ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿರುವ ವಸತಿ ಸಚಿವ ವಿ ಸೋಮಣ್ಣ ಅವರ ನಿರೀಕ್ಷಣಾ ಜಾಮೀನು ಮನವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ದೂರುದಾರ ಬೆಂಗಳೂರಿನ ಮೂಡಲಪಾಳ್ಯದ ರಾಮಕೃಷ್ಣ ಅವರಿಗೆ ಆಕ್ಷೇಪಣೆ ಸಲ್ಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರ ಸೂಚಿಸಿದೆ.
ಸಚಿವ ಸೋಮಣ್ಣ ಅವರ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆ ನಡೆಸಿದ 110ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಹಾಗೂ ಹಾಲಿ ಮತ್ತು ಮಾಜಿ ಶಾಸಕ ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವುದಕ್ಕಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಿ ಜಯಂತ್ ಕುಮಾರ್ ಅವರು ಆಕ್ಷೇಪಣೆ ಸಲ್ಲಿಸುವಂತೆ ದೂರುದಾರರಿಗೆ ಸೂಚಿಸಿದ್ದು, ವಿಚಾರಣೆಯನ್ನು ಮಾರ್ಚ್ 30ಕ್ಕೆ ಮುಂದೂಡಿದರು. ಕಳೆದ ಶುಕ್ರವಾರ ವಕಾಲತ್ತು ಹಾಕಲು ದೂರುದಾರ ರಾಮಕೃಷ್ಣ ಅವರಿಗೆ ಪೀಠವು ಸೂಚನೆ ನೀಡಿತ್ತು.
ಸೋಮಣ್ಣ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ (ಎಸಿಬಿ) ಸಲ್ಲಿಸಿರುವ ಬಿ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಳೆದ ಸೋಮವಾರ ತಿರಸ್ಕರಿಸಿದ್ದು, ಅವರ ವಿರುದ್ಧ ವಿಶೇಷ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮಹತ್ವದ ಆದೇಶ ಮಾಡಿತ್ತು. ಅಲ್ಲದೇ, ಏಪ್ರಿಲ್ 16ರಂದು ಖುದ್ದು ಹಾಜರಾಗುವಂತೆ ಸಚಿವ ಸೋಮಣ್ಣ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಸೋಮಣ್ಣ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಸೆಕ್ಷನ್ 13(1)(ಬಿ) (ಡಿ) ಮತ್ತು (ಇ) ಜೊತೆಗೆ ಸೆಕ್ಷನ್ 13(2)ರ ಅಡಿ ಪ್ರಕರಣ ದಾಖಲಿಸಲು ನ್ಯಾಯಾಲಯವು ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೋಮಣ್ಣ ನಿರೀಕ್ಷಣಾ ಜಾಮೀನು ಕೋರಿದ್ದಾರೆ.
ಬೆಂಗಳೂರಿನ ಜನತಾ ಬಜಾರ್‌ನಲ್ಲಿ 1974ರಲ್ಲಿ ಮಾರಾಟ ಸಹಾಯಕನಾಗಿ ಕೆಲಸಕ್ಕೆ ಸೇರಿದಾಗ ಸೋಮಣ್ಣ ಅವರ ಮಾಸಿಕ ಸಂಬಳವು 231 ರೂಪಾಯಿಗಳಾಗಿತ್ತು. ಒಟ್ಟು ಹತ್ತು ವರ್ಷದ ಅವಧಿಯಲ್ಲಿ ಸೋಮಣ್ಣ ಅವರ ಆದಾಯವು ₹15,330 ಆಗಿತ್ತು. ನಗರಸಭೆ ಸದಸ್ಯರಾಗಿದ್ದ ಹತ್ತು ವರ್ಷಗಳ ಅವಧಿಯಲ್ಲಿ ಅವರ ಒಟ್ಟು ಆದಾಯವು ಭತ್ಯೆ ಸಹಿತ ₹71,437 ಆಗಿತ್ತು. ಕರ್ನಾಟಕ ಲೋಕಾಯುಕ್ತ ಕಾಯಿದೆ ಅಡಿ ಅವರು ಸ್ವಯಂ ಘೋಷಣೆ ಮಾಡಿಕೊಂಡಿರುವಂತೆ 1993-94 ರಿಂದ 2009-10ರ ಅವಧಿಯಲ್ಲಿ ಅವರ ಆಸ್ತಿಯು ₹18,49,89,441 ಆಗಿದೆ. ಸುಮಾರು ₹12.42 ಕೋಟಿ ಅಕ್ರಮ ಆಸ್ತಿ ಕಂಡುಬಂದಿದೆ. ಈ ಅಕ್ರಮ ಆಸ್ತಿಯ ಪ್ರಮಾಣ ಶೇ. 204 ಆಗಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ.