D K Shivakumar, CBI and Karnataka HC
D K Shivakumar, CBI and Karnataka HC 
ಸುದ್ದಿಗಳು

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ: ಪ್ರತ್ಯುತ್ತರ ದಾಖಲಿಸಲು ಡಿ ಕೆ ಶಿವಕುಮಾರ್‌ ಪರ ವಕೀಲರಿಗೆ ಅನುಮತಿಸಿದ ಹೈಕೋರ್ಟ್‌

Bar & Bench

ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಸಲ್ಲಿಸಿರುವ ಆಕ್ಷೇಪಣೆಗೆ ಉತ್ತರಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಕಾಲಾವಕಾಶ ನೀಡಿದೆ.

ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನಿಲ್‌ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಡಿ ಕೆ ಶಿವಕುಮಾರ್ ಅವರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಸಿ ಎಚ್‌ ಜಾಧವ್‌ ಅವರು “ಸಿಬಿಐ ಆಕ್ಷೇಪಣೆ ಸಲ್ಲಿಸಿದೆ. ಅದಕ್ಕೆ ಪ್ರತ್ಯುತ್ತರ ದಾಖಲಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ಇದನ್ನು ಪುರಸ್ಕರಿಸಿದ ಪೀಠವು ಅರ್ಜಿ ಕುರಿತು ಸಿಬಿಐ ಸಲ್ಲಿಸಿರುವ ಆಕ್ಷೇಪಣೆಗೆ ಪ್ರತಿ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರಿಗೆ ಕಾಲಾವಕಾಶ ನೀಡಿ ವಿಚಾರಣೆಯನ್ನು ದಸರಾ ರಜೆಯ ನಂತರಕ್ಕೆ ಮುಂದೂಡಿತು.

2013ರ ಏಪ್ರಿಲ್‌ 1ರಿಂದ 2018ರ ಏಪ್ರಿಲ್‌ 30ರವರೆಗಿನ ಆದಾಯ ಪರಿಶೀಲನಾ ಅವಧಿಗೂ ಮುನ್ನ ಡಿ.ಕೆ.ಶಿವಕುಮಾರ್ ಅವರ ಸ್ಥಿರ ಮತ್ತು ಚರಾಸ್ತಿಯ ಒಟ್ಟು ಮೊತ್ತ 33.92 ಕೋಟಿ ರೂಪಾಯಿ ಆಗಿತ್ತು. ಪರಿಶೀಲನಾ ಅವಧಿಯಲ್ಲಿ ಈ ಮೊತ್ತ 128.60 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಆದಾಯ ಹೆಚ್ಚಳಕ್ಕೆ ಡಿ ಕೆ ಶಿವಕುಮಾರ್ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ ಎನ್ನುವುದು ಸಿಬಿಐ ಆರೋಪವಾಗಿದೆ.

ಸಾರ್ವಜನಿಕ ಸೇವಕರಾಗಿರುವ ಡಿ ಕೆ ಶಿವಕುಮಾರ್‌ ಅವರು 1989ರಿಂದ ಒಟ್ಟು 7 ಬಾರಿ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರ ವಿರುದ್ಧ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಕುರಿತು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್ ದಾಖಲಿಸುವಾಗ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಾಥಮಿಕ ತನಿಖೆಯ ಅಂಶಗಳ ಬಗ್ಗೆಯೂ ಎಫ್‌ಐಆರ್‌ನಲ್ಲಿ ವಿವರಿಸಿಲ್ಲ. ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಅರ್ಜಿದಾರರಿಗೆ ರಿಯಲ್ ಎಸ್ಟೇಟ್, ಶಿಕ್ಷಣ ಕೇತ್ರ ಸೇರಿ ಹಲವು ವ್ಯವಹಾರಗಳ ಮೂಲಕವೂ ಆದಾಯ ಬರುತ್ತಿದೆ. ಭ್ರಷ್ಟಾಚಾರ ನಿಯಂತ್ರಣ ತಡೆ ಕಾಯಿದೆ ಅನುಸಾರ ಸಾರ್ವಜನಿಕ ಸೇವಕರ ವಿರುದ್ಧ ಮಾತ್ರ ತನಿಖೆ ನಡೆಸಬೇಕಿದೆ. ಆದರೆ, ಅರ್ಜಿದಾರರ ಕುಟುಂಬ ಸದಸ್ಯರ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿದೆ. ಇದು ಕಾನೂನು ಬಾಹಿರ ಕ್ರಮವಾಗಿದೆ. ಆದ್ದರಿಂದ, ಸಿಬಿಐ ದಾಖಲಿಸಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.