮತ್ತು ಲೋಕಾಯುಕ್ತ ಪೊಲೀಸರ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ್‌ ಎಸ್‌. ಅರಬಟ್ಟಿ ವಾದಿಸಿದ್ದರು.

B Ramakrishna Vs State of Karnataka.pdf
Preview