City civil court, Bengaluru 
ಸುದ್ದಿಗಳು

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಕರ ನಿರ್ಧಾರಕನಿಗೆ ₹40 ಲಕ್ಷ ದಂಡ, 4 ವರ್ಷ ಜೈಲು ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ

ಆರೋಪಿಯು ಪರಿಶೀಲನಾ ಸಂದರ್ಭದಲ್ಲಿ ಗಳಿಸಿದ ಆದಾಯ ₹63,15,141, ಅಕ್ರಮ ಆಸ್ತಿ ಗಳಿಕೆ ₹38,96,310. ಅಂದರೆ ಶೇ. 61.69ರಷ್ಟು ಅಕ್ರಮ ಆಸ್ತಿ ಗಳಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

Bar & Bench

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕರ ನಿರ್ಧಾರಕರೊಬ್ಬರನ್ನು (ಅಸೆಸರ್) ದೋಷಿ ಎಂದು ಆದೇಶ ಮಾಡಿರುವ ವಿಶೇಷ ನ್ಯಾಯಾಲಯವು ಅವರಿಗೆ ₹40 ಲಕ್ಷ ದಂಡ ಹಾಗೂ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 13(1)(ಇ) ಮತ್ತು 13(2) ಅಡಿ ಆರ್‌ ಪ್ರಸನ್ನಕುಮಾರ್‌ ಅವರಿಗೆ ₹40 ಲಕ್ಷ ದಂಡ ಮತ್ತು ನಾಲ್ಕು ವರ್ಷ ಶಿಕ್ಷೆ ವಿಧಿಸಲಾಗಿದೆ. ದಂಡದ ಮೊತ್ತ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ನಾಲ್ಕು ತಿಂಗಳು ಶಿಕ್ಷೆ ಅನುಭವಿಸಬೇಕು ಎಂದು ವಿಶೇಷ ನ್ಯಾಯಾಧೀಶರಾದ ಕೆ ಲಕ್ಷ್ಮಿನಾರಾಯಣ ಭಟ್‌ ಅವರು ಆದೇಶ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ: 1994ರ ಅಕ್ಟೋಬರ್‌ 20ರಂದು ಪ್ರಸನ್ನಕುಮಾರ್‌ ಅವರು ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿಯ ಕಚೇರಿಯಲ್ಲಿ ಮೌಲ್ಯ ನಿರ್ಧಾರ ಅಧಿಕಾರಿಯಾಗಿ (ಅಸಸರ್‌) ನೇಮಕವಾಗಿದ್ದರು. ಅಕ್ರಮ ಆಸ್ತಿ ಗಳಿಕೆ ಮಾಹಿತಿ ಆಧರಿಸಿ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿ, 2013ರ ಡಿಸೆಂಬರ್‌ 12ರಂದು ಅವರ ಮನೆಯ ಮೇಲೆ ದಾಳಿ ನಡೆಸಿದ್ದರು. 1998ರ ಅಕ್ಟೋಬರ್‌ 21ರಿಂದ 2013 ಡಿಸೆಂಬರ್‌ 20ರ ನಡುವೆ ಆರೋಪಿಯು ಅಕ್ರಮವಾಗಿ ₹26.39 ಲಕ್ಷ (ಶೇ 31.71) ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಆರೋಪಿಯ ವಿರುದ್ಧ ಆರೋಪ ಪಟ್ಟಿ ದಾಖಲಿಸಿತ್ತು.

ಪರಿಶೀಲನಾ ಅವಧಿಯಲ್ಲಿ ಆರೋಪಿಯ ಬಳಿ ಸ್ಥಿರಚರಾಸ್ತಿ ₹62,58,724 ಇದ್ದು, ಇದೇ ಅವಧಿಯಲ್ಲಿ ₹39,52,727 ವೆಚ್ಚ ಮಾಡಲಾಗಿದೆ. ಒಟ್ಟು ಆಸ್ತಿ ಮತ್ತು ವೆಚ್ಚವು ₹1,02,11,451 ಆಗಿದೆ. ಪರಿಶೀಲನಾ ಅವಧಿಯಲ್ಲಿ ಆರೋಪಿಯು ಗಳಿಸಿದ ಆದಾಯ ₹63,15,141, ಅಕ್ರಮ ಆಸ್ತಿ ಗಳಿಕೆ ₹38,96,310. ಅಂದರೆ ಶೇ. 61.69ರಷ್ಟು ಅಕ್ರಮ ಆಸ್ತಿ ಗಳಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.