City civil court, Bengaluru 
ಸುದ್ದಿಗಳು

ಅಕ್ರಮ ಆಸ್ತಿ ಸಂಪಾದನೆ: ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿಗೆ 4 ವರ್ಷ ಜೈಲು, ₹1 ಕೋಟಿ ದಂಡ ವಿಧಿಸಿದ ವಿಶೇಷ ನ್ಯಾಯಾಲಯ

2007ರ ನವೆಂಬರ್‌ 3ರಂದು ದಾಳಿ ನಡೆಸಿದ್ದಾಗ 40,60,324 ರೂಪಾಯಿ ಅಂದರೆ ಶೇ. 53.58ರಷ್ಟು ಹೆಚ್ಚುವರಿ ಸಂಪತ್ತು ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ನೀಡಲು ಆರೋಪಿತ ಅಧಿಕಾರಿ ವಿಫಲವಾಗಿದ್ದರು.

Bar & Bench

“ಇತರರಿಗೆ ಕಾವಲುಗಾರರಾಗಬೇಕಾದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಅವರನ್ನು ಮತ್ತೊಬ್ಬರು ಕಾವಲು ಕಾಯುವಂತಾಗಬೇಕಾಗಿ ಬಂದಿರುವುದು” ದುರದೃಷ್ಟಕರ ಎಂದಿರುವ ವಿಶೇಷ ನ್ಯಾಯಾಲಯವು ಅಕ್ರಮ ಆಸ್ತಿ ಸಂಪಾದನೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬೆಂಗಳೂರಿನ ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿ ಒಬ್ಬರಿಗೆ ಈಚೆಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು ಭರ್ತಿ ಒಂದು ಕೋಟಿ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

ಬೆಂಗಳೂರಿನ ಯಲಹಂಕದ ಸಶಸ್ತ್ರ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನಿವೃತ್ತಿ ಹೊಂದಿರುವ ರಾಜಾಜಿನಗರದ ನಿವಾಸಿ ಸಿ ಎ ಶ್ರೀನಿವಾಸ ಅಯ್ಯರ್‌ ಅವರನ್ನು ದೋಷಿ ಎಂದು ತೀರ್ಮಾನಿಸಿರುವ 78ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಧೀಶ ಎಸ್‌ ವಿ ಶ್ರೀಕಾಂತ್‌ ಅವರು ದುಬಾರಿ ದಂಡ ವಿಧಿಸಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 13(1)(ಇ) ಜೊತೆಗೆ 13(2)ರ ಅಡಿ ಅಪರಾಧ ಸಾಬೀತಾಗಿರುವುದರಿಂದ ಆರೋಪಿಗೆ ನಾಲ್ಕು ವರ್ಷ ಜೈಲು ಜೊತೆಗೆ ಒಂದು ಕೋಟಿ ರೂಪಾಯಿ ದಂಡ ವಿಧಿಸಿದೆ. ದಂಡದ ಹಣ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಎರಡು ವರ್ಷ ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಅಕ್ರಮ ಆಸ್ತಿ ಸಂಪಾದನೆಯು ಹಲವು ಲಕ್ಷಗಳಲ್ಲಿದ್ದು, ಸರ್ಕಾರಿ ಕಚೇರಿಯನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುತ್ತದೆ. ವ್ಯಕ್ತಿಯನ್ನು ಪಿಎಸ್‌ಐ ಆಗಿ ನೇಮಕ ಮಾಡಿದಾಗ ಕಾನೂನಿನ ಪ್ರಕಾರ ಕೆಲಸ ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಅಪಾರ ಜವಾಬ್ದಾರಿ ಇರುತ್ತದೆ. ಆರೋಪಿಗೆ ಕಾವಲುಗಾರನ ಜವಾಬ್ದಾರಿ ನೀಡಿ, ತರಬೇತಿ ಸಂಸ್ಥೆಗೆ ನೇಮಕ ಮಾಡಿದಾಗ ಅತ್ಯಂತ ಎಚ್ಚರಿಕೆಯಿಂದ ಯುವಕರಿಗೆ ಮಾದರಿಯಾಗುವ ಕೆಲಸ ಮಾಡಬೇಕಿತ್ತು. ಆದರೆ, ಆರೋಪಿತ ಅಧಿಕಾರಿಯು ವೈಯಕ್ತಿಕವಾಗಿ ಕಟ್ಟಡ ನಿರ್ಮಾಣ ಕಾಮಗಾರಿ, ಕೃಷಿ ಚಟುವಟಿಕೆ, ಇತರೆ ಗೃಹ ಕೃತ್ಯಗಳನ್ನು ತಾವೇ ಮೇಲ್ವಿಚಾರಣೆ ಮಾಡಿರುವುದರಿಂದ ಅಧಿಕೃತ ಕೆಲಸ ಮಾಡಲು ಅವರಿಗೆ ಎಲ್ಲಿ ಸಮಯ ಇತ್ತು ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆ ಎದ್ದಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದು ಅಶಿಸ್ತು ಮತ್ತು ದುರ್ನಡತೆಯ ವಿಚಾರವಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಪಿಎಸ್‌ಐ ನೇಮಕವಾಗಿದ್ದ ಅಯ್ಯರ್‌ ಅವರು ನಿವೃತ್ತಿಯಾದಾಗ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದರು.

ಪ್ರಕರಣದ ಹಿನ್ನೆಲೆ: 01-01-1987 ರಿಂದ 03-11-2007ರ ವರೆಗೆ ಸರ್ಕಾರಿ ಅಧಿಕಾರಿಯಾಗಿದ್ದ ಅಯ್ಯರ್‌ ಅವರು ಎಸಿಬಿ ದಾಳಿ ನಡೆದಾಗ ಸಶಸ್ತ್ರ ಪೊಲೀಸ್‌ ತರಬೇತಿ ಶಾಲೆಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದರು. ಅಧಿಕಾರಿಯ ಸಂಪನ್ಮೂಲ/ಆಸ್ತಿಯು 81,02,997 ರೂಪಾಯಿ ಆಗಿತ್ತು. ಕುಟುಂಬದ ವೆಚ್ಚವು 34,44,798 ರೂಪಾಯಿ ಆಗಿತ್ತು. ನಿರ್ದಿಷ್ಟ ಮೂಲದಿಂದ 75,77,471 ಆದಾಯ ಬರುತ್ತಿತ್ತು. 2007ರ ನವೆಂಬರ್‌ 3ರಂದು ದಾಳಿ ನಡೆಸಿದ್ದಾಗ 40,60,324 ರೂಪಾಯಿ ಅಂದರೆ ಶೇ. 53.58ರಷ್ಟು ಹೆಚ್ಚುವರಿ ಸಂಪತ್ತು ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ನೀಡಲು ಆರೋಪಿತ ಅಧಿಕಾರಿ ವಿಫಲವಾಗಿದ್ದರು. ಹೀಗಾಗಿ, ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಪ್ರಕರಣ ದಾಖಲಾಗಿತ್ತು. ಅಯ್ಯರ್‌ ಅವರನ್ನು ವಕೀಲ ಶಂಕರ್‌ ಪುರಂದರ್‌ ಹೆಗ್ಡೆ ಪ್ರತಿನಿಧಿಸಿದ್ದರು.